Site icon Vistara News

PSI Scam | 1,974 ಪುಟಗಳ ಚಾರ್ಜ್‌ಶೀಟ್​ ಸಲ್ಲಿಕೆ: ದಿವ್ಯಾ ಹಾಗರಗಿ ಡೀಲ್‌ ಮಾಹಿತಿ ಬಹಿರಂಗ

divya hagaragi

ಬೆಂಗಳೂರು: ರಾಜ್ಯದಲ್ಲಿಯೇ ಭಾರಿ ಸಂಚಲನ ಮೂಡಿಸಿರುವ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 1974 ಪುಟಗಳ ಆರೋಪಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಈ ಕುರಿತ ಮಾಹಿತಿ ಲಭ್ಯವಾಗಿದ್ದು, ಆರೋಪಿ ದಿವ್ಯಾ ಹಾಗರಗಿ ಕುರಿತು ಕುತೂಹಲಕರ ವಿಚಾರಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದ ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದ್ದಾರೆ. ಕಲಬುರಗಿ ನಗರದ 11 ಪರೀಕ್ಷಾ ಕೇಂದ್ರದಲ್ಲಿ ಪಿಎಸ್​ಐ ನೇಮಕಾತಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಮೂರು ಪರೀಕ್ಷಾ ಕೇಂದ್ರದಲ್ಲಿ ಅಕ್ರಮವಾಗಿ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲೂ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಹೆಚ್ಚಾಗಿ ಅಕ್ರಮ ನಡೆಸಲಾಗಿರುವುದು ತನಿಖೆ ವೇಳೆ ತಿಳಿದು ಬಂದಿತ್ತು. ಈ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಬಿಜೆಪಿ ನಾಯಕಿ ದಿವ್ಯಾ ಹಾಗರಿಗೆ ಸೇರಿದ್ದು.

ಚಾರ್ಜ್‌ಶೀಟ್​ನಲ್ಲಿರುವ ಮಹತ್ವದ ಅಂಶಗಳೇನು?

ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಮತ್ತು ಮಂಜುನಾಥ್ ಮೇಳಕುಂದಿ ಪರಿಚಿತರು. ಪಿಎಸ್ಐ ನೇಮಕಾತಿ ಪರೀಕ್ಷೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಕ್ರಿಯಾಶೀಲರಾದ ಮಂಜುನಾಥ್ ಮೇಳಕುಂದಿ, ಪರೀಕ್ಷೆಗೂ ಕೆಲ ದಿನಗಳ ಮುಂಚೆಯೇ ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಹಾಗರಗಿ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದ.

ದಿವ್ಯಾ ಹಾಗರಗಿ ಮತ್ತು ಮಂಜುನಾಥ್ ಮೆಳಕುಂದಿ ಸಂಭಾಷಣೆ

ಮಂಜುನಾಥ್ ಮೇಳಕುಂದಿ : ಅಕ್ಕ ನಿಮ್ಮ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಕ್ಕಿರುವ ಅಭ್ಯರ್ಥಿಗಳು ನನ್ನ ಸಂಪರ್ಕದಲ್ಲಿದ್ದಾರೆ. ಪರೀಕ್ಷೆಯ ದಿನ ನೀವು ಮತ್ತು ಪರಿವೀಕ್ಷಕರಾಗಿ ಕೆಲಸ‌ ಮಾಡುವ ಶಿಕ್ಷಕಿಯರು ಸೇರಿ ಪರೀಕ್ಷೆಯಲ್ಲಿ ಸಹಾಯ ಮಾಡಬೇಕು. ಸಹಾಯ ಮಾಡಿದರೆ ನೀವು ಕೇಳಿದಷ್ಟು ದುಡ್ಡು ಕೊಡುತ್ತೇನೆ. ಇದರಿಂದ ಅಭ್ಯರ್ಥಿಗಳಿಗೂ ಸಹಾಯ ಮಾಡಿದ ಹಾಗೆ ಆಗುತ್ತದೆ ಅಕ್ಕ. ಇದರ ಮೂಲಕ ನಾವು ಕೋಟ್ಯಾಂತರ ರೂಪಾಯಿ ಹಣವನ್ನ ಸುಲಭವಾಗಿ ಗಳಿಸಬಹುದು.

ದಿವ್ಯಾ ಹಾಗರಗಿ : ಹಣ ಬಂದರೆ ಒಳ್ಳೆಯದೆ ಮಂಜು. ಆದರೆ ಅಭ್ಯರ್ಥಿಗಳಿಗೆ ನಾನು ಹೇಗೆ ಸಹಾಯ ಮಾಡಬೇಕು ಗೊತ್ತಾಗುತ್ತಿಲ್ಲ. ನಮ್ಮ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಅವರನ್ನು ಕರೆಯುತ್ತೇನೆ. ಅವರು ಬಂದ ಮೇಲೆ ಅವರ ಚರ್ಚೆ ಮಾಡೋಣ. ಅವರು ಒಕೆ ಎಂದರೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ( ಹೀಗೆ ಹೇಳಿ ಕೂಡಲೇ ಕಾಶಿನಾಥ್​ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾರೆ).

ಬಳಿಕ ಮೂವರೂ ಅಕ್ರಮ ಎಸಗುವುದರ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಹೆಡ್ ಮಾಸ್ಟರ್ ಕಾಶಿನಾಥ್​, ಶಾಲೆಯ ಶಿಕ್ಷಕರನ್ನು ಬಳಸಿಕೊಂಡು ಅಕ್ರಮ ನಡೆಸಬಹುದು ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ ದಿವ್ಯಾ ಹಾಗರಗಿ ಮತ್ತು ಮಂಜುನಾಥ್ ಮೇಳಕುಂದಿ ಬಳಿಕ ಪ್ರತಿಯೊಬ್ಬ ಅಭ್ಯರ್ಥಿಯಿಂದ 30 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಮಂಜುನಾಥ್ ಮಾತನಾಡಿ, 30 ಲಕ್ಷ ರೂ. ಆಗುವುದಿಲ್ಲ. 25 ಲಕ್ಷ ರೂ. ಕೊಡುತ್ತೇನೆ ಎಂದು ನಿಗದಿ​ ಮಾಡಿಸಿದ್ದಾರೆ.

ಪಿಎಸ್​ಐ ಪರೀಕ್ಷಾ ದಿನ ಅಕ್ರಮ

ಪರೀಕ್ಷಾ ದಿನ ಪೇಪರ್​-2 ಪ್ರಶ್ನೆ ಪತ್ರಿಕೆಯ ABCD ಸೀರಿಸ್ ಪೋಟೊ ತೆಗೆದು ಮಂಜುನಾಥ್ ಮೇಳಕುಂದಿಗೆ‌ ವಾಟ್ಸ್‌ಆ್ಯಪ್ ಮೂಲಕ ಕಾಶಿನಾಥ್ ಕಳುಹಿಸಿದ್ದ. ಇದಕ್ಕೆ ಮಂಜುನಾಥ್​ ಸೀರಿಸ್‌ವಾರು ಉತ್ತರ ಸಿದ್ಧಪಡಿಸಿದ್ದ. ಬಳಿಕ ಮಂಜುನಾಥ್​ ಅಭ್ಯರ್ಥಿಗಳ ರೋಲ್‌ ನಂಬರ್ ಬರೆದು ಪೋಟೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಾಶಿನಾಥ್​ಗೆ ಕಳುಹಿಸಿದ್ದ. ಪರೀಕ್ಷೆ ಮುಗಿದ ಮೇಲೆ ಮೇಳಕುಂದಿ ಅಭ್ಯರ್ಥಿಗಳ ಒಎಂಆರ್‌ ಉತ್ತರ ಪತ್ರಿಕೆಗಳಲ್ಲಿ ಖಾಲಿ ಬಿಟ್ಟಿರುವ ಉತ್ತರಗಳನ್ನು ಭರ್ತಿ ಮಾಡಬೇಕು ಎಂದು ಪರಿವೀಕ್ಷಕರಿಗೆ ತಿಳಿಸಿದ್ದ. 4.30ಕ್ಕೆ ಪರೀಕ್ಷೆ ಮುಗಿದ ಮೇಲೆ ಸಿಸಿಟಿವಿಯಲ್ಲಿ ಕಾಣಿಸಿಕೊಳ್ಳದಂತೆ ಉತ್ತರಗಳನ್ನು ಪರೀವಿಕ್ಷಕರು ಭರ್ತಿ ಮಾಡಿದ್ದರು.

ಪರೀಕ್ಷೆಯ ಹಿಂದಿನ ದಿನ ಮೇಳಕುಂದಿ ದಿವ್ಯಾ ಹಾಗರಗಿಗೆ ಮುಂಗಡವಾಗಿ 25 ಲಕ್ಷ ರೂ. ನೀಡಿದ್ದ. ಜ್ಞಾನಜ್ಯೋತಿ ಶಾಲೆಯ ಪ್ರಿನ್ಸಿಪಾಲ್‌ ಎಂದು ಮೇಳಕುಂದಿಯನ್ನು ದಿವ್ಯಾ ಪರಿಚಯಿಸಿದ್ದಳು. ಬೆಳ್ಳಗ್ಗೆ ಪೇಪರ್ 1 ಪರೀಕ್ಷೆ ಮುಗಿದ ಬಳಿಕ ದಿವ್ಯಾ ಪರೀಕ್ಷಾ ಕರ್ತವ್ಯ ನಿರ್ವಹಿಸಲು ಬಂದಿರುವ ಸಿಬ್ಬಂದಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಿಸಿದ್ದಳು.

ಪರಿವೀಕ್ಷಕರಾಗಿ ಬಂದ ಜ್ಞಾನಜ್ಯೋತಿ ಶಾಲೆಯ ಸಾವಿತ್ರಿ , ಕಾಬಾ, ಸುಮಾ ಕಂಬಾಳಿಮಠ, ಸಿದ್ದಮ್ಮ ಬಿರಾದರ್, ಅರ್ಚನಾ ಹೊನಗೇರಿ, ಸುನಂದಾ ಅವರಿಗೆ ಹಣದ ಆಸೆ ತೋರಿಸಿ ಅಕ್ರಮವಾಗಿ ಉತ್ತರ ಭರ್ತಿ ಮಾಡಿಸಿದ್ದರು. ಪರೀಕ್ಷೆ ನಡೆದ ರಾತ್ರಿ ದಿವ್ಯಾಗೆ ಮಂಜುನಾಥ್‌ 23 ಲಕ್ಷ ರೂ. ನೀಡಿದ್ದ. ಅಕ್ರಮಕ್ಕೆ ಸಾಥ್ ನೀಡಿದ ಸಿಪಿಐ ಆನಂದ್ ಮೇತ್ರಿಗೆ ಮೂರು ಲಕ್ಷ ರೂ., ಒಎಂಆರ್ ಶೀಟ್​ ಭರ್ತಿ ಮಾಡಿದ ಶಿಕ್ಷಕರಿಗೆ ತಲಾ ನಾಲ್ಕು ಸಾವಿರ ರೂ.ನಂತೆ ಕಾಶಿನಾಥ್‌ ನೀಡಿದ್ದ.

ಪರೀಕ್ಷೆಯಲ್ಲಿ ಮಂಜುನಾಥ್ ಮೇಳಕುಂದಿ ಐದು ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದುಪಡಿಯ ಮೂಲಕ ಭರ್ತಿ ಮಾಡಿಸಿದ್ದರು. 2021ರ ಜನವರಿ 19ರಂದು ಸರ್ಕಾರ ಹೊರಡಿಸಿದ ಆಯ್ಕೆ ಪಟ್ಟಿಯಲ್ಲಿ ಇವರೆಲ್ಲರೂ ಆಯ್ಕೆಯಾಗಿದ್ದರು.

ಸದ್ಯ ಈ ಹಗರಣ ಹೊರಗೆ ಬರುತ್ತಿದ್ದಂತೆ ಅರ್ಚನಾ , ಸುನಂದಾ ಜತೆಗೆ ಮಹಾರಾಷ್ಟ್ರಕ್ಕೆ ಹೋಗಲು ದಿವ್ಯಾ ಮುಂದಾಗಿದ್ದರು. ಆದರೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಏಪ್ರಿಲ್​ನಲ್ಲಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದರು.

ಆಯ್ಕೆಯಾದ ಅಭ್ಯರ್ಥಿಗಳು ಮೊದಲ ಪೇಪರ್ ಮತ್ತು 2ನೇ ಪೇಪರ್​ನಲ್ಲಿ ಪಡೆದ ಮಾರ್ಕ್ಸ್ ಗಳು

ಅಭ್ಯರ್ಥಿಗಳು            ಪೇಪರ್ 1           ಪೇಪರ್ 2

ವೀರೇಶ್                   32                121.875

ನಂದಗಾಂವ್ ಚೇತನ್   31.5               127.5

ಪ್ರವೀಣ್ ಕುಮಾರ್        29.5              121.875

ಅರುಣ್ ಕುಮಾರ್         21                 126

ಶಾಂತಿಬಾಯಿ              26                101.25

Exit mobile version