ಬೆಂಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ತಮ್ಮ ಮೇಲಿನ ಆರೋಪ ಸಾಬೀತಾಗಬಾರದು ಎಂದು ಮೊಬೈಲ್ ದತ್ತಾಂಶವನ್ನು ಅಳಿಸಿಹಾಕಿದ್ದಾರೆ. ಈ ವಿಚಾರವನ್ನು ಸ್ವತಃ ಸಿಐಡಿ, ಬುಧವಾರ ನ್ಯಾಯಾಲಯಕ್ಕೆ ತಿಳಿಸಿದೆ.
ಪಿಎಸ್‌ಐ ಹಗರಣದಲ್ಲಿ ಬಂಧಿತರಾದ ಅಮೃತ್ ಪಾಲ್ 10 ದಿನದ ವಿಚಾರಣೆ ಅವಧಿ ಬುಧವಾರ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವಧಿ ವಿಸ್ತರಣೆ ಮಾಡುವಂತೆ ಸಿಐಡಿ ವತಿಯಿಂದ ಮನವಿ ಮಾಡಲಾಯಿತು.
ಈ ಕುರಿತು ವಾದ ಮಂಡಿಸಿದ ಸಿಐಡಿ ಪರ ವಕೀಲರು, ಈಗಾಗಲೆ ಅಮೃತ್ ಪಾಲ್ ಮೊಬೈಲ್ ಜಪ್ತಿ ಮಾಡಲಾಗಿದೆ. ಆದರೆ ಹತ್ತು ದಿನಗಳಿಂದ ಪಾಸ್‌ವರ್ಡ್ ನೀಡಿರಲಿಲ್ಲ. ಇದೀಗ ಹತ್ತನೇ ದಿನ ಪಾಸ್‌ವರ್ಡ್ ನೀಡಿದ್ದಾರೆ. ಆದರೆ ಮೊಬೈಲ್ ಅನ್ನು ಅಮೃತ್ ಪಾಲ್ ಫಾರ್ಮ್ಯಾಟ್ ಮಾಡಿದ್ದಾರೆ. ಅದರಲ್ಲಿರುವ ಎಲ್ಲ ದತ್ತಾಂಶಗಳನ್ನೂ ಅಳಿಸಿಹಾಕಿದ್ದಾರೆ. ಈ ದತ್ತಾಂಶವನ್ನು ಪುನಃ ಪಡೆಯಬೇಕಿದೆ. ಈ ದತ್ತಾಂಶ ಮೊಬೈಲ್‌ನಲ್ಲಿ ಇಲ್ಲವಾದರೂ ಕ್ಲೌಡ್‌ನಲ್ಲಿ ಸೇವ್ ಆಗಿರುವ ಸಾಧ್ಯತೆ ಇರುತ್ತದೆ. ಅಲ್ಲಿಂದ ರಿಕವರಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | PSI Scam | ಅಧಿಕಾರಿಗಳ ಭಂಡತನಕ್ಕೆ ಪೆಟ್ಟು; ಎಡಿಜಿಪಿ ಅಮೃತ್ ಪಾಲ್ ಬಂಧನಕ್ಕೆ ಈ ಅಂಶಗಳು ಮುಳುವಾಯ್ತೇ?
ಈಗಾಗಲೆ ಬಂಧನವಾಗಿರುವ ಶಾಂತಕುಮಾರ್ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಅದರ ಕುರಿತೂ ಅಮೃತ್ ಪಾಲ್ ಅವರಿಂದ ಮಾಹಿತಿ ಪಡೆಯಬೇಕಿದೆ. ಹಾಗಾಗಿ ಇನ್ನು ಮೂರು ದಿನ ಅವಧಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಅಮೃತ್ ಪಾಲ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಕಸ್ಟಡಿಗೆ ಪಡೆಯುವ ಸಲುವಾಗಿ ನೀಡಿದ್ದ ಕಾರಣಗಳನ್ನೇ ಈ ಬಾರಿಯೂ ಸಿಐಡಿ ನೀಡುತ್ತಿದೆ. ಫೋನ್ ರಿಕವರಿಗೆ ಕಸ್ಟಡಿ ಬೇಕು ಎಂದು ಈ ಹಿಂದೆ ಹೇಳಿದ್ದರು. ಈಗ ನೋಡಿದರೆ ದತ್ತಾಂಶ ತೆಗೆಯಲು ಕಸ್ಟಡಿ ಬೇಕು ಎನ್ನುತ್ತಿದ್ದಾರೆ. ಅಮೃತ್ ಪಾಲ್ ಎಲ್ಲಿಯೂ ಓಡಿ ಹೋಗಿಲ್ಲ. ಹೀಗಿರುವಾಗ ಅವರನ್ನು ಏತಕ್ಕಾಗಿ ವಶಕ್ಕೆ ನೀಡಬೇಕು? ಎಂದು ಪ್ರಶ್ನಿಸಿದರು.
ತಮ್ಮ ವಾದ ಮುಂದುವರಿಸಿದ ಸಿಐಡಿ ಪರ ವಕೀಲರು, ಸೈಬರ್ ಅಪರಾಧದಂತೆ ಈ ಪ್ರಕರಣವನ್ನು ವಿಚಾರಣೆ ಮಾಡಬೇಕಿದೆ. ಇವರ ಸುಪರ್ದಿಯಲ್ಲಿದ್ದ ಒಎಂಆರ್ ಹಾಳೆಗಳು ಹೊರಕ್ಕೆ ಹೋಗಿದ್ದು ಹೇಗೆ? ಸ್ಟ್ರಾಂಗ್ ರೂಂ ಕೀ ಇವರ ಬಳಿಯೇ ಇದ್ದದ್ದು, ಅನುಮತಿಯಿಲ್ಲದೆ ಬೇರೆಯವರಿಗೆ ಸಿಕ್ಕಿದ್ದು ಹೇಗೆ? ಇದೆಲ್ಲ ವಿಚಾರದಲ್ಲೂ ತನಿಖೆ ನಡೆಸಬೇಕು. ಹೀಗಾಗಿ ಕಸ್ಟಡಿ ಅವಧಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಿಐಡಿ ಪರ ವಕೀಲರ ವಾದವನ್ನು ಮನ್ನಿಸಿದ ನ್ಯಾಯಾಲಯ, ಮೂರು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಿತು. ಕುಟುಂಬದವರನ್ನು ಭೇಟಿಯಾಗಲು ಪ್ರತಿದಿನ 30 ನಿಮಿಷ ಅವಕಾಶ, ಆನ್‌ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಅವಕಾಶವನ್ನು ನೀಡಿತು.
ಇದನ್ನೂ ಓದಿ | PSI Scam | ಅಮೃತ್ ಪಾಲ್ ಡೈರಿ ಸೀಕ್ರೆಟ್: ರಾಜಕಾರಣಿಗಳು, ಅಧಿಕಾರಿಗಳಿಗೆ ನಡುಕ