Site icon Vistara News

PSI scam | ಡೀಲ್‌ ಲೆಕ್ಕದಲ್ಲಿ 00 ಮೈನಸ್‌; ಕೋಡ್‌ ವರ್ಡ್‌ನ ಡಿ-ಕೋಡ್‌ ಮಾಡಿದ ಸಿಐಡಿ

ಅಮೃತ್‌ ಪೌಲ್‌

ಬೆಂಗಳೂರು: ಪಿಎಸ್ಐ ಪರೀಕ್ಷಾ (PSI scam) ನೇಮಕಾತಿ ಅಕ್ರಮ ಜಾಲದಲ್ಲಿ ಬಂಧಿತರಾಗಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಮೃತ್ ಪಾಲ್‌ ಹಾಗೂ ಬೇನಾಮಿ ವ್ಯಕ್ತಿಯಾಗಿದ್ದ ಶಂಭುಲಿಂಗಸ್ವಾಮಿ ನಡುವೆ ಹಣಕಾಸಿನ ವ್ಯವಹಾರದ ಕೋಡ್‌ ಸಂಭಾಷಣೆ ಈಗ ಬಯಲಾಗಿದೆ. ಇಬ್ಬರ ನಡುವೆ ನಡೆಯುತ್ತಿದ್ದ ೨ ಸೊನ್ನೆಗಳ ಮೂಲಕ ಆಟವಾಡುತ್ತಿರವುದನ್ನು ಸಿಐಡಿ ಪೊಲೀಸರು ಡಿಕೋಡ್‌ ಮಾಡಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕಾತಿ ಜಾಲದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 35ನೇ ಆರೋಪಿಯಾಗಿರುವ ಅಮೃತ್ ಪಾಲ್ ವಿರುದ್ಧ 1,406 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಐಡಿ ತಂಡ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅಮೃತ್ ಪಾಲ್ ಎಸಗಿರುವ ಅಕ್ರಮವನ್ನು ಇಂಚಿಂಚು ಮಾಹಿತಿ ಸಂಗ್ರಹಿಸಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಸಿಐಡಿ ಅಧಿಕಾರಿಗಳು, ಅಭ್ಯರ್ಥಿಗಳಿಂದ ಪಡೆದ ಹಣವನ್ನು ಯಾರಿಗೂ ತಿಳಿಯದಂತೆ ವ್ಯವಹಾರ ನಡೆಸಬೇಕು ಎಂಬುದರ ಬಗ್ಗೆ ಸಹಕಾರ ನಗರದ ನಿವಾಸಿ ಉದ್ಯಮಿ ಶಂಭುಲಿಂಗಸ್ವಾಮಿಯೊಂದಿಗೆ ಮಾತುಕತೆ ನಡೆಸಿದ್ದರು‌.

ಇದನ್ನೂ ಓದಿ | Mysore Dasara | ಕಾಡಿನ ಮಕ್ಕಳ ಜತೆ ಹೆಜ್ಜೆ ಹಾಕಿದ ಶಿಕ್ಷಣ ಸಚಿವ ನಾಗೇಶ್‌

ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಿಂದ ಪಡೆದಿದ್ದ ಹಣವನ್ನು ಅಮೃತ್‌ ಪಾಲ್ ನೇರವಾಗಿ ತೆಗೆದುಕೊಳ್ಳದೆ ಶಂಭುಲಿಂಗ ಮೂಲಕ ವ್ಯವಹರಿಸುತ್ತಿದ್ದರು ಎನ್ನಲಾಗಿದೆ. ಹಲವು ಅಭ್ಯರ್ಥಿಗಳಿಂದ 1.41 ಕೋಟಿ ರೂಪಾಯಿ ಹಣವನ್ನು ಶಂಭುಲಿಂಗ ಇರಿಸಿಕೊಂಡಿದ್ದರು.

ಅಭ್ಯರ್ಥಿಗಳಿಂದ ಪಡೆದುಕೊಂಡ ಹಣದ ವಿವರವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಕೊಂಡಿದ್ದರು. ಅಭ್ಯರ್ಥಿಗಳು ಎಷ್ಟು ಹಣ ಕೊಟ್ಟಿದ್ದರು ಎಂಬುದರ ಬಗ್ಗೆ ಕಂಪ್ಯೂಟರ್‌ನಲ್ಲಿ ನಮೂದಿಸಿದ್ದ ಶಂಭುಲಿಂಗ, ಅಕ್ರಮ ಹಣದ ಬಗ್ಗೆ ಯಾರಿಗೂ ಗೊತ್ತಾಗದಿರಲು ಪಾಲ್ ಜತೆ ಕೋಡ್‌ ವರ್ಡ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಖರ್ತನಾಕ್‌ ಐಡಿಯಾ

ಅಭ್ಯರ್ಥಿ 10 ಲಕ್ಷ ರೂ. ನೀಡಿದರೆ ಶುಂಭುಲಿಂಗ ಕಂಪ್ಯೂಟರ್‌ನಲ್ಲಿ ದಾಖಲು ಮಾಡಿಟ್ಟುಕೊಳ್ಳುತ್ತಿದ್ದುದು ಕೇವಲ 10 ಸಾವಿರ‌ ರೂಪಾಯಿ ಮಾತ್ರ. 5 ಲಕ್ಷ ರೂ. ನೀಡಿದರೆ 5 ಸಾವಿರ ಎಂದು ಬರೆದುಕೊಳ್ಳುತ್ತಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ. ಸಹಕಾರ ನಗರದಲ್ಲಿರುವ ಅಮೃತ್ ಪಾಲ್ ಎದುರು ಮನೆ ನಿವಾಸಿ ಶಂಭುಲಿಂಗ, ಅಭ್ಯರ್ಥಿಗಳಿಂದ 2 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದಾಗ ಪೆನ್‌ ಡ್ರೈವ್ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ಶಾಸಕರಿಗೆ ಬ್ಯಾಗ್‌ನಲ್ಲಿ ಕೊಟ್ಟಿದ್ದು ದುಡ್ಡಲ್ಲ, ಸೀಬೆ ಹಣ್ಣು!: PSI ಹಗರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ ಪರಸಪ್ಪ

Exit mobile version