Site icon Vistara News

PSI Scam : PSI ಮರುಪರೀಕ್ಷೆ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಲು ಒಪ್ಪದ ಹೈಕೋರ್ಟ್;‌ ಸದ್ಯಕ್ಕಿಲ್ಲ ನೇಮಕಾತಿ

PSI Scam in karnataka

#image_title

ಬೆಂಗಳೂರು: ರಾಜ್ಯದಲ್ಲಿ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಕ್ಕಾಗಿ (PSI Recruitment) ನಡೆದ ಪರೀಕ್ಷೆಯಲ್ಲಿ ಬಹು ದೊಡ್ಡ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ (PSI Scam) ಮರುಪರೀಕ್ಷೆ (PSI Reexam) ನಡೆಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಲ್ಲಿ ಮಧ್ಯ ಪ್ರವೇಶ ಮಾಡಲಾಗದು ಎಂದು ಹೈಕೋರ್ಟ್‌ (Karnataka High court) ಹೇಳಿದೆ. ಹೀಗಾಗಿ ಮರುಪರೀಕ್ಷೆಯೇ ಬಹುತೇಕ ಅಂತಿಮಗೊಂಡಂತಾಗಿದೆ.

2021ರ ಅಕ್ಟೋಬರ್‌ 3ರಂದು ರಾಜ್ಯದ 92 ಸೆಂಟರ್‌ಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಗಳು (PSI Examination) ನಡೆದಿದ್ದವು. ಇದರಲ್ಲಿ 54,289 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಭಾರಿ ಪ್ರಮಾಣದ ಅಕ್ರಮಗಳು, ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ಬಳಸಿ ಉತ್ತರ ಹೇಳಿಕೊಟ್ಟ ಪ್ರಕರಣಗಳು ನಡೆದಿದ್ದವು ಎಂಬುದು ತನಿಖೆಯ ವೇಳೆ ಬಯಲಾಗಿದ್ದು, ಒಟ್ಟು 110 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಶಿಕ್ಷಣ ಪ್ರಾಧಿಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಈ ರೀತಿ ಪರೀಕ್ಷಾ ಅಕ್ರಮ ಮಾಡಿದವರೇ ಟಾಪ್‌ ರ‍್ಯಾಂಕಿಂಗ್‌ನಲ್ಲಿದ್ದರು. ಅಕ್ರಮದಲ್ಲಿ ಭಾಗಿಯಾದ 56 ಅಭ್ಯರ್ಥಿಗಳನ್ನು ಇನ್ನು ಮುಂದೆ ಯಾವುದೇ ಪೊಲೀಸ್‌ ಇಲಾಖಾ ಪರೀಕ್ಷೆಯಲ್ಲಿ ಭಾಗವಹಿಸದಂತೆ ಡಿಬಾರ್‌ ಮಾಡಲಾಗಿದೆ.

ಇಷ್ಟೆಲ್ಲ ಅವಾಂತರಗಳು ನಡೆದಿರುವ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಈ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಹೊಸದಾಗಿಯೇ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದ 100ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಮರುಪರೀಕ್ಷೆ ಬೇಡ, ಅಕ್ರಮ ಮಾಡಿದವರನ್ನು ಬಿಟ್ಟು ಉಳಿದವರ ರ‍್ಯಾಂಕ್‌ ಪಟ್ಟಿ ಪ್ರಕಟಿಸಿ ಎಂದು ಕೋರಿ ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

ನಿಜವೆಂದರೆ, ಕೆಲ ಅಭ್ಯರ್ಥಿಗಳು ಅದಕ್ಕಿಂತ ಮೊದಲು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜುಲೈ 19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವುದು ಸರಿಯಲ್ಲ. ಇದರಿಂದ ತಮಗೆ ಅನ್ಯಾಯವಾಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿತ್ತು.

ಬೆಂಗಳೂರಿನ ಎನ್ ವಿ ಚಂದನ್ ಸೇರಿದಂತೆ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ 100 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ನಡೆಯಿತು. ಈ ವೇಳೆ ಅರ್ಜಿದಾರರ ಪರ ವಕೀಲರು “ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಮತ್ತೊಂದೆಡೆ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಅರ್ಜಿಯನ್ನು ಆಗಸ್ಟ್‌ 16ರಂದು ವಿಚಾರಣೆಗೆ ನಿಗದಿಪಡಿಸಬಹುದು ಎಂದು ತಿಳಿಸಿದರು. ಹೀಗಾಗಿ ಕೋರ್ಟ್‌ ವಿಚಾರಣೆಯನ್ನು ಆ ದಿನಕ್ಕೆ ಮುಂದೂಡಿತು. ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿ ಕೋರ್ಟ್‌ ಹಿಂದಿನ ವಿಚಾರಣೆಯಲ್ಲೇ ತಿಳಿಸಿತ್ತು.

ಇನ್ನು ಎರಡು ವರ್ಷ ಪಿಎಸ್‌ಐ ಪರೀಕ್ಷೆ ಇಲ್ಲ!?

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿ ಹಿಂದಿನ ಸರ್ಕಾರ ಒಂದು ತನಿಖೆಯನ್ನು ನಡೆಸಿದೆ. 110ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ಇದನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಲು ಮುಂದಾಗಿದೆ. ಹೀಗಾಗಿ ಈ ತನಿಖೆ ನಡೆದು ಮುಂದೆ ಹೊಸ ಪರೀಕ್ಷೆ ನಿಗದಿಯಾಗಿ ಅದರ ಫಲಿತಾಂಶ ಪ್ರಕಟವಾಗುವ ಹೊತ್ತಿಗೆ ಎರಡು ವರ್ಷಗಳೇ ಬೇಕಾದೀತು ಎಂದು ಹೇಳಲಾಗಿದೆ. ಇದನ್ನೇ ಆಧರಿಸಿ ರಾಜ್ಯ ಗೃಹ ಸಚಿವರು ಇನ್ನು ಎರಡು ವರ್ಷ ಪಿಎಸ್‌ಐ ನೇಮಕಾತಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Exit mobile version