ಕಲಬುರಗಿ: ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಶರಣಾಗಿರುವ ಆರೋಪಿ ಆರ್.ಡಿ ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ತನಿಖಾಧಿಕಾರಿಗಳೇ ಪ್ರಕರಣ ಮುಚ್ಚಿ ಹಾಕಲು ಲಂಚದ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾನೆ.
ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಸಿಐಡಿ ತನಿಖಾಧಿಕಾರಿ ಶಂಕರ್ ಪಾಟೀಲ್ ಹಣದ ಬೇಡಿಕೆಯಿಟ್ಟಿದ್ದಾರೆ. ಮೂರು ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ಈಗಾಗಲೇ 76 ಲಕ್ಷ ಕೊಟ್ಟಿದ್ದೇನೆ ಎಂದು ಆರ್‌ಡಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ.
ಸಾಕ್ಷಿ ಸಮೇತ ಲೋಕಾಯುಕ್ತ, ಸಿಐಡಿ ವಿಭಾಗದ ಎಡಿಜಿಪಿ, ಎಡಿಜಿಪಿ ಅಲೋಕ್ ಕುಮಾರ್ ಮತ್ತು ಗೃಹಸಚಿವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ವಿಡಿಯೋ ಕಳಿಸಿಕೊಟ್ಟಿದ್ದೇನೆ. ಕೇವಲ ನನ್ನಿಂದ ಮಾತ್ರವಲ್ಲ ಪ್ರಕರಣದ ಎಲ್ಲಾ ಆರೋಪಿಗಳಿಂದ ಹಣ ಪಡೆದಿದ್ದಾರೆ. ತನಿಖೆ ವೇಳೆ ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದೇನೆ ಎಂದಿದ್ದರು. ತನಿಖೆಗೆ ಒಬ್ಬರೇ ಅಧಿಕಾರಿ ಬಂದಿದ್ದರೇ? ಅಧಿಕಾರಿಗಳನ್ನು ತಳ್ಳಿ ಪರಾರಿಯಾಗುವುದು ಹೇಗೆ ಸಾಧ್ಯ ಎಂದಿದ್ದಾನೆ.
ಇದನ್ನೂ ಓದಿ | PSI Scam : ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣು
ಪಿಎಸ್ಐ ಪ್ರಕರಣ ಮಾತ್ರವಲ್ಲ ಬೇರೆ ಬೇರೆ ಪ್ರಕರಣಗಳು ನಿನ್ನ ಮೇಲೆ ಇವೆ ಎಂದಿದ್ದಾರೆ. ಸುಮ್ಮನೆ ಯಾಕೆ ತಿರುಗಾಡುವೆ ನಮ್ಮೊಂದಿಗೆ ರಾಜಿಯಾಗು ಎಂದಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಮಲ್ಲಿಕಾರ್ಜುನ ಅವರಿಂದ ನನ್ನ ಅಳಿಯ ಹಣ ತಂದುಕೊಟ್ಟಿದ್ದಾನೆ. ನನ್ನ ಅಳಿಯ ಶ್ರೀಕಾಂತ್ ಮೂಲಕ ಸಿಐಡಿ ಡಿವೈಎಸ್ಪಿ ಶಂಕರ ಗೌಡ ಅವರಿಗೆ 76 ಲಕ್ಷ ಹಣ ತಂದುಕೊಡಲಾಗಿದೆ ಎಂದು ಸಿಐಡಿ ಅಧಿಕಾರಿಗಳ ವಿರುದ್ಧ ಪಿಎಸ್ಐ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ.