ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.
ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.
ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.
ಕಲ್ಯಾಣ ಕರ್ನಾಟಕ ಭಾಗದ ಜನರ ನಾಡಿಮಿಡಿತ ಹೇಗಿದೆ ಅನ್ನೋದನ್ನ ನಿಮ್ಮ ಮುಂದೆ ಇಡ್ತಿದ್ದೇವೆ. ಈ ಭಾಗದಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವೊಂದು ತಲೆ ಎತ್ತಿದೆ. ಗಣಿದಣಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಈ ಭಾಗವನ್ನೇ ಟಾರ್ಗೆಟ್ ಮಾಡಿದೆ. ಇದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಷ್ಟರ ಮಟ್ಟಿಗೆ ಚಾಲೆಂಜ್ ಆಗಲಿದೆ. ಹಾಗಾದ್ರೆ, ಈ ಭಾಗದ ಜನರ ಪಲ್ಸ್ ಹೇಗಿದೆ ನೋಡೋಣ ಬನ್ನಿ.
ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ?
ಕಳೆದ ಬಾರಿ ಪಾರಮ್ಯ ಹೊಂದಿದ್ದ ಕಾಂಗ್ರೆಸ್, ಈ ಬಾರಿಯೂ ಅದೇ ಲಯ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಕಲ್ಯಾಣ ಕರ್ನಾಟಕದಲ್ಲಿ ಹಿಡಿತ ಸಾಧಿಸಬೇಕು ಎಂಬ ಬಿಜೆಪಿ ಪ್ರಯತ್ನ ಕೈಹಿಡಿದಂತೆ ಕಾಣುತ್ತಿಲ್ಲ. ಈ ಪ್ರಾಂತ್ಯದಲ್ಲಿ ಜೆಡಿಎಸ್ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂಬುದು ರಿಪೋರ್ಟ್ನ ಸಾರಾಂಶ. ಜನಾರ್ಧನ ರೆಡ್ಡಿ ನಿರೀಕ್ಷಿಸಿದಷ್ಟು ಪ್ರಾಬಲ್ಯ ಸಾಧಿಸಲು ವಿಫಲರಾಗಲಿದ್ದಾರೆ ಎನ್ನುವ ಸೂಚನೆಯಿದೆ.. – ತಟಸ್ಥ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆ ವೇಳೆ ಯಾವ ಪಕ್ಷದ ಪರ ಬೇಕಾದರೂ ಒಲಿಯಬಹುದು..!
ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಎಷ್ಟು ಮುಖ್ಯವೋ. ಅಲ್ಲಿನ ಜನರು ಕ್ಷೇತ್ರ ಅಭ್ಯರ್ಥಿಗೂ ಅಷ್ಟೇ ಪ್ರಾಮುಖ್ಯತೆ ಕೊಡ್ತಿದ್ದಾರೆ. ಅಲ್ಲದೆ, ಪಕ್ಷದ ನೆಲೆಗಟ್ಟಿನಲ್ಲಿ ನೋಡೋದಾದ್ರೆ ಕಾಂಗ್ರೆಸ್ ಹೆಚ್ಚಿನ ಪ್ರಾಬಲ್ಯ ಹೊಂದಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಈ ಭಾಗದ ಜನ್ರು ಹೆಚ್ಚು ಆಸಕ್ತಿ ವಹಿಸಿದಂತೆ ಕಂಡು ಬಂದಿಲ್ಲ.
ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?
ಈ ಭಾಗವೂ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು,, ಹೀಗಾಗಿ ಈ ಭಾಗದ ಜನರಿಗೆ ಅಭಿವೃದ್ಧಿಯೇ ಮಾನದಂಡವಾಗಿದೆ. ಅಲ್ಲದೆ, ಸಂವಿಧಾನದ 371ಜೆ ಜಾರಿಯಾದರೂ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ತಲುಪಿಲ್ಲ ಎನ್ನುವುದು ಜನರ ಭಾವನೆಯಲ್ಲ ವ್ಯಕ್ತವಾಗ್ತಿದೆ. ಜಾತಿಗೆ ಹೆಚ್ಚು ಮಣೆ ಹಾಕಿದಂತೆ ಕಾಣ್ತಿಲ್ಲ.. – ಸ್ಥಳೀಯ ನಾಯಕತ್ವ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ
ಕಾಂಗ್ರೆಸ್ ಘಟಾನುಘಟಿ ನಾಯಕರು ಈ ಭಾಗದವರಾಗಿದ್ದು, ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿಲ್ಲ. ಅಲ್ಲದೆ, ಕಾಂಗ್ರೆಸ್ ನಾಯಕರುಗಳು ಈ ಬಾಗದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ಮೂಡಿಸುವಲ್ಲಿ ಸಫಲರಾಗಿದ್ದಾರೆ. ಕನಿಷ್ಠ ಉತ್ತಮ ಹಾಗೂ ಸಾಮಾನ್ಯ ಅಭಿಪ್ರಾಯ ವ್ಯಕ್ತಪಡಿಸದೆ, ಬಿಜೆಪಿ ಸರ್ಕಾರದ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಕಳಪೆಪಟ್ಟ ನೀಡಿದ್ದಾರೆ.
ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?
ಬಿಜೆಪಿ- ಕಾಂಗ್ರೆಸ್ ಹೆಚ್ಚು ಕಮ್ಮಿ ಸಮಬಲದ ಶಾಸಕರನ್ನು ಹೊಂದಿದ್ದು, ಬಹುತೇಕ ಶಾಸಕರ ಕುರಿತು ಕೊಂಚ ಮಟ್ಟಿಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅದರ ಜೊತೆಗೆ ಕೊಂಚಮಟ್ಟಿಗೆ ಸಿಟ್ಟು ಕೂಡ ಮತದಾರರಲ್ಲಿ ಇದ್ದು, ಈ ಪೈಕಿ ಶೇಕಡ 27.5 ಮಂದಿ ಶಾಸಕರ ವಿರುದ್ಧ ಸಿಟ್ಟಾಗಿದ್ರೆ. ಇನ್ನು 16.5 ಮಂದಿ ಶಾಸಕರ ಬದಲಿಗೆ ಒಲವು ಹೊಂದಿದ್ದಾರೆ.
ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?
ಅಹಿಂದ ವರ್ಗದ ಮತಗಳು ಈ ಭಾಗದಲ್ಲಿ ನಿರ್ಣಾಯಕವಾಗಿದ್ದು, ಹೆಚ್ಚಿನ ಮಂದಿ ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಜೊತೆಗೆ ಲಿಂಗಾಯತ ಮತಗಳು ಅಧಿಕವಾಗಿರುವುದರಿಂದ ಬೊಮ್ಮಾಯಿ ಕಡೆಗೂ ಒಲವು ವ್ಯಕ್ತವಾಗಿದೆ. ಜೊತೆಗೆ ಒಂದು ಕಾಲದಲ್ಲಿ ಕಾಂಗ್ರೆಸ್ ಬೆಲ್ಟ್ ಆಗಿದ್ದ ಕಾರಣ.. ಡಿಕೆ ಶಿವಕುಮಾರ್ ಸಿಎಂ ಆಗಲಿ ಅನ್ನೋ ಒಲವನ್ನು ಹೊಂದಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ಗೆ ನೆಲೆ ಇಲ್ಲದಿದ್ದರೂ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗುವ ಬಗ್ಗೆ ಹೆಚ್ಚಿನ ಜನ ಆಸಕ್ತಿ ತೋರಿದ್ದಾರೆ.
ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?
2014ರಿಂದ ದೇಶದಲ್ಲಿ ಆವರಿಸಿರುವ ಮೋದಿ ಮೆನಿಯಾ ಈ ಭಾಗದಲ್ಲೂ ಹೆಚ್ಚು ಕೆಲಸ ಮಾಡಿದಂತಿದೆ. ಏಕೆಂದ್ರೆ, ಅರ್ಧದಷ್ಟು ಮಂದಿ ಮೋದಿ ಪ್ರಭಾವಕ್ಕೆ ಒಳಗಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ ಭಾಗದವರಾ್ಗಿದ್ದರೂ ಮೋದಿ ಅಲೆ ಎಲ್ಲವನ್ನು ಮೆಟ್ಟಿ ನಿಂತಂತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮೀರಿ ಮಲ್ಲಿಕಾರ್ಜುನ ಖರ್ಗೆ ಈ ಭಾಗದಲ್ಲಿ ಜನಪ್ರಿಯತೆ ಹೊಂದಿದ್ದಾರೆ.
ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?
ಒಂದು ವೇಳೆ ರಾಜ್ಯದಲ್ಲಿ ಸ್ಪಷ್ಟಬಹುಮತ ಬರದಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಈ ಭಾಗದ ಮತದಾರರ ಪ್ರಾಥಮಿಕ ಅಭಿಪ್ರಾಯವಾಗಿದೆ.
ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?
ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಮೀರಿ ಈ ಭಾಗದಲ್ಲಿ ನರೇಂದ್ರ ಮೋದಿ ಅಲೆಯನ್ನೇ ಬಿಜೆಪಿ ನೆಚ್ಚಿ ಕೊಂಡಿದೆ ಎಂದು ಮತದಾರರ ಭಾವಿಸಿದ್ದಾರೆ. ಬಿಜೆಪಿಯ ಅಭಿವೃದ್ಧಿ ವಿಚಾರವೂ ಸಾಕಷ್ಟು ಜನರನ್ನು ತಲುಪಿದೆ. ಬಿಜೆಪಿ ರಾಜ್ಯ ನಾಯಕತ್ವವನ್ನು ಕಡೆಗಣಿಸಿದೆ, ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಜನರು ಸಮ್ಮತಿ ನೀಡಿದಂತಿದೆ.
ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?
ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಕೊಂಚ ಯಶಸ್ವಿಯಾಗಿದೆ. ಏಕೆಂದ್ರೆ, ಸುಮಾರು ಅರ್ಧಕ್ಕೂ ಹೆಚ್ಚು ಜನರು ಬಿಜೆಪಿ ಸರ್ಕಾರದ ಕಮಿಷನ್ ಹಾಗೂ ಭ್ರಷ್ಟಾಚಾರ ಆರೋಪದಿಂದ ಪ್ರಭಾವಿತರಾಗಿದ್ದಾರೆ.
ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?
ಕಾಂಗ್ರೆಸ್ ಒಳಜಗಳ ಈ ಭಾಗದಲ್ಲಿ ಕೊಂಚಮಟ್ಟಿಗೆ ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಆಗಬಹುದು. ಇದ್ನ ಸ್ವತಃ ಮತದಾರರೇ ಒಪ್ಪಿಕೊಂಡಿದ್ದಾರೆ. ಹಿರಿಯ ನಾಯಕರಾದ ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟವನ್ನು ಅದಷ್ಟು ಬೇಗ, ಸರಿಪಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ನೀಡಿದ್ದಾರೆ. ಈ ಅಭಿಪ್ರಾಯವನ್ನು ಅರ್ಧಕ್ಕೂ ಹೆಚ್ಚು ಮಂದಿ ಹೊಂದಿದ್ದಾರೆ. ಅವಕಾಶವನ್ನು ಎನ್ಕ್ಯಾಷ್ ಮಾಡಿಕೊಳ್ಳಲು ಆಡಳಿತರೂಢ ಬಿಜೆಪಿಗೆ ಉತ್ತಮ ಅವಕಾಶ ಎಂಬ ಸಂದೇಶವನ್ನು ನೀಡಿದೆ.
ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?
ಇದು ಕಾಂಗ್ರೆಸ್ಗೆ ಭಾರಿ ಆಘಾತ ನೀಡುವ ಅಂಶವಾಗಿದೆ. ಏಕೆಂದ್ರೆ, ಈಗಾಗಲೇ ಕಾಂಗ್ರೆಸ್ ಮೂರು ಉಚಿತ ಘೋಷಣೆಗಳನ್ನು ಮಾಡಿದ್ದು, ಸಾಂಪ್ರದಾಯಿಕ ಮತದಾರರನ್ನು ಹೊಂದಿರುವ ಈ ಭಾಗದಲ್ಲೇ ಒಲವು ವ್ಯಕ್ತವಾಗಿಲ್ಲ. ಈ ನಿರ್ಧಾರ ಕೈ ಪಡೆಗೆ ಪ್ರಣಾಳಿಕೆಯಲ್ಲಿ ಉಚಿತಕೊಡುಗೆ ಕುರಿತು ಆಲೋಚಿಸುವಂತೆ ಮಾಡಿದೆ. ಜನರಿಗೆ ಅಭಿವೃದ್ಧಿ ಯೋಜನೆಗಳೇ ಮುಖ್ಯವೇ ಹೊರತು.. ಉಚಿತ ಕೊಡುಗೆಗಳನ್ನು ಅಲ್ಲ ಅನ್ನೋ ಸಂದೇಶವನ್ನು ರವಾನಿಸಿದೆ.
ಪ್ರಶ್ನೆ 13 – ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೇ?
ಜನಾರ್ಧನ ರೆಡ್ಡಿ ನಿರೀಕ್ಷೆಯಂತೆ ಮೇಲ್ನೋಟಕ್ಕೆ ಅಬ್ಬರಿಸಿದರೂ ಮತದಾರರ ಮನ ಗೆಲ್ಲಲು ವಿಫಲರಾದಂತಿದೆ. ಬಿಜೆಪಿ ನಾಯಕರ ಆತಂಕಕ್ಕೆ ಪೂರಕವಾಗಿ ಬಿಜೆಪಿಯ ಮತಗಳನ್ನು ಜನಾರ್ಧನ ರೆಡ್ಡಿ ವಿಭಜಿಸುವ ಲಕ್ಷಣ ಕಾಣುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಬೇಕೆಂಬ ಬಿಜೆಪಿ ಕನಸಿಗೆ ಅಡ್ಡಿಯುಂಟಾಗುವ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ: Pulse of Karnataka: ಮಲೆನಾಡು-ಕರಾವಳಿ: ವಿಸ್ತಾರ-ಅಖಾಡಾ ಸಮೀಕ್ಷೆ: ಹಿಂದುತ್ವದ ಪ್ರಯೋಗಶಾಲೆಯಲ್ಲಿ ಜನರಿಗೆ ಯಾವುದರತ್ತ ಒಲವು?
ಇದನ್ನೂ ಓದಿ: Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್?