ಬೆಂಗಳೂರು: ಹಿಂದು ಕಾರ್ಯಕರ್ತ, ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಮೇಲೆ ದಾಖಲಿಸಿದ್ದ ಗೂಂಡಾ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಹಲವು ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ದಾಖಲಿಸಿ ಪುನೀತ್ ಕೆರೆಹಳ್ಳಿಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಗೂಂಡಾ ಕಾಯ್ದೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದ ಪುನೀತ್ ಕೆರೆಹಳ್ಳಿಯನ್ನು (Puneeth Kerehalli) ಬಿಡುಗಡೆ ಮಾಡಲಾಗಿದೆ.
ಮೊಹಮ್ಮದ್ ಇದ್ರೀಸ್ ಪಾಷಾ ಕೊಲೆ ಪ್ರಕರಣ ಸೇರಿ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಆದರೆ, ತನ್ನ ಬಂಧನ ಪ್ರಶ್ನಿಸಿ ಪುನೀತ್ ಕೆರೆಹಳ್ಳಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ವಿಚಾರಣೆ ನಡೆಸಿದ್ದ ಸಮಿತಿ, ಆರೋಪಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು, ಸೆ.13ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಈ ವರದಿಯ ಅನ್ವಯ ಸೆ.16ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶ ಹೊರಡಿಸಿರುವ ಒಳಾಡಳಿತ ಇಲಾಖೆಯ(ಕಾನೂನು & ಸುವ್ಯವಸ್ಥೆ) ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್ ಅವರು ಪುನೀತ್ ಕೆರೆಹಳ್ಳಿಯನ್ನು ಬಂಧನ ಮುಕ್ತಗೊಳಿಸುವಂತೆ ಆದೇಶ ನೀಡಿದ್ದಾರೆ.
ಬಂಧನಕ್ಕೆ ಕಾರಣವೇನು?
ಪುನೀತ್ ಕೆರೆಹಳ್ಳಿ ಮೇಲೆ ಇರುವ ಪ್ರಮುಖ ಆರೋಪವೆಂದರೆ ಸಾತನೂರಿನಲ್ಲಿ ಮೊಹಮ್ಮದ್ ಇದ್ರೀಸ್ ಪಾಷಾ ಎಂಬಾತನ ಕೊಲೆ. ಮಂಡ್ಯದಿಂದ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಸಾತನೂರು ಪೊಲೀಸ್ ಠಾಣೆಯ ಎದುರು ಭಾಗದಲ್ಲಿ ಪುನೀತ್ ಕೆರೆಹಳ್ಳಿ ತಂಡ ತಡೆ ಹಿಡಿದಿತ್ತು. ಈ ಘಟನೆಯಲ್ಲಿ ಹಲ್ಲೆ ನಡೆಸಿ ಮಹಮ್ಮದ್ ಇದ್ರೀಸ್ ಕೊಲೆ ಮಾಡಲಾಗಿತ್ತು ಎಂಬ ಆರೋಪದಲ್ಲಿ ಪುನೀತ್ ಮೇಲೆ ಪ್ರಕರಣ ದಾಖಲಾಗಿತ್ತು. ಇದರ ಜತೆಗೆ 10 ಪ್ರಕರಣಗಳು ವಿವಿಧ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿವೆ. ಹೀಗಾಗಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.
ಮೂಲತಃ ಹಾಸನ ಜಿಲ್ಲೆ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್, ಬೆಂಗಳೂರಿನ ಜೆ.ಪಿ. ನಗರ 7ನೇ ಹಂತದಲ್ಲಿ ವಾಸವಾಗಿದ್ದಾರೆ. ರಾಷ್ಟ್ರ ರಕ್ಷಣಾ ಪಡೆ ಎಂಬ ಅನಧಿಕೃತ ಸಂಘಟನೆ ಕಟ್ಟಿಕೊಂಡು ಜನರನ್ನು ಬೆದರಿಸುವ, ಸಮಾಜದ ಶಾಂತಿ ಕದಡುವ, ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುವುದು ಅವರ ಮೇಲೆ ಇರುವ ಗಂಭೀರ ಆರೋಪ. ಸಮಾಜದ ಸಾಮರಸ್ಯ ಕದಡಿದ ಆರೋಪ, ಸಮಾಜ ವಿರೋಧಿ ಕೃತ್ಯಗಳು, ಅಪರಾಧ ಚಟುವಟಿಕೆಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ | Chaitra Kundapura : ಚೈತ್ರಾ ಕುಂದಾಪುರ ಬಂಧನಕ್ಕೆ ಖುಷ್; ಈಡುಗಾಯಿ ಒಡೆದ ಗ್ರಾಮಸ್ಥರು!
ಪುನೀತ್ ಕೆರೆಹಳ್ಳಿ ಮೇಲೆ 10 ಪ್ರಕರಣಗಳು
ಅಪರಾಧ ಹಿನ್ನೆಲೆಯುಳ್ಳ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಡಿ ಜೆ ಹಳ್ಳಿ, ಬೇಗೂರು, ಕಗ್ಗಲೀಪುರ, ಹಲಸೂರು ಗೇಟ್, ಮಂಡ್ಯ ಜಿಲ್ಲೆಯ ಮಳವಳ್ಳಿ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆಯಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಜಾತಿ ನಿಂದನೆ, ದೊಂಬಿ ಸೇರಿದಂತೆ ಹತ್ತು ಪ್ರಕರಣ ದಾಖಲಾಗಿವೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.