Site icon Vistara News

Puneeth Parva | ಕಾಡು ಪ್ರಾಣಿ, ಗಿಡ-ಮರಗಳಲ್ಲೂ ಅಪ್ಪುವನ್ನು ನೋಡೋಣ: ರಾಘವೇಂದ್ರ ರಾಜಕುಮಾರ್

puneeta parwa 47

ಬೆಂಗಳೂರು: ಅಪ್ಪ ಗಂಧದ ಗುಡಿ ಮಾಡಿದರು, ನಂತರ ಶಿವಣ್ಣ ಮಾಡಿದರು, ಈಗ ಅಪ್ಪು ಮಾಡಿದ್ದಾನೆ. ಇನ್ನು ಮೇಲೆ ಕಾಡು ಪ್ರಾಣಿ, ಮರ ಗಿಡಗಳಲ್ಲಿ ಅಪ್ಪುವನ್ನು ಅಭಿಮಾನಿಗಳು ನೋಡಬೇಕು. ಇದು ನನ್ನ ತಮ್ಮನ್ನ ಕೊನೇ ಸಿನಿಮಾ. ಹೀಗಾಗಿ ಇದನ್ನು ಪುನೀತ ಪರ್ವ (Puneeth Parva) ಕಾರ್ಯಕ್ರಮದ ಮೂಲಕ ದೊಡ್ಡದಾಗಿ ಮಾಡುತ್ತಿದ್ದೇವೆ. ಅಭಿಮಾನಿಗಳು ಯಾವುದೇ ಗಲಾಟೆ ಇಲ್ಲದೆ ಇದನ್ನು ನಡೆಸಿಕೊಡಿ. ಅಪ್ಪು ಹೋದಾಗಿನಿಂದ ಏನು ಸಮಸ್ಯೆ ಆಗದೆ ನಮಗೆ ಸಹಕಾರ ಕೊಟ್ಟಿದ್ದೀರಿ. ಇಂದೂ ಕೂಡಾ ನಮಗೆ ಸಹಕಾರ ಕೊಡಿ ಎಂದು ನಟ, ಪುನೀತ್‌ ರಾಜಕುಮಾರ್‌ ಸಹೋದರ ರಾಘವೇಂದ್ರ ರಾಜಕುಮಾರ್‌ ಹೇಳಿದರು.

ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ “ಪುನೀತ ಪರ್ವ” ಕಾರ್ಯಕ್ರಮಕ್ಕೂ ಮುನ್ನ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿ, ಈ ಸಿನಿಮಾ ಬಗ್ಗೆ ನನಗೂ ಮಾಹಿತಿ ಇರಲಿಲ್ಲ. ಸಿನಿಮಾ ನಿರ್ಮಾಣ ಬಳಿಕ ನಮಗೆ ಹೇಳಿದ. ಅಪ್ಪುಗೆ ಭೇದಭಾವ ಇಲ್ಲ. ಬಿಳಿ ಅಂದ್ರೆ ಅಪ್ಪ ನೆನಪು ಆಗುತ್ತಾರೆ. ಅಪ್ಪುಗೂ ಬಿಳಿ ಬಣ್ಣ ಅಂದರೆ ಇಷ್ಟ. ಹೀಗಾಗಿ ಇವತ್ತು ಬಿಳಿ ಬಟ್ಟೆ ಹಾಕಲು ಹೇಳಿದ್ದೇವೆ ಎಂದು ಹೇಳಿದರು.

Puneeth Parva

ಇದು ಅಭಿಮಾನಿಗಳ ಕಾರ್ಯಕ್ರಮ
ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬರುವ ಅಭಿಮಾನಿಗಳೇ ಮುಖ್ಯ ಅತಿಥಿಗಳಾಗಿದ್ದಾರೆ. ಬರುವ ಎಲ್ಲರಿಗೂ ಸ್ವಾಗತ. ಎಲ್ಲರೂ ಸೇರಿ ಮಾಡೋಣ. ಅಪ್ಪು ಗಾಯಕನಾಗಿ ಹಾಡಿದ ಹಾಡನ್ನು ನಾನು ಹಾಡುತ್ತೇನೆ. ಅವನ ಜತೆಗಿನ ಒಡನಾಟ ಹೇಳಿ ನಾನು ಹಾಡು ಹಾಡುತ್ತೇನೆ. ಶಿವರಾಜಕುಮಾರ್ ಡ್ಯಾನ್ಸ್ ಮಾಡುತ್ತಾರೆ. ಕುನಾಲ್ ಗಾಂಜಾವಾಲ್‌ ಸೇರಿದಂತೆ ಹಲವು ಇರಲಿದ್ದಾರೆ. ಎಲ್ಲರೂ ರಂಜಿಸಲಿದ್ದಾರೆ ಎಂದು ರಾಘವೇಂದ್ರ ರಾಜಕುಮಾರ್‌ ತಿಳಿಸಿದರು.

ಇದನ್ನೂ ಓದಿ | Puneeth Parva | ʻಪುನೀತ ಪರ್ವʼದ ವಿವರ ಹಂಚಿಕೊಂಡ ಅಶ್ವಿನಿ ಪುನೀತ್ ರಾಜಕುಮಾರ್‌

Puneeth Parva

ಕುನಾಲ್‌, ರಾಘವೇಂದ್ರ ರಾಜಕುಮಾರ್‌ ರಿಹರ್ಸಲ್‌
ಗಾಯಕ ಕುನಾಲ್ ಗಾಂಜಾವಾಲ, ರಾಘವೇಂದ್ರ ರಾಜಕುಮಾರ್‌ ಅವರಿಂದ ಈಗಾಗಲೇ ರಿಹರ್ಸಲ್‌ ನಡೆದಿದೆ. “ನೀನೇ ನೀನೇ, ನನಗೆಲ್ಲಾ ನೀನೇ” ಹಾಡಿನ ಖ್ಯಾತಿಯ ಕುನಾಲ್ ಅಪ್ಪು ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಇನ್ನು ಅಪ್ಪು ಹಾಡಿದ ಕೆಲವು ಹಾಡುಗಳನ್ನು ಹಾಡಲು ರಾಘವೇಂದ್ರ ರಾಜ್‌ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ” ಗೀತೆಯನ್ನು ರಿಹರ್ಸಲ್‌ ಮಾಡುತ್ತಿದ್ದಾರೆ. ವೇದಿಕೆ ಮೇಲೆ ಪೂರ್ಣ ಪ್ರಮಾಣದ ಬ್ಯಾಂಡ್ ಟೀಂ ಜತೆಗೆ ಹಾಡಿನ ಅಭ್ಯಾಸ ಮುಂದುವರಿದಿದೆ.

Puneeth Parva

ದೂರದೂರಿನಿಂದ ಅಭಿಮಾನ ಆಗಮನ
ದೂರದ ಜಿಲ್ಲೆಗಳಿಂದ, ಹಳ್ಳಿಗಳಿಂದ ಅಪ್ಪು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಲವರು ಬಸ್‌ಗಳಲ್ಲಿ ಆಗಮಿಸಿದರೆ ಮತ್ತೆ ಕೆಲವರು ಬಾಡಿಗೆ, ಸ್ವಂತ ವಾಹನಗಳ ಮೂಲಕ ಕಾರ್ಯಕ್ರಮಕ್ಕಾಗಿ ಬರುತ್ತಿದ್ದಾರೆ. ಈ ವಾಹನಗಳನ್ನು ಪಾರ್ಕಿಂಗ್‌ಗೆ ಪೊಲೀಸರು ಸ್ಥಳ ನಿಯೋಜನೆ ಮಾಡಿಸುತ್ತಿದ್ದು, ವಾಹನ ದಟ್ಟಣೆ ಆಗದಂತೆ ಕ್ರಮವಹಿಸುತ್ತಿದ್ದಾರೆ.

ಇದನ್ನೂ ಓದಿ | Puneeth Parva | ಪುನೀತ ಪರ್ವ ಕಾರ್ಯಕ್ರಮಕ್ಕಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್‌ ಏರಿದ ಅಭಿಮಾನಿ

Puneeth Parva

ಅದ್ಧೂರಿ ವೇದಿಕೆ
ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 10 ಎಕರೆ ಜಾಗದಲ್ಲಿ ಅದ್ಧೂರಿ ವೇದಿಕೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 80-60 ಅಳತೆಯ 10 ಅಡಿ ಎತ್ತರದಲ್ಲಿ‌ ವೇದಿಕೆ ನಿರ್ಮಾಣಗೊಂಡಿದೆ. ವೇದಿಕೆ ಮೇಲೆ ಸುಮಾರು ೫೦೦ ಲೈಟ್‌ಗಳನ್ನು ಬಳಕೆ ಮಾಡಲಾಗಿದ್ದು, 400ರಿಂದ 500 ಸಿಬ್ಬಂದಿ 1 ವಾರದಲ್ಲಿ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. 14 ಕ್ಯಾಮೆರಾಗಳನ್ನು ಪುನೀತ ಪರ್ವ ಕಾರ್ಯಕ್ರಮದಲ್ಲಿ ಆಯೋಜಕರಿಂದಲೇ ಅಳವಡಿಸಲಾಗಿದೆ. ವಿಐಪಿಗಳಿಗೆ 5000 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಳೂವರೆ ಅಡಿಯ ಎಲ್‌ಇಡಿ (LED) ಸ್ಕ್ರೀನ್ ಅನ್ನು ಒಟ್ಟು ೭ ಕಡೆ ಅಳವಡಿಕೆ ಮಾಡಲಾಗಿದೆ.

ನೂಕು ನುಗ್ಗಲು ಆಗದಂತೆ ಕ್ರಮವಹಿಸಲಾಗಿದ್ದು, ಅಭಿಮಾನಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಬರುವ ಅಭಿಮಾನಿಗಳಿಗೆ ಎರಡು ಗೇಟ್‌ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಅಭಿಮಾನಿಗಳಿಗೆ ಒಳಗಡೆ ಹೋಗಲು ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ತಂಡೋಪ ತಂಡವಾಗಿ ಅಭಿಮಾನಿಗಳು ಸ್ಥಳಕ್ಕೆ ಬಂದಿದ್ದಾರೆ. ಸುಮಾರು ಒಂದು ಲಕ್ಷ ಅಭಿಮಾನಿಗಳು ಬರುವ ನಿರೀಕ್ಷೆ ಇದ್ದು, ಸೂಕ್ತ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ | ನ.1ರಂದು ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಇದಕ್ಕಾಗಿ ಸಕಲ ಸಿದ್ಧತೆ ಎಂದ ಬೊಮ್ಮಾಯಿ

ಡ್ಯಾನ್ಸ್‌ ಪ್ರದರ್ಶನಗಳು
ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಪ್ರದರ್ಶನಗಳು ಇರಲಿದ್ದು, ಭಾರತದ ಮೈಕಲ್‌ ಜಾಕ್ಸನ್‌ ಖ್ಯಾತಿಯ ನಟ ಪ್ರಭುದೇವ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಮತ್ತು ಮೋಹಕ ತಾರೆ ರಮ್ಯಾ ಅವರಿಂದ ಡ್ಯಾನ್ಸ್‌ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಕುನಾಲ್ ಗಾಂಜಾವಾಲ, ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್, ಗುರು ಕಿರಣ್ ಹಾಗು ಟಿಪ್ಪು ಅವರಿಂದ ಗೀತ ನಮನ ಕಾರ್ಯಕ್ರಮಗಳೂ ನಡೆಯಲಿದೆ.

Puneeth Parva

ಮುಂಬೈಯಿಂದ ಆಗಮಿಸಿದ ನೃತ್ಯ ಕಲಾವಿದರು
ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಮುಂಬೈಯಿಂದ ನೃತ್ಯ ಕಲಾವಿದರ ತಂಡ ಆಗಮಿಸಿದ್ದು, ಹಲವು ಸುತ್ತಿನ ರಿಹರ್ಸಲ್‌ಗಳನ್ನು ನಡೆಸಿವೆ. ಪುನೀತ್‌ ಸಿನಿಮಾಗಳ ಹಾಡಿಗೆ ಇವರೆಲ್ಲರೂ ಹೆಜ್ಜೆ ಹಾಕಲಿದ್ದಾರೆ.

ಸಂಚಾರ ದಟ್ಟನೆ ನಿಯಂತ್ರಣಕ್ಕೆ ಹಲವು ಮಾರ್ಗ
ಅಭಿಮಾನಿಗಳು ಹಾಗೂ ಸಾರ್ವಜನಿಕರ ಆಗಮನಕ್ಕೆ ಸಂಚಾರಿ ಪೊಲೀಸರು ಹಲವು ಮಾರ್ಗಗಳನ್ನು ಗುರುತಿಸಿದ್ದು, ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್, ಸುಮ್ಮುನಹಳ್ಳಿ ಬ್ರಿಡ್ಜ್, ರಾಜಕುಮಾರ್ ಸಮಾದಿ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.

ತುಮಕೂರು ಕಡೆಯಿಂದ ಬರುವ ವಾಹನಗಳು ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು, ಮೇಜರ್ ಉನ್ನಿಕೃಷ್ಣ ರಸ್ತೆ, ಯಲಹಂಕ ಪೊಲೀಸ್ ಠಾಣೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೇಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.

ಹೊಸೂರು ಕಡೆಯಿಂದ ಬರುವ ವಾಹನಗಳು, ಹೊಸೂರು ರಸ್ತೆ, ಮಡಿವಾಳ ಚಕ್‌ಪೋಸ್ಟ್‌, ಡೈರಿ ಸರ್ಕಲ್, ಲಾಲ್‌ ಬಾಗ್ ಮುಖ್ಯದ್ವಾರ, ಮಿನರ್ವ ಸರ್ಕಲ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಬಸವೇಶ್ವರ ವೃತ್ತ, ಮೌಂಟ್ ಕಾರ್ಮಲ್ ಕಾಲೇಜ್, ವಸಂತ ನಗರ ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ತಲುಪಲು ಕ್ರಮ ವಹಿಸಲಾಗಿದೆ.

ಇದನ್ನೂ ಓದಿ | Gandhada Gudi | ಡಾ. ರಾಜ್‌ ಗಂಧದ ಗುಡಿಗಿಂತಲೂ ಪುನೀತ್‌ ಸಿನಿಮಾ ಯಶಸ್ಸು ಕಾಣಲಿ: ಸೋದರತ್ತೆ ನಾಗಮ್ಮ ಹಾರೈಕೆ

ಕೋಲಾರ, ಹೊಸಕೋಟೆ ಕಡೆಯಿಂದ ಬರುವ ವಾಹನಗಳು ಕೆ‌.ಆರ್ ಪುರ, ಟಿನ್ ಫ್ಯಾಕ್ಟರಿ, ಹೆಣ್ಣೂರು ರಿಂಗ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಮೇಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ಕಾರ್ಯಕ್ರಮಕ್ಕೆ ಬರುವ ಎಲ್ಲ ವಾಹನಗಳಿಗೆ ಸರ್ಕಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮ ಆರಂಭವಾಗುವ ಕ್ಷಣದಿಂದ ಕಾರ್ಯಕ್ರಮ‌ ಮುಗಿಯುವ ತನಕ ಸಂಚಾರ ದಟ್ಟಣೆ ಆಗದಂತೆ ಹೆಚ್ಚುವರಿ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಳ್ಳಾರಿ ರಸ್ತೆಯ ತ್ರಿಪುರ ನಿವಾಸಿನಿ ಗೇಟ್ ಮೂಲಕ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಯಮಹಲ್ ಮೂಲಕ ವಿಐಪಿ ಹಾಗೂ ವಿವಿಐಪಿಗಳಿಗೆ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ.

Puneeth Parva

ಏನಿದು ಪುನೀತ ಪರ್ವ?
ಅಗಲಿದ ನಾಯಕ ನಟ, ಕನ್ನಡಿಗರ ಕಣ್ಮಣಿ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮವು ಅಕ್ಟೋಬರ್‌ ೨೧ರಂದು ಸಂಜೆ ೬ ಗಂಟೆಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪುನೀತ್ ನಟನೆಯ ಕೊನೆಯ ಸಿನಿಮಾ ʼಗಂಧದ ಗುಡಿʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪುನೀತ್‌ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಇವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತನಾಮರು ಆಗಮಿಸಲಿದ್ದಾರೆ.

ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್​ನಿಂದಲೂ ನಟ – ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್‌ನಿಂದ ಬಾಲಯ್ಯ, ಕಾಲಿವುಡ್​ ನಾಯಕ ಕಮಲ್ ಹಾಸನ್, ಸೂರ್ಯ, ಬಹುಭಾಷಾ ನಟ ಪ್ರಭುದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ರಮ್ಯಾ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದೆ. ನಟ ಶಿವರಾಜ್​ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದು, ಅಕ್ಟೋಬರ್ 28ಕ್ಕೆ ಬಿಡುಗಡೆ ಆಗಲಿದೆ.

ಕಾರ್ಯಕ್ರಮಕ್ಕೆ ಬಂದೋಬಸ್ತ್‌
ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3 ಡಿಸಿಪಿ, 14 ಎಸಿಪಿ, 60 ಇನ್ಸ್‌ಪೆಕ್ಟರ್‌, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 KSRP ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್‌ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಇದನ್ನೂ ಓದಿ | ಇಂದು ಪುನೀತ ಪರ್ವ ಕಾರ್ಯಕ್ರಮ, ಸ್ಟಾರ್‌ ನಟ ನಟಿಯರಿಂದ ಮೆಗಾ ಶೋ

Exit mobile version