Site icon Vistara News

Puttur Election Results: ಪುತ್ತೂರಿನಲ್ಲಿ ಪುತ್ತಿಲರ ವೀರೋಚಿತ ಸೋಲು; ಗೆಲುವು ಕಂಡ ಅಶೋಕ್‌ ಕುಮಾರ್ ರೈ

Puttur Election results winner Ashok kumar rai

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರವು ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದರೂ ಅದೀಗ ಒಡೆದ ಮನೆಯಾಗಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು. ಮನೆಯೊಂದು ಮೂರು ಬಾಗಿಲಾಗಿದ್ದು, ಮೂವರು ಬಿಜೆಪಿಗರೇ ಚುನಾವಣಾ ಕಣದಲ್ಲಿದ್ದರು. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಚುನಾವಣಾ ಫಲಿತಾಂಶ (Puttur Election Results) ಬಂದಿದ್ದು, ಕಾಂಗ್ರೆಸ್‌ನ ಅಶೋಕ್‌ ಕುಮಾರ್ ರೈ ಅವರು ಜಯಗಳಿಸಿದ್ದಾರೆ.

ಗೆಲುವಿನ ನಗೆ ಬೀರಿದ ಅಶೋಕ್‌ ಕುಮಾರ್ ರೈ

ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ಅಶೋಕ್ ರೈಗೆ (Ashok Kumar Rai) ಕೈ ಪಕ್ಷದ ಸಾಂಪ್ರದಾಯಿಕ ಮತ ಹಾಗೂ ತಮ್ಮ ವಿಶ್ವಾಸಿಕ ಕಾರ್ಯಕರ್ತರು ಹಾಗೂ ಸಾವಿರಾರು ಫಲಾನುಭವಿಗಳ ಬೆಂಬಲ ದೊರಕಿದೆ. ಇವರಿಗೆ ಅರಣ್ ಕುಮಾರ್ ಪುತ್ತಿಲ ಅವರ ಭಯವೊಂದಿತ್ತು. ಆದರೆ, ಕಾಂಗ್ರೆಸ್‌ ಮತದಾರರು ಇವರ ಕೈ ಹಿಡಿದಿದ್ದಾರೆ. ಇನ್ನು ಕಟ್ಟಾ ಬಿಜೆಪಿಯ ಮತಗಳು ಹಾಗೂ ಪುತ್ತಿಲ ನಡುವಿನ ಮತಗಳು ವಿಭಜನೆಯಾಗಿದ್ದರಿಂದ ಇವರ ಗೆಲುವು ಸುಲಭವಾಗಿದೆ.

ಪೈಪೋಟಿ ನೀಡಿದ ಪುತ್ತಿಲ

ಬಿಜೆಪಿಯಿಂದ ಸಿಡಿದು ಬಂಡಾಯವೆದ್ದಿರುವ ಹಿಂದೂ ಸಂಘಟನೆ ಮುಖಂಡ ಅರಣ್ ಕುಮಾರ್ ಪುತ್ತಿಲ ಬಿಜೆಪಿ‌ ಮತಗಳ ಮೇಲೆ ಕಣ್ಣಿಟ್ಟಿದ್ದರು. ಅವರು ಬಿಜೆಪಿ ಮತಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರೂ ಕೂಡಾ ಗೆಲ್ಲುವಲ್ಲಿ ಸಫಲರಾಗಿಲ್ಲ.

ಸೋತ ಆಶಾ ತಿಮ್ಮಪ್ಪ

ಬಿಜೆಪಿ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಸದ್ಯ ಬಿಜೆಪಿಯ ಕಟ್ಟಾ ಬೆಂಬಲಿಗರ ಪಡೆ ಇದ್ದರೂ ಗೆಲುವು ಸಾಧ್ಯವಾಗಲೇ ಇಲ್ಲ. ಬಿಜೆಪಿ ಮತಗಳು ಹೀಗೆ ಮೂರು ಹೋಳಾಗಿ ಒಡೆದು ಹೋಗಿದ್ದೇ ಅವರ ಸೋಲಿಗೆ ಕಾರಣವಾಗಿದೆ. ಸದ್ಯ ಈ ಕ್ಷೇತ್ರದಲ್ಲಿ ಬಿಜೆಪಿಯ ಭಿನ್ನಾಭಿಪ್ರಾಯವೇ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಹಾದಿಯನ್ನು ಸುಲಭವಾಗಿಸಿದೆ.

ಪುತ್ತೂರು ಚುನಾವಣಾ ಫಲಿತಾಂಶ

ಬಿಜೆಪಿಯನ್ನೇ ಹೆದರಿಸಿದ ಪುತ್ತಿಲ

ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹಿಂದೂ ಸಂಘಟನೆಯ ಮುಖಂಡ ಅರುಣ್ ಪುತ್ತಿಲ್ಲ ಸಿಡಿದೆದ್ದಿದ್ದರು. ಟಿಕೆಟ್ ಘೋಷಣೆಯಾಗಿ ಎರಡೇ ಗಂಟೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡರು. ಪುತ್ತಿಲ ಅವರ ಬೆನ್ನಿಗೆ ಸಾವಿರಾರು ಕಾರ್ಯಕರ್ತರು ನಿಂತಿದ್ದರು. ಹಾಗಾಗಿ ಬಿಜೆಪಿಗೆ ಈ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಗುಲಿತ್ತು. ಸಂಘ ಪರಿವಾರದ ಹಿರಿಯ ಮುಖಂಡರು, ಯೋಗಿ ಆದಿತ್ಯನಾಥ ಮುಂತಾದ ಪ್ರಭಾವಿ ನಾಯಕರು ಈ ಕ್ಷೇತ್ರದಲ್ಲಿ ಸುತ್ತಾಡಿ ಬಿಜೆಪಿ ಮತ ಒಡೆಯುವುದನ್ನು ತಪ್ಪಿಸಲು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಫಲ ಕಾಣಲಿಲ್ಲ

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ
ಸಂಜೀವ ಮಠಂದೂರು ( ಬಿಜೆಪಿ) 90,073 ಶಕುಂತಳಾ ಶೆಟ್ಟಿ (ಕಾಂಗ್ರೆಸ್) 66,345 ಗೆಲುವಿನ ಅಂತರ : 33,728

ಈ ಬಾರಿಯ ಚುನಾವಣೆ ಫಲಿತಾಂಶ
ಅಶೋಕ್‌ ಕುಮಾರ್‌ ರೈ (ಕಾಂಗ್ರೆಸ್‌): 66607 | ಅರುಣ ಕುಮಾರ್‌ ಪುತ್ತಿಲ (ಪಕ್ಷೇತರ): 62458 | ಆಶಾ ತಿಮ್ಮಪ್ಪ: 37558 | ನೋಟಾ: 866

Exit mobile version