ವಿವೇಕ ಮಹಾಲೆ, ಶಿವಮೊಗ್ಗ
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ. ಅರೆಮಲೆನಾಡು ಪ್ರದೇಶವಾದ ಶಿಕಾರಿಪುರ ಕ್ಷೇತ್ರದ ಅಶ್ವಮೇಧ ಕುದುರೆ ಯಡಿಯೂರಪ್ಪ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡ ನೆಲೆಯಿದು. ಕಳೆದ 9 ಚುನಾವಣೆಗಳ ಪೈಕಿ 8 ಬಾರಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧಿಸುತ್ತಿಲ್ಲ. ಶಾಸಕರಾಗಿ ಯಡಿಯೂರಪ್ಪ ಅವರದ್ದು ಇದು ಕೊನೆಯ ಅವಧಿ. ಹಾಗೆಂದು ಸ್ವತಃ ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಕಳೆದ ತಿಂಗಳಲ್ಲಷ್ಟೇ ಅವರು ತಮ್ಮ ತವರು ಕ್ಷೇತ್ರದಲ್ಲಿಯೇ ಮಾಡಿದ್ದಾರೆ. ಸುಮಾರು ಮೂರು ದಶಕಗಳ ನಂತರ ಯಡಿಯೂರಪ್ಪ ಇಲ್ಲದ ಅಸೆಂಬ್ಲಿ ಚುನಾವಣೆ ಶಿಕಾರಿಪುರದಲ್ಲಿ ನಡೆಯಲಿದೆ.
ಚುನಾವಣೆ ಇತಿಹಾಸ
1952ರ ಪ್ರಥಮ ಚುನಾವಣೆಯಲ್ಲಿ ಸೊರಬ-ಶಿಕಾರಿಪುರ ಕ್ಷೇತ್ರವಾಗಿತ್ತು. 1962ರಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ಅಸ್ತಿತ್ವ ಪಡೆದುಕೊಂಡಿದ್ದಲ್ಲದೆ ಮೀಸಲು ಕ್ಷೇತ್ರವಾಗಿತ್ತು. 1978ರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. 1983ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಬಿ.ಎಸ್. ಯಡಿಯೂರಪ್ಪ ಹ್ಯಾಟ್ರಿಕ್ ನಿರಿಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಕೆ. ಯೆಂಕಟಪ್ಪ ಅವರನ್ನು 18,502 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಬಿಎಸ್‌ವೈ ಹಿಂತಿರುಗಿ ನೋಡಲೇ ಇಲ್ಲ. ಬಂಗಾರಪ್ಪ ಅಲೆಯಿಂದ 1999ರಲ್ಲಿ ಒಮ್ಮೆ ಕಾಂಗ್ರೆಸ್‌ನ ಮಹದೇವಪ್ಪ ವಿರುದ್ಧ ಸೋಲುನ್ನನುಭವಿಸಿದ್ದು ಬಿಟ್ಟರೆ ಮತ್ತೆ ಸೋಲು ಹತ್ತಿರವೂ ಸುಳಿಯಲಿಲ್ಲ. 2008ರ ಚುನಾವಣೆಯಲ್ಲೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪರನ್ನು ಸೋಲಿಸಲೆಂದೇ ಎಸ್. ಬಂಗಾರಪ್ಪ ಇಲ್ಲಿ ಕಣಕ್ಕಿಳಿದಿದ್ದರು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಬಂಗಾರಪ್ಪಗೆ ಸಾಥ್ ನೀಡಿದ್ದವು. ಆದರೆ 1999ರ ಜಾದೂ ಈ ಬಾರಿ ನಡೆಯಲಿಲ್ಲ. ಯಡಿಯೂರಪ್ಪ 45 ಸಾವಿರ ಮತಗಳ ಅಂತರದಿಂದ ಬಂಗಾರಪ್ಪ ಅವರನ್ನು ಸೋಲಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಗೆದ್ದಿದ್ದ ಯಡಿಯೂರಪ್ಪ ನಂತರ ಮತ್ತೆ ಬಿಜೆಪಿ ಸೇರಿ 2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆಗೆ ರಾಜೀನಾಮೆ ನೀಡಿದ್ದರಿಂದ ಮರುವರ್ಷ ನಡೆದ ಉಪಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು. ಇದಾದ ನಂತರ 2018ರಲ್ಲಿ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ನಿಂತು 8ನೇ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀಡಿದ ಕ್ಷೇತ್ರವೆಂಬ ಹೆಗ್ಗಳಿಕೆ ಇರುವ ಶಿಕಾರಿಪುರಕ್ಕೆ ಮತ್ತೊಮ್ಮೆ ಅಂತಹ ಅವಕಾಶ ಯಾವಾಗ ಒದಗಿಬರುತ್ತದೆಯೋ ಕಾದುನೋಡಬೇಕು.
ಜಾತಿ ಲೆಕ್ಕಾಚಾರ
ಮೂಲ ಪರಿಶಿಷ್ಟರ ಕ್ಷೇತ್ರವಾಗಿದ್ದರೂ ಬದಲಾದ ಕಾಲಮಾನದಲ್ಲಿ ಸಾಮಾನ್ಯ ಕ್ಷೇತ್ರವಾಗಿ ಗುರುತಿಸಿಕೊಂಡ ಶಿಕಾರಿಪುರದಲ್ಲಿ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ. ಲಿಂಗಾಯತರ ನಿಲುವುಗಳು ಚುನಾವಣೆಯ ಲೆಕ್ಕಾಚಾರಗಳನ್ನು ನಿರ್ಧರಿಸುವುದು ಸುಳ್ಳಲ್ಲ. ಪ್ರಸ್ತುತ ಕ್ಷೇತ್ರದಲ್ಲಿ ಲಿಂಗಾಯತರು ಅಧಿಕ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನದಲ್ಲಿ ಬಂಜಾರ, ವಾಲ್ಮೀಕಿ, ಕುರುಬ, ಈಡಿಗ, ಮುಸ್ಲಿಂ ಮತದಾರರು ಇದ್ದಾರೆ. ಸಾಗರ ಮತ್ತು ಸೊರಬ ಕ್ಷೇತ್ರಗಳ ಗಡಿಯಲ್ಲಿ ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅಂಜನಾಪುರ ಹೋಬಳಿಯಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಯಡಿಯೂರಪ್ಪ ಉತ್ತರಾಧಿಕಾರಿ ಯಾರು?
ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕ್ಷೇತ್ರವಲ್ಲಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಕೇಳಿಬರುತ್ತಿದೆ. ಈ ಕುತೂಹಲಕ್ಕೆ ತೆರೆ ಎಂಬಂತೆ ಕಳೆದ ತಿಂಗಳು ಬಿ.ಎಸ್. ಯಡಿಯೂರಪ್ಪ ತಮ್ಮ ಮುಂದಿನ ಉತ್ತರಾಧಿಕಾರಿ ಎರಡನೇ ಪುತ್ರ ಬಿ.ವೈ. ವಿಜಯೇಂದ್ರ ಎಂದು ಘೋಷಿಸಿದ್ದರು. ಕ್ಷೇತ್ರದ ಜನರ ಒತ್ತಾಸೆ ಮೇರೆಗೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದರು. ಮರುದಿನವೇ ಕೇಂದ್ರದ ನಾಯಕರ ತೀರ್ಮಾನಕ್ಕೆ ಬಿಡುವುದಾಗಿಯೂ ಹೇಳಿಕೆ ನೀಡಿದ್ದರು.
ಯಡಿಯೂರಪ್ಪ ಘೋಷಣೆಗೆ ಬಿಜೆಪಿ ಹೈಕಮಾಂಡ್ ಒಪ್ಪುತ್ತದೆಯೇ, ಅಥವಾ ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಮಾಡಿದಂತೆ ಆಗುತ್ತದೆಯೇ ಎಂಬ ಕುತೂಹಲ ಇದ್ದೇ ಇದೆ. ವಿಜಯೇಂದ್ರ ಅವರಿಗೆ ಕೊಡದಿದ್ದರೆ ಬೇರೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೆ ಎಂಬುದು ಈಗಿನ ಯಕ್ಷ ಪ್ರಶ್ನೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಡಿಯೂರಪ್ಪ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ನ ಗೋಣಿ ಮಾಲತೇಶ್ ಮತ್ತು ಜೆಡಿಎಸ್‌ನಿಂದ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಟಿ. ಬಳೇಗಾರ್ ಹೆಸರು ಚಾಲ್ತಿಯಲ್ಲಿದ್ದರೂ, ಯಡಿಯೂರಪ್ಪ ಸ್ಪರ್ಧಿಸದ ಹಿನ್ನೆಲೆ ಒಂದು ಕೈ ನೋಡೇ ಬಿಡೋಣ ಎಂದು ಕೆಲ ಆಕಾಂಕ್ಷಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಹುಟ್ಟಿಕೊಂಡಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಬಿ.ಎಸ್.ಯಡಿಯೂರಪ್ಪ (ಬಿಜೆಪಿ)- ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
೨. ಬಿ.ವೈ. ವಿಜಯೇಂದ್ರ (ಬಿಜೆಪಿ)
3. ಗೋಣಿ ಮಾಲತೇಶ್ (ಕಾಂಗ್ರೆಸ್)
4. ಎಚ್.ಟಿ. ಬಳೇಗಾರ (ಜೆಡಿಎಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಶಿವಮೊಗ್ಗ ನಗರ | ಈಶ್ವರಪ್ಪ ಉತ್ತರಾಧಿಕಾರಿಯಾಗಲು ಅರ್ಧ ಡಜನ್‌ಗೂ ಹೆಚ್ಚು ಜನರ ಪೈಪೋಟಿ