Site icon Vistara News

ಪಠ್ಯಪುಸ್ತಕ ವಿಚಾರದಲ್ಲಿ ಆತ್ಮರಕ್ಷಣೆಗೆ ʼಒಕ್ಕಲಿಗʼ ಕಾರ್ಡ್‌ ಬಳಸಿದ ಬೊಮ್ಮಾಯಿ

r ashok and bommai

ಬೆಂಗಳೂರು: ರಾಜ್ಯಾದ್ಯಂತ ಚರ್ಚೆಯಾಗಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ʼಒಕ್ಕಲಿಗʼ ಕಾರ್ಡ್‌ ಬಳಸಿ ಆತ್ಮರಕ್ಷಣೆಗೆ ಮುಂದಾಗಿದ್ದಾರೆ. ಪಠ್ಯಪುಸ್ತಕದ ವಿಚಾರದಲ್ಲಿ ಆರ್‌. ಅಶೋಕ್‌ ಸುದೀರ್ಘ ಸುದ್ದಿಗೋಷ್ಠಿ ನಡೆಸುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಸಮಿತಿಯ ಕಾರ್ಯವನ್ನು ರಾಜ್ಯದ ವಿವಿಧ ಸಾಹಿತಿಗಳು, ಲೇಖಕರು, ಸ್ವತಃ ಬರಗೂರು ರಾಮಚಂದ್ರಪ್ಪ ವಿರೋಧಿಸಿದಾಗಲೂ ಸಿಎಂ ಬೊಮ್ಮಾಯಿ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಆದರೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದಾಗ ಚಿಂತೆಗೆ ಒಳಗಾಗಿದ್ದರು.

ಇದನ್ನೂ ಓದಿ | ಸರ್ಕಾರಕ್ಕೆ ಸತ್ಯ ಬೇಕಿಲ್ಲ, ಓಟು ಬೇಕು: ರೋಹಿತ್‌ ಚಕ್ರತೀರ್ಥ ವಿದಾಯದ ಮಾತು

ರಾಷ್ಟ್ರಕವಿ ಕುವೆಂಪು ಅವರ ಪಠ್ಯವನ್ನು ತೆಗೆಯಲಾಗಿದೆ ಹಾಗೂ ರೋಹಿತ್‌ ಚಕ್ರತೀರ್ಥ ಈ ಹಿಂದೆ ನಾಡಗೀತೆಗೆ ಅವಮಾನ ಮಾಡಿದ್ದರು ಎಂಬ ವಿಚಾರವನ್ನು ಸ್ವಾಮೀಜಿ ಪ್ರಸ್ತಾಪಿಸಿದ್ದರು. ಆನಂತರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರೇ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿಯವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು.

ನಂತರ ಒಕ್ಕಲಿಗ ಸಂಘ, ವಿವಿಧ ಒಕ್ಕಲಿಗ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟಿಸಿದ್ದವು. ಈ ಪ್ರತಿಭಟನೆಗೆ ಕಾಂಗ್ರೆಸ್‌ ನಾಯಕರಷ್ಟೆ ಅಲ್ಲದೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೂ ಬೆಂಬಲ ಸೂಚಿಸಿದ್ದರು. ನಂತರ ದೇವೇಗೌಡರು ಬೊಮ್ಮಾಯಿ ಸರ್ಕಾರಕ್ಕೆ ಪತ್ರ ಬರೆದು, ಪರಿಷ್ಕೃತ ಪಠ್ಯವನ್ನು ಹಿಂಪಡೆದು ಹಳೆಯ ಪಠ್ಯವನ್ನೇ ಮುಂದುವರಿಸಿ ಎಂದು ಆಗ್ರಹಿಸಿದ್ದರು. ನಿಧಾನವಾಗಿ ಪಠ್ಯ ವಿಚಾರ ʼಒಕ್ಕಗಲಿಗʼ ವಿರೋಧಿ ಎಂಬಂತೆ ಪರಿವರ್ತನೆ ಆಗುತ್ತಿರುವುದನ್ನು ಬೊಮ್ಮಾಯಿ ಗಮನಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸರ್ಕಾರವನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವ ಸಾಧ್ಯತೆ ಇದೆ. ಇಂತಹದ್ದಕ್ಕೆ ಅವಕಾಶ ನೀಡಬಾರದು ಎಂದರೆ, ಅದಕ್ಕೆ ಒಕ್ಕಲಿಗರ ಕಾರ್ಡ್‌ ಬಳಸಿಯೇ ಉತ್ತರ ನೀಡಬೇಕೆಂದು ನಿರ್ಧರಿಸಿದ್ದಾರೆ. ಕಂದಾಯ ಸಚಿವ ಆರ್‌. ಅಶೋಕ್‌ ಅವರ ನೇತೃತ್ವದಲ್ಲಿ ಗುರುವಾರ ಸುದೀರ್ಘ ಸುದ್ದಿಗೋಷ್ಠಿ ನಡೆಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪವಾದ ಅಂಶಗಳು

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಸಿ. ಸಿ. ಪಾಟೀಲ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್‌. ಅಶೋಕ್‌, ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಇಷ್ಟೊಂದು ಚರ್ಚೆ, ವಾದ-ವಿವಾದ, ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತದೆ, ಅದಕ್ಕಾಗಿ ಇದೆಲ್ಲ ನಡೆಯುತ್ತಿದೆ.
ಈ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪರಿಷ್ಕರಣೆ ಆಗಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ಅವರು ಪರಿಷ್ಕರಣೆ ಮಾಡಿದ್ದರು. ಹಿಂದೂ ಎನ್ನುವ ಪದಗಳನ್ನ ತೆಗೆದು ಹಾಕಿದ್ದರು. ಕುವೆಂಪು ಪಠ್ಯದ ಸಂಖ್ಯೆಯನ್ನು ೮ರಿಂದ ೭ಕ್ಕೆ ಸಿದ್ದರಾಮಯ್ಯ ಸರ್ಕಾರ ಇಳಿಕೆ ಮಾಡಿತ್ತು. ನಮ್ಮ ಸರ್ಕಾರ ಕುವೆಂಪು ಅವರ ಪಠ್ಯವನ್ನು ೧೦ಕ್ಕೆ ಏರಿಕೆ ಮಾಡಿದೆ. ಹಾಗಾದರೆ ನಾವೆಲ್ಲಿ ತಪ್ಪು ಮಾಡಿದ್ದೇವೆ ಹೇಳಿ? ಎಂದು ಪ್ರಶ್ನಿಸಿದರು.

ಪಠ್ಯಪುಸ್ತಕ ವಿರೋಧಿ ಪ್ರತಿಭಟನೆಯಲ್ಲಿ ಕನ್ನಡ ಪುಸ್ತಕವನ್ನು ಡಿ. ಕೆ. ಶಿವಕುಮಾರ್ ಹರಿದುಹಾಕಿದ್ದರ ಕುರಿತು ಪ್ರತಿಕ್ರಿಯಿಸಿದ ಅಶೋಕ್‌, ಕೆಂಪೇಗೌಡರ ಇತಿಹಾಸ ಇರುವ ಪುಸ್ತಕವನ್ನು ಶಿವಕುಮಾರ್‌ ಹರಿದು ಹಾಕಿದ್ದರು. ನಾವು ಕೆಂಪೇಗೌಡರ ಇತಿಹಾಸ ಹಾಕಿದ್ದೇವೆ. ನಮ್ಮ‌ ದೇಶದ ಸಂಸ್ಕೃತಿಯನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದೇವೆ ಎಂದರು.

ಭಾರತ ನಮ್ಮ ಹೆಮ್ಮೆ ಎಂಬ ಪಠ್ಯವನ್ನು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಇದರಲ್ಲಿ ತಪ್ಪೇನಿದೆ? ಕೆ ಎಸ್ ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನು ಸೇರಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ. ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ ಸೇರ್ಪಡೆ ಮಾಡಿದ್ದೇವೆ. ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನು ಮರು ಮರು ಸೇರ್ಪಡೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಮಾಡಿದ್ದೇವೆ. ಮಂಜೇಶ್ವರ ಗೋವಿಂದ ಪೈ ಬರಹ ಮರು ಸೇರ್ಪಡೆ ಮಾಡಲಾಗಿದೆ. ಆದರೆ ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ ಬಗ್ಗೆ ವಿಷಯ ಹೆಚ್ಚು ಸೇರಿಸಿದ್ದರು. ನಮ್ಮ‌ ನೆಲದ ರಾಜರ ಪರಿಚಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ ಎಂದು ಅಶೋಕ್‌ ಹೇಳಿದರು.

ಇದನ್ನೂ ಓದಿ | Text book | ಮರುಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಸಿಎಂಗೆ ಹೆಚ್‌.ಡಿ. ದೇವೇಗೌಡ ಪತ್ರ

Exit mobile version