ಮೈಸೂರು: ಎಚ್.ಡಿ.ಕುಮಾರಸ್ವಾಮಿ ಅವರು ಅವಕಾಶ ಕೊಟ್ಟರೆ ವರುಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ (Karnataka Election 2023) ಮಾಡುತ್ತೇನೆ. ಚಿತ್ರದುರ್ಗದಲ್ಲಿ ಪತ್ನಿಯನ್ನು ನಿಲ್ಲಿಸಿ ನಾನು ವರುಣದಿಂದ ಸ್ಪರ್ಧಿಸಿ, ಸಿದ್ದರಾಮಯ್ಯ ವಿರುದ್ಧ ಗೆದ್ದು ತೋರಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಸಿಎಂ ವಿರುದ್ಧ ಮಾಜಿ ಎಂಎಲ್‌ಸಿ ರಘು ಆಚಾರ್ ತೊಡೆ ತಟ್ಟಿದ್ದಾರೆ.
ಹುಣಸೂರು ಕ್ಷೇತ್ರದ ಕಳ್ಳಹಳ್ಳಿಗೆ ಶಾಸಕ ಜಿ.ಟಿ.ದೇವೇಗೌಡ ಜತೆ ಭೇಟಿ ನೀಡಿ, ಡಿ.ದೇವರಾಜ ಅರಸು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅರಸು ಅವರಿಂದ ಮಾತ್ರ ಹಿಂದುಳಿದ ವರ್ಗದ ಎಲ್ಲ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ. ಅದಕ್ಕಾಗಿ ಹಿಂದಿನಿಂದಲೂ ಅರಸು ಅವರ ಹುಟ್ಟೂರಿಗೆ ಬಂದು ಹೋಗುತ್ತೇನೆ. ಕಾಂಗ್ರೆಸ್‌ನಲ್ಲಿ ಈ ಬಾರಿ 195 ಹಿಂದುಳಿದ ಜಾತಿಗಳ ಯಾರಿಗೂ ಟಿಕೆಟ್ ಸಿಕ್ಕಿಲ್ಲ. ಅವರಿಗೆ ಅನ್ಯಾಯ ಆಗಿದೆ. ನಾನು ಸದಾ ಆ ಎಲ್ಲಾ ವರ್ಗದ ಜನರ ಪರವಾಗಿ ಇರುವವನು ಎಂದು ಹೇಳಿದರು.
ಇದನ್ನೂ ಓದಿ | BJP Karnataka: ರಾಜಕೀಯದಿಂದ ಕೆ.ಎಸ್. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ
ಡಿ.ದೇವರಾಜ ಅರಸು ಧೀಮಂತ ನಾಯಕರು. ಹಿಂದುಳಿದ ವರ್ಗಗಳ ನಿಜವಾದ ನಾಯಕ. ನಾನು ರಾಜಕೀಯ ಶುರು ಮಾಡುವಾಗಲೂ ಡಿ.ದೇವರಾಜ ಅರಸುಗೆ ಪೂಜೆ ಸಲ್ಲಿಸಿದ್ದೆ. ಜೆಡಿಎಸ್ ಸೇರ್ಪಡೆ ಬಳಿಕವೂ ಆಶೀರ್ವಾದ ಪಡೆಯಲು ಬಂದಿದ್ದೇನೆ. ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡ ಸಿದ್ದರಾಮಯ್ಯ ಹಿಂದುಳಿದ ಸಮುದಾಯಗಳಿಗೆ ಏನೂ ಮಾಡಿಲ್ಲ. ಅಹಿಂದ ಏನೂ ನಡೆಯಲ್ಲ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ವೋಟ್ ಹಾಕಿದರೆ ಓಡಿಸಿ ಬಿಡ್ತೀನಿ
ಡಿ. ದೇವರಾಜ ಅರಸು ಮುಖ್ಯಮಂತ್ರಿ ಆಗಲ್ಲ ಅಂದಿದ್ದರು, ಅವರು ಸಿಎಂ ಆಗಲಿಲ್ಲವೇ? ನಾನೂ ಮುಂದೊಂದು ದಿನ ಆಗಬಹುದು. 197 ಸಣ್ಣ ಜಾತಿಯವರಿಗೆ ಕಾಂಗ್ರೆಸ್ ಒಂದು ಟಿಕೆಟ್ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ನನ್ನ ಮರ್ಯಾದೆ ಪ್ರಶ್ನೆ ಇದೆ. ನಮ್ಮ ಸಮುದಾಯದ ಯಾರಾದರೂ ಕಾಂಗ್ರೆಸ್‌ಗೆ ವೋಟ್ ಹಾಕಿದರೆ ಓಡಿಸಿ ಬಿಡ್ತೀನಿ ಎಂದು ವಿಶ್ವಕರ್ಮ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.
ವರುಣದಲ್ಲಿ ಅಭ್ಯರ್ಥಿ ಬದಲಿಸುತ್ತೇವೆ: ಜಿ.ಟಿ.ದೇವೇಗೌಡ
ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ವರುಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ ಮಾಡುತ್ತೇವೆ. ಕಳೆದ ಒಂದೂವರೆ ತಿಂಗಳಿಂದ ಅಭ್ಯರ್ಥಿ ನಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಪಕ್ಷದಲ್ಲಿ ಕಾಣುತ್ತಿಲ್ಲ. ಈ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ಕೊಟ್ಟಿದ್ದೇವೆ ಎಂದರು.
ವರುಣದಲ್ಲಿ ಸಿದ್ದರಾಮಯ್ಯಗೆ ಜೆಡಿಎಸ್‌ನಿಂದ ಅನುಕೂಲ ವಾತಾವರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಕೆಟ್ ಘೋಷಣೆ ನಂತರ ಯಾರು ಯಾರಿಗೆ ಅನುಕೂಲ ಮಾಡುತ್ತಿದ್ದಾರೆ ಗೊತ್ತಾಗುತ್ತೆ ಎಂದರು. ಇದೇ ವೇಳೆ ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಬಗ್ಗೆ ಸ್ಪಂದಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಈಶ್ವರಪ್ಪ ಅವರದ್ದು ನಿವೃತ್ತಿ ಎನ್ನಲಾಗದು. ಅವರಿಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾರೆ. ಅವರ ಮಗನಿಗೆ ಟಿಕೆಟ್ ಕೊಟ್ಟರೂ ನಿಲ್ಲಿಸುತ್ತಾರೆ. ನರೇಂದ್ರ ಮೋದಿ ಕುಟುಂಬದ ರಾಜಕಾರಣ ಟೀಕೆ ಮಾಡುವುದರಲ್ಲಿ ಮೊದಲಿಗರು. ಆದ್ದರಿಂದ ಕುಟುಂಬದಲ್ಲಿ ಯಾರಿಗೂ ಟಿಕೆಟ್ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿರಬಹುದು. ಅದಕ್ಕಾಗಿ ಹೀಗೆ ಆಗಿರಬಹುದು ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟರು ಪ್ರಾಮಾಣಿಕರು. ಅಂತಹವರು ಇರಬೇಕಿತ್ತು. ಇವತ್ತಿನ ಚುನಾವಣಾ ವಾತಾವರಣ ನೋಡಿ ರಾಜೀನಾಮೆ ಕೊಟ್ಟಿದ್ದಾರೆ ಎನಿಸುತ್ತದೆ. ನಿವೃತ್ತಿ, ಕೊನೆ ಚುನಾವಣೆ ಎಂದು ಹೇಳುವುದು, ಮತ್ತೆ ಸ್ಪರ್ಧೆ ಮಾಡುವುದು ರಾಜಕಾರಣದಲ್ಲಿ ಸಾಮಾನ್ಯ. ಟಿಕೆಟ್ ಕೊಟ್ಟರೆ ಈಶ್ವರಪ್ಪ ಸ್ಪರ್ಧಿಸುತ್ತಾರೆ. ಪುತ್ರನಿಗೆ ಟಿಕೆಟ್ ಕೊಟ್ಟರೂ ರಾಜಕೀಯದಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | BJP Karnataka: ವರಿಷ್ಠರ ಸೂಚನೆಯಿಂದ ಆಘಾತವಾಗಿದೆ: ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದ ಜಗದೀಶ್ ಶೆಟ್ಟರ್
ಹುಣಸೂರು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಮಾತನಾಡಿ, ಕ್ಷೇತ್ರಾದ್ಯಂತ ಪ್ರಚಾರ ಮಾಡುತ್ತಿದ್ದೇನೆ. ಜನ ಸ್ವಯಂ ಪ್ರೇರಣೆಯಿಂದ ಬೆಂಬಲ ಕೊಡುತ್ತಿದ್ದಾರೆ. ರಘು ಆಚಾರ್ ಜೆಡಿಎಸ್‌ಗೆ ಬಂದಿದ್ದಾರೆ. ರಾಜ್ಯಾದ್ಯಂತ ಅವರ ಶಕ್ತಿ ಇದೆ. ಆ ಶಕ್ತಿಯಿಂದ ಜೆಡಿಎಸ್‌ಗೆ ಅನುಕೂಲ ಆಗಲಿದೆ. ಹುಣಸೂರಿನಲ್ಲಿ ಜೆಡಿಎಸ್‌ಗೆ ಗೆಲುವಿನ ವಾತಾವರಣ ಇದೆ ಎಂದು ಹೇಳಿದರು.