ಮೈಸೂರು: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಸಾಂಸ್ಕೃತಿಕ ಲೋಕದ ಮೇಲೂ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಸಾಹಿತ್ಯ ವಲಯದಲ್ಲೂ ಕೋಮುವಾದ ನುಸುಳಿ, ಸಾಹಿತಿಗಳು, ಚಿಂತಕರು, ಕಲಾವಿದರು, ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ತನ್ನ ಅಜೆಂಡಾವನ್ನು ಬೇರೂರುವಂತೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದರು.
ಭಾರತ್ ಜೋಡೊ ಯಾತ್ರೆ ಭಾಗವಾಗಿ ಮೈಸೂರು ಜಿಲ್ಲೆಯ ನಂಜನಗೂಡಿನ ಕಳಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲು ಭಯ ಬಿಟ್ಟು ಬಹಿರಂಗವಾಗಿ ಎದುರಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಶಕ್ತಿಗಳ ವಿರುದ್ಧ ಹೋರಾಡಬೇಕು. ಸಾಂಸ್ಕೃತಿಕ ವಲಯದಲ್ಲಿ ನಮ್ಮ ಧ್ವನಿಯನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ | Cong Prez Poll | ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ತ್ರಿಪಾಠಿ ಔಟ್; ಖರ್ಗೆ, ತರೂರ್ ಇಬ್ಬರೇ ಕಣದಲ್ಲಿ
ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷದ್ದಲ್ಲ, ಇದು ಜನರ ಪಾದಯಾತ್ರೆ. ಜನರೆಲ್ಲರೂ ಇದಕ್ಕೆ ಬೆಂಬಲ ಸೂಚಿಸಿದರೆ ಯಾತ್ರೆಗೆ ಸಾರ್ಥಕತೆ ಸಿಗಲಿದೆ. ನಮ್ಮ ಜತೆ ಪಾದಯಾತ್ರೆಗೆ ಬರಲೇಬೇಕೆಂದೇನೂ ಇಲ್ಲ, ತಾವಿರುವಲ್ಲಿಯೇ ಬೆಂಬಲ ನೀಡಿದರೆ ಸಾಕು. ದೇಶವನ್ನು ಸಬಲೀಕರಣ ಮಾಡಬೇಕು ಎಂಬುವುದು ನಮ್ಮ ಉದ್ದೇಶ. ನೋಟ್‌ಬ್ಯಾನ್‌ನಿಂದ ಮಧ್ಯಮ, ಕೆಳ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಗಳ ವಿರುದ್ಧ ನಾವು ಮಾತನಾಡಿದರೆ ಮಾಧ್ಯಮಗಳೂ ನಮ್ಮ ಜತೆ ನಿಲ್ಲುತ್ತಿಲ್ಲ ಎಂದು ಆರೋಪ ಮಾಡಿದರು.
ಲೇಖಕ ಕೆ.ವೈ.ಗುರುಪ್ರಸಾದ್, ಯತೀಶ್ ಕೊಳ್ಳೆಗಾಲ, ಕಿಶೋರ್ ಕಶ್ಯಪ್, ರವಿಪ್ರಸಾದ್, ಕಲ್ಯಾಣಿ ಕುಮಾರ್, ವಿಜಯ್ ಕುಮಾರ್, ರಾಜೇಂದ್ರ ಪ್ರಸಾದ್ ಮಂಡ್ಯ, ಶೈಲಜಾ ಅಮರನಾಥ್, ಆದರ್ಶ ಹುಂಚದಕಟ್ಟೆ, ಚಿಂತನ್ ವಿಕಾಸ್, ಎಸ್. ಜನಾರ್ಧನ್, ಅರುಣ್ ಜಾವಗಲ್, ನಿಶಿತಾ ಕೃಷ್ಣಮೂರ್ತಿ, ನೂರ್ ಸಾಹೇಬ್ ದುರ್ಗಾ, ಚರಣ್ ಭಾಗಿಯಾಗಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಚ್.ಸಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತಿತರರು ಇದ್ದರು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ₹50 ಕೋಟಿ ಅನುದಾನ ತಪ್ಪಿಸಲು ನೋಡಿದ ಎಚ್‌ಡಿಕೆ ಗೂಂಡಾಗಳ ಕರೆಸಿದರು: ಸಿಪಿವೈ