Site icon Vistara News

Karnataka CM: ಪ್ರಮಾಣವಚನ ವೇದಿಕೆಯಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

rahul-gandhi-speech-after-karnataka-cm-sworn-in-ceremony

#image_title

ಬೆಂಗಳೂರು: ರಾಜ್ಯದ ಸಿಎಂ, ಡಿಸಿಎಂ ಹಾಗೂ ಸಚಿವರ ಪ್ರಮಾಣವಚನ ಕಾರ್ಯಕ್ರಮದ ನಂತರ ಕಾರ್ಯಕ್ರಮದ ನಂತರ ಅದೇ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ನೀವೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೀರಿ. ಈ ಚುನಾವಣೆಯನ್ನು ಕಾಂಗ್ರೆಸ್‌ ಏಕೆ ಜಯಿಸಿದೆ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಗೆಲುವಿಗೆ ಒಂದೇ ಕಾರಣ ಎಂದರೆ ಕರ್ನಾಟಕದಲ್ಲಿ ಬಡವರು, ದಲಿತರು, ಆದಿವಾಸಿಗಳ ಜತೆ ನಿಂತಿದ್ದೇ ನಮ್ಮ ಗೆಲುವಿಗೆ ಕಾರಣ.

ನಮ್ಮ ಬಳಿ ಸತ್ಯ ಹಾಗೂ ಬಡವರು ಇದ್ದರು. ಬಿಜೆಪಿ ಬಳಿ ಹಣ, ಶಕ್ತಿ, ಪೊಲೀಸರು ಇದ್ದರು. ಹಾಗೂ ಅವರ ಎಲ್ಲ ಶಕ್ತಿಯನ್ನೂ ಕರ್ನಾಟಕದ ಜನರು ಸೋಲಿಸಿದ್ದಾರೆ. ಅವರ ಭ್ರಷ್ಟಾಚಾರವನ್ನು ಸೋಲಿಸಿದ್ದಾರೆ. ಅವರ ಧ್ವೇಷವನ್ನು ಸೋಲಿಸಿದ್ದಾರೆ. ಧ್ವೇಷವನ್ನು ನಿರ್ಮೂಲಗೊಳಿಸಿ ಪ್ರೀತಿ ಗೆದ್ದಿದೆ ಎಂದು ಜನರು ಹೇಳಿದ್ದಾರೆ. ಧ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಪ್ರೀತಿಯ ಅಂಗಡಿಯನ್ನು ಜನರು ತೆರೆದಿದ್ದಾರೆ. ನಾವು ಐದು ಗ್ಯಾರಂಟಿಯನ್ನು ಘೋಷಿಸಿದ್ದೆವು. ಈ ಎಲ್ಲ ಘೋಷಣೆಗಳನ್ನೂ ನಾವು ಈಡೇರಿಸುತ್ತೇವೆ. ಕೆಲವೇ ಗಂಟೆಗಳಲ್ಲಿ ಕರ್ನಾಟಕದ ಮೊದಲ ಸಂಪುಟ ಸಭೆ ನಡೆಯುತ್ತದೆ, ಅಲ್ಲಿ ಈ ಐದು ಘೋಷಣೆಗಳು ಕಾನೂನಾಗುತ್ತವೆ.

ನಾವು ನಿಮಗೆಲ್ಲ ಒಂದು ಅತ್ಯುತ್ತಮ ಹಾಗೂ ಭ್ರಷ್ಟಾಚಾರರಹಿತ ಸರ್ಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ನೀವೆಲ್ಲರೂ ನಿಮ್ಮ ಶಕ್ತಿಯನ್ನು ನಮಗೆ ನೀಡಿದ್ದೀರ, ಇದನ್ನು ನಾವು ಯಾವತ್ತೂ ಮರೆಯುವುದಿಲ್ಲ. ಇದು ಕರ್ನಾಟಕದ ಜನತೆಯ ಸರ್ಕಾರ ಎಂದರು.

ನಂತರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು ನುಡಿದಂತೆ ನಡೆಯುತ್ತೇವೆ. ಮೋದಿಯವರು ಯಾವಾಗ್ಯಾವಾಗ ಜಪಾನ್‌ಗೆ ಹೋಗುತ್ತಾರೊ ಆಗೆಲ್ಲ ನೋಟ್‌ ಬ್ಯಾನ್‌ ಮಾಡುತ್ತಾರೆ. ಈಗ ಮತ್ತೆ ನೋಟ್‌ ಬ್ಯಾನ್‌ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಎಲ್ಲರನ್ನೂ ಪ್ರೀತಿಯಿಂದ ಜತೆಯಲ್ಲಿ ಕರೆದುಕೊಂಡು ಹೋಗುವ ಸರ್ಕಾರ ರಚಿಸುತ್ತೇವೆ ಎಂದರು. ನೂತನ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈ ಸರ್ಕಾರ ನುಡಿದಂತೆ ನಡೆಯಲಿದೆ. ಎಲ್ಲ ಐದು ಘೋಷಣೆಗಳ ಜತೆಗೆ ಪ್ರಣಾಳಿಕೆಯ ಎಲ್ಲ ಘೋಷಣೆಗಳನ್ನೂ ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ: Karnataka CM: … ಎಂಬ ಹೆಸರಿನವನಾದ ನಾನು…: ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರ ಪ್ರಮಾಣ

Exit mobile version