ಹುಬ್ಬಳ್ಳಿ: ೨೦೨೩ರ ವಿಧಾನಸಭಾ ಚುನಾವಣೆಯನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು. ಗೆಲ್ಲುವುದೊಂದೇ ನಮ್ಮ ಟಾರ್ಗೆಟ್ ಆಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕರಿಗೆ ಪಾಠ ಮಾಡಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಖಾಸಗಿ ಹೊಟೆಲ್‌ನಲ್ಲಿ ಮಂಗಳವಾರ ರಾತ್ರಿ ೯.೪೫ರ ಹೊತ್ತಿಗೆ ಆರಂಭವಾದ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ರಾಹುಲ್ ನಾಯಕರಿಗೆ ಕ್ಲಾಸ್ ತೆಗೆದುಕೊಂಡರು. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ರಾಹುಲ್ ಕ್ಲಾಸ್ ಮಹತ್ವವನ್ನು ಪಡೆದುಕೊಂಡಿದೆ.
ಬುಧವಾರ ದಾವಣಗೆರೆಯಲ್ಲಿ ಹಿರಿಯ ನಾಯಕ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನೋತ್ಸವ- ಸಿದ್ದರಾಮೋತ್ಸವವಾಗಿ ನಡೆಯಲಿದ್ದು, ಅದರಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಈ ಸಭೆಯು ಕೂಡಾ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಸಮಾವೇಶವಾಗಿರಬೇಕೇ ಹೊರತಡು ಒಡಕು ಮೂಡಿಸುವಂತಾಗಬಾರದು ಎಂಬ ಸಂದೇಶವನ್ನು ರಾಹುಲ್ ಎರಡೂ ಬಣಗಳಿಗೂ ರವಾನಿಸಿದ್ದಾರೆ.
ಸುಮಾರು ೪೫ ನಿಮಿಷಗಳ ಕಾಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಮುಖಂಡರಿಗೆ ಪಕ್ಷ ಸಂಘಟನೆ, ಚುನಾವಣೆ ರಣತಂತ್ರದ ಬಗ್ಗೆ ಪಾಠ ಮಾಡಿದರು.
ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ರಾಹುಲ್, ಮುಂಬರುವ ವಿಧಾನಸಭೆ ಚುನಾವಣೆಯೇ ಪ್ರಮುಖ ಟಾರ್ಗೆಟ್ ಎಂದರು. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರದ ವೈಫಲ್ಯ ಎತ್ತಿಹಿಡಿದು, ಇಕ್ಕಟ್ಟಿಗೆ ಸಿಲುಕಿಸುವಂತೆ ಸಲಹೆ ನೀಡಿದರು.
೩೫ ಮಂದಿಗೆ ಮಾತ್ರ ಅವಕಾಶ
ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ 35 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಅಲ್ಲಂ ವೀರRaಭದ್ರಪ್ಪ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಯು.ಟಿ. ಖಾದರ್, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಸುನಿಲ್ ಕಾನುಗೋಳು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಎನ್.ಎಸ್. ಬೋಸರಾಜು, ಸಂದೀಪ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಎಚ್. ಆಂಜನೇಯ, ರಮಾನಾಥ್ ರೈ, ವಿನಯ್‌ಕುಮಾರ್ ಸೊರಕೆ, ರಾಣಿ ಸತೀಶ್, ಉಮಾಶ್ರೀ , ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು.
ರಾಹುಲ್ ಗಾಂಧಿ ಅವರು ಸುಮಾರು ೪೫ ನಿಮಿಷ ಮಾತನಾಡಿ ಸಭೆಯಿಂದ ನಿರ್ಗಮಿಸಿದರು. ಮುಂದಿನ ಒಂದು ಗಂಟೆಗಳ ಅವಧಿಯ ಸಭೆಯನ್ನು ಕೆ.ಸಿ. ವೇಣುಗೋಪಾಲ್ ಮುಂದುವರಿಸಿದ್ದಾರೆ.
ಇದನ್ನೂ ಓದಿ| Siddaramotsava | ಬಣ ತಲ್ಲಣಗಳ ಮಧ್ಯೆ ಅದ್ಧೂರಿತನ; ರಾಜ್ಯದಲ್ಲಿ ಸಿದ್ದರಾಮೋತ್ಸವ ಧ್ಯಾನ!