ರಾಯಚೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ (Bharat jodo) ಯಾತ್ರೆಯ ಭಾಗವಾಗಿ ರಾಯಚೂರಿನಲ್ಲಿ ಶನಿವಾರ ೨ನೇ ದಿನದ ಪಾದಯಾತ್ರೆ ಹಲವು ವಿಶೇಷಗಳೊಂದಿಗೆ ನಡೆಯಿತು. ಬೆಳಗ್ಗೆ ಯರಗೇರಾ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ಸಂಜೆ ರಾಯಚೂರು ನಗರದ ಬಸವೇಶ್ವರ ಸರ್ಕಲ್ ತಲುಪಿದೆ.
ಮೊದಲ ಹಂತದಲ್ಲಿ ಯರಗೇರಾ ಗ್ರಾಮದಿಂದ ಬೃಂದಾವನ ಹೋಟೆಲ್ ವರೆಗೂ ನಡೆದ ರಾಹುಲ್ ಅಲ್ಲಿ ವಿಶ್ರಾಂತಿ ಪಡೆದರು. ಅಲ್ಲಿ ರೈತರು, ಕಾರ್ಮಿಕರ ಜತೆ ಸಂವಾದ ಕಾರ್ಯಕ್ರಮ ನಡೆಯಿತು.
ಮಾರ್ಗ ಮದ್ಯೆ ಮಿಟ್ಟಿ ಮಲ್ಕಾಪುರ ಗ್ರಾಮದಲ್ಲಿ ಉಪಾಹಾರ ಸೇವಿಸಿದ ರಾಹುಲ್ ಗಾಂಧಿ ಮತ್ತು ಟೀಮ್ ಬಳಿಕ ರಾಯಚೂರು ನಗರ ಪ್ರವೇಶ ಮಾಡಿತು. ರಾಹುಲ್ ಗಾಂಧಿ ಜತೆ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಸಾತ್ ನೀಡಿದರು.
ಸೈನಿಕರ ಜತೆ ಹೆಜ್ಜೆ
ಈ ನಡುವೆ ರಾಹುಲ್ ಗಾಂಧಿ ಅವರ ಜತೆ ನಿವೃತ್ತ ಸೈನಿಕರು ಹೆಜ್ಜೆ ಹಾಕಿದರು. ಸುಮಾರು 15 ಜನ ನಿವೃತ್ತ ಸೈನಿಕರ ಜತೆ ರಾಹುಲ್ ಹೆಜ್ಜೆ ಹಾಕಿದರು. ರಾಷ್ಟ್ರ ಧ್ವಜ ಹಿಡಿದು ನಡಿಗೆಯಲ್ಲಿ ಭಾಗಿಯಾದ ಸೈನಿಕರು ಬಳಿಕ ರಾಹುಲ್ ಕೈ ಹಿಡಿದು ನಡೆದರು.
ಇದೇ ವೇಳೆ ಮೆರವಣಿಗೆಯಲ್ಲಿ ಭಾಗವಹಿಸುತ್ತಲೇ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಸೇವಾದಲದ ಬ್ಯಾಂಡ್ ಬಾರಿಸುತ್ತಾ ಹೆಜ್ಜೆ ಹಾಕಿದರು. ಅವರು ಸೇವಾದಲದ ಟೋಪಿ ಕೂಡಾ ಧರಿಸಿದ್ದರು. ಅವರು ಸುಮಾರು ೧ ಕಿ.ಮೀ. ದೂರ ಬ್ಯಾಂಡ್ ಬಡಿಯುತ್ತಲೇ ಸಾಗಿದರು. ಅವರಿಗೆ ರಣದೀಪ್ ಸುರ್ಜೇವಾಲ ಸಾತ್ ನೀಡಿದರು.
ನಾಯಕರ ರನ್ನಿಂಗ್ ರೇಸ್
ಇದೇ ವೇಳೆ ಪಾದಯಾತ್ರೆಯಲ್ಲಿ ಕೈ ನಾಯಕರ ರನ್ನಿಂಗ್ ರೇಸ್ ಕೂಡಾ ಗಮನ ಸೆಳೆಯಿತು. ರಾಷ್ಟ್ರ ಧ್ವಜ ಹಿಡಿದು ರಾಹುಲ್ ಗಾಂಧಿ ಓಡುತ್ತಿದ್ದರೆ ಶಿವಕುಮಾರ್ ಕೂಡಾ ಜತೆಗೂಡಿದರು. ಸುಮಾರು ೧೦೦ ಮೀಟರ್ ಹೀಗೆ ಓಡಿದರು.
ಕಾಂಗ್ರೆಸ್ ಬೃಹತ್ ಸಮಾವೇಶ
ಈ ನಡುವೆ, ರಾಯಚೂರು ನಗರದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆದಿದ್ದು ಅದರಲ್ಲಿ 10,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಇದನ್ನೂ ಓದಿ | ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ; ಸರ್ಕಾರದ ನಡೆಗೆ ತಿರುಗಿಬಿದ್ದಿದ್ದ ಪ್ರತಿಪಕ್ಷ ನಾಯಕರು, ಶಿಕ್ಷಣ ತಜ್ಞರು