Site icon Vistara News

Bharat Jodo | ಕರ್ನಾಟಕ ಯಾತ್ರೆ ಮುಗಿಸಿದ ರಾಹುಲ್‌: ರಾಜ್ಯದ ಜನತೆಗೆ ಬರೆದ ಪತ್ರದಲ್ಲೇನಿದೆ?

rahul gandhi raichur

ರಾಯಚೂರು: ಕನ್ಯಾಕುಮಾರಿಯಿಂದ ಆರಂಭವಾಗಿ ಕರ್ನಾಟಕದಲ್ಲಿ 22 ದಿನ ಸಾಗಿದ ಭಾರತ್‌ ಜೋಡೊ ಯಾತ್ರೆಯ ಕರ್ನಾಟಕ ಅಭಿಯಾನ ಭಾನುವಾರ ಬೆಳಗ್ಗೆ ಪೂರ್ಣಗೊಂಡಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಯಾತ್ರೆಯು ಕೃಷ್ಣಾ ನದಿಯ ತಟದಿಂದ ತೆಲಂಗಾಣ ರಾಜ್ಯ ಪ್ರವೇಶಿಸಿದೆ.

ನಡುವೆ ಎರಡು ದಿನ ದಸರಾ ವಿಶ್ರಾಂತಿ, ಒಂದು ದಿನ ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ, ಎರಡು ದಿನ ಆಂಧ್ರ ನಡಿಗೆ ಹೊರತುಪಡಿಸಿ ನಿರಂತರ ರಾಜ್ಯದಲ್ಲಿ ರಾಹುಲ್‌ ಗಾಂಧಿ ನಡೆದಿದ್ದಾರೆ. ಈ ಸಮಯದಲ್ಲಿನ ಅನುಭವವನ್ನು ಮೆಲುಕು ಹಾಕುವುದರ ಜತೆಗೆ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿ ಪತ್ರವೊಂದನ್ನು ಬರೆದಿದ್ದಾರೆ.

“ಚಾಮರಾಜನಗರದ ಬಂಡೀಪುರ ಅರಣ್ಯದ ಹೊರವಲಯದಿಂದ ಹೊರಟ ಭಾರತ ಜೋಡೋ ಯಾತ್ರೆಯು ಸಾಂಸ್ಕೃತಿಕ ರಾಜಧಾನಿ ಮೈಸೂರು ಮೂಲಕ ಸಾಗಿ, ಕಾವೇರಿ, ತುಂಗಭದ್ರಾ, ಕೃಷ್ಣಾ ನದಿಗಳನ್ನು ದಾಟುತ್ತಾ ರಾಯಚೂರಿನ ಹತ್ತಿ ಗದ್ದೆಗಳ ಬಳಿ ಕರ್ನಾಟಕದಲ್ಲಿ ಸುಧೀರ್ಘ 22ನೇ ದಿನದಂದು ತನ್ನ ಪಯಣವನ್ನು ಪೂರ್ಣಗೊಳಿಸಿದೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕರ್ನಾಟಕ ಸಾಮರಸ್ಯದ ಬೀಡು ಎಂದಿರುವ ರಾಹುಲ್‌, “ಕರ್ನಾಟಕದ ಮಹಾಕವಿ ಕುವೆಂಪು ಅವರು ಈ ಭೂಮಿಯನ್ನು ʼಸರ್ವ ಜನಾಂಗದ ಶಾಂತಿಯ ತೋಟʼ ಎಂದು ಬಣ್ಣಿಸಿದ್ದರು. ಇದು ಖಂಡಿತ ಶಾಂತಿ ಹಾಗೂ ಸಾಮರಸ್ಯದ ನಾಡು. ಭಾರತ ಜೋಡೋ ಯಾತ್ರೆಯ ಮೂಲಕ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕರ್ನಾಟಕದ ಜನರು ಈ ಯಾತ್ರೆಗೆ ತಮ್ಮ ಅಭೂತಪೂರ್ವ ಬೆಂಬಲ ನೀಡಿ ಸ್ಪಂದಿಸಿದ್ದಾರೆ. ಅದಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದಿದ್ದಾರೆ.

ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿರುವ ರಾಹುಲ್‌, “ಇಲ್ಲಿನ ಜನರ ಅಪರಿಮಿತ ಸಾಮರ್ಥ್ಯವನ್ನು ದುರ್ಬಲಗೊಳಿಸಲಾಗುತ್ತಿದೆ ಎನ್ನುವುದು, ಯಾತ್ರೆಯು ಕರ್ನಾಟಕದ ಮೂಲಕ ಸಾಗುವ ವೇಳೆ ಸ್ಪಷ್ಟವಾಯಿತು. ವಿವಿಧ ಬೆಳೆ ಬೆಳೆಯುವ ಪ್ರತಿಯೊಂದು ಪ್ರದೇಶದ ರೈತರೂ ಹೆಚ್ಚುತ್ತಿರುವ ವೆಚ್ಚಗಳು, ಅನಿಶ್ಚಿತ ಇಳುವರಿ ಹಾಗೂ ಬೆಲೆ ಏರಿಳಿತದಿಂದ ತಮ್ಮ ಕುಟುಂಬಗಳನ್ನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ”.

“ನಾಡಿನ ಯುವಕರು ಎಷ್ಟೇ ಪ್ರಯತ್ನಿಸಿದರೂ, ತಮ್ಮ ಆಕಾಂಕ್ಷೆಗಳನ್ನು ಪೂರೈಸುವ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಣ್ಣ ಉದ್ಯಮಿಗಳು ಅಸಮರ್ಪಕ ಸಹಕಾರ ಅಥವಾ ಬೆಂಬಲವೇ ಇಲ್ಲದೇ ಉದ್ಯಮವನ್ನು ಮುಚ್ಚುತ್ತಿದ್ದಾರೆ. ಹಾಗೆಯೇ ಮಾರುಕಟ್ಟೆಯನ್ನೂ ಈ ಸರ್ಕಾರ ಕೇವಲ ಕೆಲವೇ ಕೆಲವು ಉದ್ಯಮಿಗಳ ಪರವಾಗಿ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು, ಮಹಿಳಾ ಕಾರ್ಮಿಕರು, ನೇಕಾರರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಆದಾಯ ಗಳಿಕೆಯಲ್ಲಿ ಸೋಲುತ್ತಿದ್ದಾರೆ. ಸಮಾಜದ ಶೋಷಿತ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ದ್ವೇಷ ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ. ರಾಜ್ಯದ ಭಾಷೆಗಳನ್ನು, ವೈವಿಧ್ಯಮಯ ಸಂಸ್ಕೃತಿಯನ್ನು ಹಾಗೂ ಇತಿಹಾಸವನ್ನು ತಿರುಚಿ ನಾಶಪಡಿಸಲಾಗುತ್ತಿದೆ” ಎಂದಿದ್ದಾರೆ.

ಕಾಂಗ್ರೆಸ್‌ನಿಂದ ನಡೆಸುತ್ತಿರುವ 40% ಸರ್ಕಾರ ಅಭಿಯಾನವನ್ನೂ ತಮ್ಮ ಪತ್ರದಲ್ಲಿ ರಾಹುಲ್‌ ಉಲ್ಲೇಖಿಸಿದ್ದಾರೆ. “‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ’ ಎಂದು ಗುರು ಬಸವಣ್ಣನವರು ಹೇಳಿದ್ದರು. ಕರ್ನಾಟಕದಲ್ಲಿ ಅವರ ಬೋಧನೆಗಳಿಗೆ ತದ್ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಇಡೀ ದೇಶಕ್ಕೆ ಬೆಳವಣಿಗೆಯ ದಾರಿದೀಪವಾಗಿದ್ದ ಕರ್ನಾಟಕ ರಾಜ್ಯ ಇಂದು ‘40% ಕಮಿಷನ್’ ಸರ್ಕಾರಕ್ಕೆ ಕುಖ್ಯಾತಿಗಳಿಸಿದ್ದು, ಬಿಜೆಪಿಯ “ಸೂಟು-ಬೂಟಿನ ಲೂಟಿ ಸರ್ಕಾರ”ಕ್ಕೆ ತಕ್ಕ ಉದಾಹರಣೆಯಾಗಿದೆ. ಉದ್ಯೋಗಕ್ಕಾಗಿ ಲಂಚ, ಗುತ್ತಿಗೆಗೆ ಲಂಚ, ಜನ ಸಾಮಾನ್ಯರ ಕೆಲಸಕ್ಕೆ ಲಂಚ, ಕರ್ನಾಟಕದಲ್ಲಿ ಬಿಜೆಪಿಗೆ ಮಾರಾಟವಾಗದ ಉಳಿದ ಯಾವುದೇ ಸರ್ಕಾರೀ ಸೇವೆ ಇಲ್ಲ. ಸಾಮಾಜಿಕ ಸೌಹಾರ್ದತೆ ಮತ್ತು ಸಾರ್ವಜನಿಕ ವಲಯದ ಬೆಳೆವಣಿಗೆ ಕುಂಠಿತವಾಗಿದ್ದು, ಅದು ಬಡವರು ಹಾಗೂ ದುರ್ಬಲರನ್ನು ಹೆಚ್ಚು ಭಾದಿಸುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಪಾರ್ಶ್ವವಾಯು ಹಿಡಿಯುವಂತೆ ಮಾಡಿದೆ” ಎಂದು ಹರಿಹಾಯ್ದಿದ್ದಾರೆ.

“ಶಾಂತಿಯ ತೋಟವಾದ ಕರ್ನಾಟಕವನ್ನು ಬಿಜೆಪಿಯ ದ್ವೇಷ ಮತ್ತು ದುರಾಡಳಿತದ ಪ್ರಯೋಗಾಲಯವನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಎಂದಿಗೂ ಬಿಡುವುದಿಲ್ಲ. ನಮ್ಮ ರಾಜ್ಯ ನಾಯಕರು, ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಕೋಟ್ಯಂತರ ಕನ್ನಡಿಗರ ಬೆಂಬಲದಿಂದ, ಅವಿರತ ಪ್ರಯತ್ನಗಳ ಮೂಲಕ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯ ಹಾದಿಯಲ್ಲಿ ಈ ಅದ್ಭುತ ರಾಜ್ಯದ ನಿಜವಾದ ಸಾಮರ್ಥ್ಯವನ್ನು ನಾವು ಅನಾವರಣಗೊಳಿಸುವ ದಿನಗಳು ಶೀಘ್ರದಲ್ಲೇ ಬರಲಿವೆ” ಎಂದು ತಿಳಿಸಿ ಪತ್ರವನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ | Bharat Jodo | ರಾಹುಲ್‌ ಪಾದಯಾತ್ರೆಯಲ್ಲಿ ರಮ್ಯಾ ಅಚ್ಚರಿಯ ಎಂಟ್ರಿ, ರಾಜ್ಯ ಕಾಂಗ್ರೆಸ್‌ ನಾಯಕರು ತಬ್ಬಿಬ್ಬು!

Exit mobile version