ರಾಯಚೂರು: ಹನುಮ ಮಾಲಾಧಾರಿಗಳಿಗೆ (Hanuman Devotees) ಬೊಲೇರೋ ವಾಹನ (Bolero Hit) ಡಿಕ್ಕಿಯಾಗಿ ಸ್ಥಳದಲ್ಲಿಯೇ (Road Accident) ಮೂರು ಜನ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರಿನ ಶಕ್ತಿನಗರದ ಯಾದವ ನಗರ ಕ್ರಾಸ್ ಬಳಿ ಘಟನೆ ನಡೆದಿದೆ. ಹನುಮಮಾಲಾಧಾರಿಗಳು ಹನುಮಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ನೀರು ತರಲು ಬಂದಾಗ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಮಸ್ವರೂಪಿ ಬೊಲೆರೋ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ.
ಅಯ್ಯನಗೌಡ (28) ಮಹೇಶ (22), ಉದಯಕುಮಾರ (28) ಮೃತ ದುರ್ದೈವಿಗಳು. ರಮೇಶ ಭೂಷಣ ಎಂಬ ಇಬ್ಬರಿಗೆ ಗಂಭೀರ ಗಾಯವಾಗಿದೆ. ಎಲ್ಲರೂ ರಾಯಚೂರಿನ ಹೆಗಸನಹಳ್ಳಿ ನಿವಾಸಿಗಳು. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಮಾನದಲ್ಲಿ ಬಂತು 10 ಅನಕೊಂಡ! ಬ್ಯಾಂಕಾಕ್‌ನಿಂದ ಅಕ್ರಮ ಆಮದು, ಬಂಧನ
ಬೆಂಗಳೂರು: ಬೆಂಗಳೂರು ಏರ್ ಕಸ್ಟಮ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಬ್ಯಾಂಕಾಕ್‌ನಿಂದ ಅಕ್ರಮವಾಗಿ ಕದ್ದು ತರಲಾಗುತ್ತಿದ್ದ 10 ಅನಕೊಂಡಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ.
ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ 10 ಹಳದಿ ಆನಕೊಂಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್‌ನಿಂದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಲಗೇಜ್ ಬ್ಯಾಗ್‌ನಲ್ಲಿ ಈ ಆನಕೊಂಡಗಳನ್ನು ತಂದಿದ್ದರು. ಏರ್ ಕಸ್ಟಮ್ ಅಧಿಕಾರಿಗಳ ಪರಿಶೀಲನೆ ವೇಳೆ ಇವು ಪತ್ತೆಯಾಗಿವೆ. ಸದ್ಯ ಅನಕೊಂಡಗಳನ್ನು ರಕ್ಷಿಸಿ ಆರೋಪಿಯನ್ನು ಏರ್ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಹಳದಿ ಬಣ್ಣ ಉಳ್ಳ ಆನಕೊಂಡ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅರಣ್ಯ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಹಳದಿ ಅನಕೊಂಡವನ್ನು ಪರಾಗ್ವೆಯನ್ ಅನಕೊಂಡ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಅಮೆರಿಕಾಕ್ಕೆ ಸೇರಿದ ಬೋವಾ ಜಾತಿಯ ಹಾವು. ಇದು ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದು. ಆದರೆ ಅದರ ಹತ್ತಿರದ ಸಂಬಂಧಿ ಹಸಿರು ಅನಕೊಂಡಕ್ಕಿಂತ ಚಿಕ್ಕದು. ಇವುಗಳ ಮರಿಗಳನ್ನು ಕದ್ದು ಸಾಗಿಸುವ ವ್ಯಾಪಕ ಜಾಲ ಅಂತಾರಾಷ್ಟ್ರೀಯವಾಗಿ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಕಸ್ಟಮ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ವಿದೇಶದ ವಿಶಿಷ್ಟ ಪ್ರಾಣಿಗಳನ್ನು (Exotic Animals) ಆಮದು ಮಾಡುವುದು ಹಾಗೂ ಸಾಕುವುದನ್ನು ನಿಷೇಧಿಸಲಾಗಿದೆ.
ʻಚುನಾವಣೆ ಪ್ರಚಾರ ಮಾಡಿದ್ರೆ ಹುಷಾರ್!ʼ ಎಂದು ಲಾಂಗ್ ಝಳಪಿಸಿದ ಜೆಡಿಎಸ್ ನಾಯಕ
ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಚಿಂತಾಮಣಿಯಲ್ಲಿ ಜೆಡಿಎಸ್ ನಾಯಕನೊಬ್ಬ ಎದುರಾಳಿಗಳ ಮುಂದೆ ಲಾಂಗ್ ಝಳಪಿಸಿ ಆವಾಜ್ ಹಾಕಿದ್ದಾನೆ. ಚುನಾವಣೆ ಪ್ರಚಾರ, ಮತದಾನದಲ್ಲಿ ಪಾಲ್ಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಜೆಡಿಎಸ್ ಮುಖಂಡನಿಂದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆ ಹಾಕಿದ ಆರೋಪವಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದಲ್ಲಿ ಲಾಂಗು ಹಿಡಿದು ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೋ ಸಾಕ್ಷಿ ಲಭ್ಯವಾಗಿದೆ.
ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ ಕತ್ತರಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಎದುರಾಳಿಗಳಾದ ಕಲ್ಯಾಣ್ ರೆಡ್ಡಿ ಹಾಗು ಆತನ ಕುಟುಂಬದವರನ್ನು ಅಟ್ಟಾಡಿಸಿ ಬೆದರಿಸಿದ್ದಾನೆ.
ಈ ಕುರಿತು ಶ್ರೀನಿವಾಸರೆಡ್ಡಿ ವಿರುದ್ಧ ಕಲ್ಯಾಣ್ ಕುಮಾರ್ ಪ್ರಾಣಬೆದರಿಕೆ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಕುಮಾರ್ ಹಾಲಿ ಸಚಿವ ಡಾ. ಎಂ. ಸಿ ಸುಧಾಕರ್ ಬೆಂಬಲಿಗರಾಗಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ