ರಾಯಚೂರು: ರಾಯಚೂರಲ್ಲಿ ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ (KSRTC) ಬಸ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಖಾಸಗಿ ಬಸ್ ಚಾಲಕ ಪುಂಡಲೀಕ (30) ಎಂಬಾತ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಹರಾಪೂರ ಗ್ರಾಮದ ಬಳಿ ಘಟನೆ ನಡೆದಿದೆ.
ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಖಾಸಗಿ ಬಸ್‌ವೊಂದು ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಖಾಸಗಿ ಬಸ್‌ನ ಮುಂಭಾಗ ಜಖಂ ಗೊಂಡಿದೆ. ಘಟನೆಯಲ್ಲಿ ಚಾಲಕ ಮೃತಪಟ್ಟರೆ, 9 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ಕಲಬುರಗಿ ಕಡೆ ಹೊರಟಿತ್ತು. ಖಾಸಗಿ ಬಸ್ ಬೆಂಗಳೂರಿನಿಂದ-ಯಾದಗಿರಿ ಯತ್ತ ಹೊರಟಿತ್ತು . ಈ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಖಾಸಗಿ ಬಸ್
ದಾವಣಗೆರೆ: ಖಾಸಗಿ ಬಸ್‌ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಬಸ್ಸಿನಲ್ಲಿದ್ದ 14 ಜನರಿಗೆ ಗಂಭೀರ ಗಾಯವಾಗಿದೆ. ಗಾಯಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆ, ಜಗಳೂರು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾವಣಗೆರೆಯ ಜಗಳೂರು ಪಟ್ಟಣದ ಕೆರೆ ಏರಿಯ ಮೇಲೆ ಅಪಘಾತ ಸಂಭವಿಸಿದೆ.
ಹೂವಿನಹಡಗಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಬಹುತೇಕರು ಜಗಳೂರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Physical Abuse : ಹಾಲು ತರಲು ಹೋದ ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ ದುಷ್ಟ; ಬೆತ್ತಲೆಗೊಳಿಸಿ ಥಳಿಸಿದ ಯುವಕರು
ಬೈಕ್-ಆಟೋ ಮುಖಾಮುಖಿ ಡಿಕ್ಕಿ
ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿದೆ. ಮೂವರಿಗೆ ಗಂಭೀರ ಗಾಯವಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಜವಂತಿ ಬಳಿ ಅಪಘಾತ ನಡೆದಿದೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕ!
ವಿಜಯನಗರದ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್‌ಎಲ್‌ಸಿ (LLC) ಕಾಲುವೆಯಲ್ಲಿ ನೀರಿನ ರಭಸಕ್ಕೆ ಯುವಕನೊರ್ವ ಕೊಚ್ಚಿ ಹೋಗುತ್ತಿದ್ದವನು ಬಚಾವ್ ಆಗಿದ್ದಾನೆ. ಹೊಸಪೇಟೆ ತಾಲೂಕಿನ ಕಮಲಾಪುರ ಮಾರ್ಗವಾಗಿ ಹರಿದು ಹೋಗುವ ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆ ಇದಾಗಿದೆ.
ತಮಿಳುನಾಡು ಮೂಲದ ಯುವಕ ದೇವಸ್ಥಾನಕ್ಕೆ ಬಂದಿದ್ದ. ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದ. ನೀರಿನ ರಭಸ ಹೆಚ್ಚಿಗೆ ಇರುವುದರಿಂದ ಯುವಕ ಕೊಚ್ಚಿ ಹೋಗುತ್ತಿದ್ದ. ಕೂಡಲೇ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಗಾಬರಿಗೊಂಡ ಯುವಕನಿಗೆ ಸ್ಥಳೀಯರು ಧೈರ್ಯ ತುಂಬಿದರು. ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ