ರಾಯಚೂರು: ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ (Tipu Sultan Insult) ಪರಿಣಾಮ ಬೆಳ್ಳಂಬೆಳಿಗ್ಗೆಯಿಂದಲೇ ರಾಯಚೂರು ಜಿಲ್ಲೆಯ (Raichur News) ಸಿರವಾರ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಚಪ್ಪಲಿ ಹಾರ ಹಾಕಿದ್ದು, ಮುಂಜಾನೆ ಕಣ್ಣಿಗೆ ಬಿದ್ದಿದೆ. ಇದರಿಂದ ರೊಚ್ಚಿಗೆದ್ದ ಮುಸ್ಲಿಂ ಸಮುದಾಯದ ಯುವಕರು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು.
ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಇದರಿಂದ ಸಿರವಾರ ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಬಿಗುವಿನ ವಾತಾವರಣ ಉಂಟಾಗಿದ್ದು, ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಸಂಚಾರಕ್ಕೆ ತಡೆ ಒಡ್ಡಿದರಲ್ಲದೆ, ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಮಾಲಿಕರು ಆತಂಕಪಟ್ಟುದು ಕಂಡುಬಂತು.
ಪೊಲೀಸರು ಸ್ಥಳದಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಟಿಪ್ಪು ಸುಲ್ತಾನ್ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳ ಪತ್ತೆಗೆ ಸ್ಥಳೀಯ ಸಿಸಿ ಟಿವಿ ಫೂಟೇಜ್‌ಗಳ ಪರಿಶೀಲನೆ ಸೇರಿದಂತೆ ಅಗತ್ಯ ತನಿಖಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಬಿಜೆಪಿ ಸುತ್ತಾಟ
ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದದ ಹಿನ್ನೆಲೆಯಲ್ಲಿ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿದ್ದಾರೆ. ಭಾನುವಾರ ಕೆರಗೋಡಿನಲ್ಲಿ, ಸೋಮವಾರ ಮಂಡ್ಯದಲ್ಲಿ ಪ್ರತಿಭಟನೆ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಹಲವು ಜನರಿಗೆ ಗಾಯಗಳಾಗಿದ್ದವು. ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ನೇತೃತ್ವದಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಕೆರಗೋಡು ಗ್ರಾಮದಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಕ್ಷೇಮ ವಿಚಾರಿಸಿದರು.
ಪಾದಯಾತ್ರೆ ವೇಳೆ ಕಾಂಗ್ರೆಸ್ ಶಾಸಕನ ಫ್ಲೆಕ್ಸ್ ಹರಿದಿದ್ದ ಆರೋಪದಲ್ಲಿ ಪೊಲೀಸರು ಕೆರಗೋಡು ಗ್ರಾಮದ ಅಪ್ರಾಪ್ತನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಬಾಲಕನ ಜೊತೆ ತಂದೆ ಪಾಪಣ್ಣನನ್ನು ಬೆಳ್ಳಂಬೆಳಿಗ್ಗೆ ಕರೆದೊಯ್ದಿದ್ದ ಪೊಲೀಸರು ವಿಚಾರಣೆ ನಡೆಸಿ ವಾಪಾಸ್ ಕಳುಹಿಸಿದ್ದರು.
ವಿಚಾರ ತಿಳಿದು ಬಾಲಕನ ಮನೆಗೆ ಆಗಮಿಸಿದ ಬಿಜೆಪಿ ನಿಯೋಗವನ್ನು ತಂದೆ ತಡೆದು ಬಾಗಿಲು ಹಾಕಿಕೊಂಡಿದ್ದಾರೆ. “ನೀವು ಮನೆಗೆ ಬರೋದು ಬೇಡ, ನಮಗೆ ರಾಜಕೀಯ ಬೇಡ. ಯಾವ ಧ್ವಜವಾದರೂ ಹಾರಾಡಲಿ” ಎಂದಿದ್ದಾರೆ. “ನಾವು ನ್ಯಾಯಕ್ಕಾಗಿ ಹೋರಾಡಿದ್ದೇವೆ ಹೊರತು ರೇಪ್, ದರೋಡೆ ಮಾಡಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಸಮಾಧಾನಪಡಿಸಿ ಧೈರ್ಯ ಹೇಳಿದ್ದಾರೆ.
ಇದನ್ನೂ ಓದಿ: Hanuman Flag : ಕೆರಗೋಡು ಬಳಿಕ ಭಟ್ಕಳದಲ್ಲಿ ಧ್ವಜ ದಂಗಲ್; ಸಾವರ್ಕರ್ ವೃತ್ತ, ಭಗವಾಧ್ವಜ ತೆರವಿಗೆ ಭುಗಿಲೆದ್ದ ಆಕ್ರೋಶ