ರಾಯಚೂರು: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಹೈ ಅಲರ್ಟ್ ತೆಗೆದುಕೊಂಡಿದೆ. ವೈರಸ್ ಪತ್ತೆಯಾದ 5 ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬಾಲಕಿ ವಾಸಿಸುವ ಮನೆಯಿರುವ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ಗ್ರಾಮದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ವೈರಸ್‌ನ ಬೆನ್ನು ಬಿದ್ದಿದ್ದು, ಬಾಲಕಿಯ ಟ್ರಾವೆಲ್ ಹಿಸ್ಟರಿ ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ. ಸೊಳ್ಳೆ ಕಡಿತದಿಂದ ಉದ್ಭವಿಸುವ ಝಿಕಾ ವೈರಸ್‌ಗೆ ಆಂಧ್ರ, ತೆಲಂಗಾಣದ ಹಿನ್ನೆಲೆಯಿದೆ.
ಮಾನ್ವಿಯಲ್ಲೇ ಮೊಕ್ಕಾಂ ಹೂಡಿದ ಕೇಂದ್ರದ ವೈದ್ಯರ ತಂಡ ಬಾಲಕಿ ಹಾಗೂ ಕುಟುಂಬಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪುಣೆಯ ಲ್ಯಾಬ್ ರಿಪೋರ್ಟ್ ಆಧರಿಸಿ ಜೊತೆಗೆ ಇತರ ಮಾಹಿತಿ ಕಲೆಹಾಕಿ ಮುಂದಿನ ಚಿಕಿತ್ಸೆ ನಿರ್ಧಾರ ತೆಗೆದುಕೊಳ್ಳಲಿದೆ.
ಬಾಲಕಿ ಮೊದಲು ಕಳೆದ ತಿಂಗಳು 14ರಂದು ಮಾನ್ವಿಯಲ್ಲಿ ಚಿಕಿತ್ಸೆ ಪಡೆದಿದ್ದಳು. ಬಳಿಕ ಸಿಂಧನೂರಿನ ಮಕ್ಕಳ ಆಸ್ಪತ್ರೆಯಲ್ಲೂ ಬಾಲಕಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಸಿಂಧನೂರಿನಿಂದ ಬಳ್ಳಾರಿಯ ವಿಮ್ಸ್‌ಗೆ ವೈದ್ಯರು ಕಳುಹಿಸಿದ್ದರು. ನ.15-18ರವರೆಗೆ ಬಳ್ಳಾರಿಯಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿತ್ತು. ಬಳ್ಳಾರಿಯಲ್ಲೇ ಬಾಲಕಿಯ ಸ್ಯಾಂಪಲ್ ಪಡೆದಿದ್ದ ವೈದ್ಯರು ಅನುಮಾನ ಬಂದು ಪುಣೆಯ ಲ್ಯಾಬಿಗೆ ಸ್ಯಾಂಪಲ್ ರವಾನಿಸಿದ್ದರು. ಡಿ.3ರಂದು ಬಂದ ರಿಪೋರ್ಟ್‌ನಲ್ಲಿ ಝಿಕಾ ಪಾಸಿಟಿವ್ ಗೊತ್ತಾಗಿದೆ ಎಂದು ಮಾನ್ವಿ ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Zika virus | ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ರಾಯಚೂರಿನಲ್ಲಿ ಪತ್ತೆ; 5 ವರ್ಷದ ಬಾಲಕಿಗೆ ಪಾಸಿಟಿವ್
ಮದ್ದಿಲ್ಲದ ವೈರಸ್
ಝಿಕಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ನಿಗದಿತ ಚಿಕಿತ್ಸೆ ಆಗಲಿ, ಲಸಿಕೆಯಾಗಲಿ ಇಲ್ಲ. ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯವೆಂದು ಅಧ್ಯಯನದಿಂದ ತಿಳಿದು ಬಂದಿದೆ. ಹಗಲಿನಲ್ಲಿ ಬರುವ ಈಡಿಸ್ ಸೊಳ್ಳೆಗಳ ಕಡಿತದಿಂದ ಝಿಕಾ ವೈರಸ್ (Zika virus) ಹರಡಲಿದೆ. ಹೀಗಾಗಿ ಆದಷ್ಟು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಜತೆಗೆ ಸೊಳ್ಳೆ ನಿವಾರಕ ಕ್ರೀಮ್ ಬಳಕೆ ಅಥವಾ ಸೊಳ್ಳೆ ಪರದೆ ಬಳಕೆ ಮಾಡುವ ಮೂಲಕ ಸೋಂಕಿನಿಂದ ತಪ್ಪಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Health Guidelines | ರಾಜ್ಯದಲ್ಲಿ ಭಾರಿ ಮಳೆ, ಚಳಿಯಿಂದ ಆರೋಗ್ಯ ಸಮಸ್ಯೆ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ