Site icon Vistara News

Rain Effect | ತುರ್ತು, ಅವಶ್ಯಕ ನಡುವಿನ ವ್ಯತ್ಯಾಸ ತಿಳಿಸಿ ಬಿಎಸ್‌ವೈಗೆ ಪತ್ರ ಬರೆದ ಸಂಕೇತ ಏಣಗಿ

Rain Effect

ಬೆಂಗಳೂರು: ರಾಜ್ಯಾದ್ಯಂತ ಮಳೆಯಿಂದ ಅಪಾರ ಪ್ರಮಾಣದಲ್ಲಿ (Rain Effect) ಹಾನಿಯಾಗಿದೆ. ಸಾವು-ನೋವುಗಳು ಸಂಭವಿಸಿದೆ. ಸೇತುವೆಗಳು, ಶೈಕ್ಷಣಿಕ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಗಿವೆ.

ಆದರೆ, ರಾಜ್ಯದಲ್ಲಿ ಸಾವರ್ಕರ್‌ ವಿಷಯ ಮಹತ್ವ ಪಡೆದುಕೊಂಡಿದೆ. ಯಾವುದೇ ವಿಷಯ ಹಾಗೂ ವೈಚಾರಿಕ ಪ್ರಾಶಸ್ತ್ಯಗಳಲ್ಲಿ ‘ತುರ್ತು’, ‘ಅವಶ್ಯಕ’ ಎಂಬ ಎರಡು ವಿಧಗಳಿವೆ. ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯವಾದಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಸಂಕೇತ ಏಣಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಮುಖೇನ ಕೋರಿದ್ದಾರೆ. ಸಂಕೇತ ಅವರ ಪತ್ರದ ಪೂರ್ಣಪಾಠ ಇಂತಿದೆ.

ಇವರಿಗೆ,

ಮಾನ್ಯ ಶ್ರೀ ಯಡಿಯೂರಪ್ಪ ರವರು,

ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ನಾಯಕರು

ಸನ್ಮಾನ್ಯರೇ,

ತಾವು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿಯ ಅತ್ಯಂತ ಹಿರಿಯ ನಾಯಕರಾಗಿದ್ದು, ಕರ್ನಾಟಕ ರಾಜ್ಯದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ತಮಗೆ ಸಂಪೂರ್ಣ ಮಾಹಿತಿ ಇದೆ ಎಂದು ಭಾವಿಸುತ್ತೇನೆ. ಆದಾಗ್ಯೂ, ಈ ಮೂಲಕ ತಮ್ಮ ಗಮನಕ್ಕೆ ಮತ್ತೊಮ್ಮೆ ತರುತ್ತಿದ್ದೇನೆ.

ಕರ್ನಾಟಕದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸುಮಾರು 73 ಜನ ಮೃತಪಟ್ಟಿದ್ದಾರೆ. ಸುಮಾರು 7,300 ಜನ ನಿರಾಶ್ರಿತರಾಗಿ 75 ನಿರಾಶ್ರಿತರ ತಾಣದಲ್ಲಿ ತಂಗಿದ್ದಾರೆ. ಸುಮಾರು 8,197 ಜನ ನಿರ್ಗತಿಕರಾಗಿ ಬೇರೆಡೆ ವಲಸೆ ಹೋಗಿದ್ದಾರೆ. ರಾಜ್ಯದ 14 ಜಿಲ್ಲೆಗಳ ಸುಮಾರು 161 ಗ್ರಾಮಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಜನರ ಬದುಕು ದುಸ್ತರವಾಗಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 21,727 ಜನ ಬಳಲುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 666 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಸುಮಾರು 2,949 ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿ, ಸುಮಾರು 17,750 ಮನೆಗಳು ಭಾಗಶಃ ಹಾನಿಯಾಗಿವೆ. ರಾಜ್ಯದಲ್ಲಿ ಸುಮಾರು 1,29,087 ಹೆಕ್ಟೇರ್ ಜಮೀನಿನಲ್ಲಿರುವ ಬೆಳೆ ಸಂಪೂರ್ಣ ನಾಶವಾಗಿ, ಸುಮಾರು 7,942 ಹೆಕ್ಟೇರ್ ತೋಟಗಾರಿಕೆ ಜಮೀನಿನಲ್ಲಿರುವ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಸುಮಾರು 11,768 ಕಿ.ಮೀ. ರಸ್ತೆ, 1,152 ಸೇತುವೆಗಳು, 2,249 ಅಂಗನವಾಡಿ ಕೇಂದ್ರಗಳು, 122 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವ್ಯವಸಾಯಕ್ಕೆ ಉಪಯುಕ್ತವಾದ 95 ಕೆರೆಗಳು ಹಾಳಾಗಿರುತ್ತವೆ.

ಇವೆಲ್ಲ ರಾಜ್ಯದ ಅತ್ಯಂತ ತುರ್ತು ಹಾಗೂ ಪ್ರಮುಖ ವಿಚಾರಗಳ ಹೊರತಾಗಿಯೂ, ವಿನಾಯಕ ಸಾವರ್ಕರ್‌ರವರು  ದೇಶ ಕಂಡ ಅತಿ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲು ತಾವು ‘ಸಾವರ್ಕರ್ ರಥಯಾತ್ರೆ’ ಹಮ್ಮಿಕೊಂಡು ನಿನ್ನೆಯ ದಿನ ಚಾಲನೆ ನೀಡಿರುತ್ತೀರಿ. ಸಂತೋಷ,

ತಮಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಆದಾಗ್ಯೂ ಹೇಳದಿದ್ದಲ್ಲಿ, ನನ್ನಿಂದ ಆತ್ಮವಂಚನೆಯಾಗುತ್ತದೆ ಎಂದು ಭಾವಿಸಿ, ಎರಡು ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ. ತಪ್ಪಿದ್ದಲ್ಲಿ ಕ್ಷಮಿಸಿ.

ಯಾವುದೇ ವಿಷಯ ಹಾಗೂ ವೈಚಾರಿಕ ಪ್ರಾಶಸ್ತ್ಯಗಳಲ್ಲಿ ಎರಡು ವಿಧ. ಮೊದಲನೆಯದ್ದು ‘ತುರ್ತು’, ಎರಡನೆಯದ್ದು ‘ಅವಶ್ಯಕ’. ಯಾವ ವಿಷಯ ‘ತುರ್ತು’ ಆಗಿರುತ್ತದೆಯೋ ಅದು ‘ಅತ್ಯವಶ್ಯಕʼ ಕೂಡ. ಅದಕ್ಕೆ ಮೊದಲನೆಯ ಪ್ರಾಶಸ್ತ್ಯವನ್ನು ನೀಡಿ ಗಮನಹರಿಸಬೇಕು. ಹಾಗೆಯೇ, ಯಾವ ವಿಷಯವು ಅವಶ್ಯಕವಾಗಿದ್ದು, ಆದರೆ ‘ತುರ್ತುʼ ಹಾಗೂ ‘ಅತ್ಯವಶ್ಯಕʼ ಆಗಿರದಿದ್ದರೆ, ಅದಕ್ಕೆ ಎರಡನೆಯ ಪ್ರಾಶಸ್ತ್ಯ ನೀಡಬೇಕು. ಇದು, ಜಗತ್ತಿನ ‘ಆದ್ಯತೆ’ಯ ನಿಯಮ.

ತಾವು ಸಾವರ್ಕರ್ ದೇಶ ಕಂಡ ಅತಿ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲು ‘ಸಾವರ್ಕರ್ ರಥಯಾತ್ರೆ’ ಮಾಡುತ್ತಿರುವುದು ರಾಜ್ಯದ ಜನತೆಗೆ ಎರಡನೆಯ ಪ್ರಾಶಸ್ತ್ಯದ ವಿಚಾರವಾಗಿ, ರಾಜ್ಯದ ಜನತೆಯ ಮೊದಲ ಪ್ರಾಶಸ್ತ್ಯದ ವಿಚಾರವಾಗಿರುವ ‘ಕರ್ನಾಟಕದಲ್ಲಿಯ ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ತೊಂದರೆ ಹಾಗೂ ಅದರ ಪರಿಹಾರದ ಕಡೆಗೆ’ ತಾವು ಹೆಚ್ಚು ಗಮನಹರಿಸಬೇಕಾಗಿತ್ತು, ಎಂಬುದು ರಾಜ್ಯದ ಜನತೆಯ ಅಂಬೋಣ.

ನಂತರದ ದಿನಗಳಲ್ಲಿ, ಸಾವರ್ಕರ್ ದೇಶ ಕಂಡ ಅತಿ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲು ತಾವು ‘ಸಾವರ್ಕರ್ ರಥಯಾತ್ರೆ’ ಅಥವಾ ‘ಸಾವರ್ಕರ್ ರಥೋತ್ಸವ’ ಮಾಡಲಿಚ್ಚಿಸುವುದು ಔಚಿತ್ಯ ಎಂಬುದು ರಾಜ್ಯದ ಜನತೆಯ ಅನಿಸಿಕೆ.

ಧನ್ಯವಾದಗಳೊಂದಿಗೆ

ತಮ್ಮ ಹಿತೈಷಿ,

ಸಂಕೇತ ಏಣಗಿ

ಇದನ್ನೂ ಓದಿ | Chakravarti Sulibele : ಸಾವರ್ಕರ್ ದೇಶಪ್ರೇಮ ವಿರೋಧಿಸುವ ಪ್ರಯತ್ನ

Exit mobile version