Site icon Vistara News

ವರುಣಾರ್ಭಟಕ್ಕೆ ದೇವರೂ ತತ್ತರ: ಚೌತಿ ಹಬ್ಬಕ್ಕೆ ಮುನ್ನವೇ ನೀರಲ್ಲಿ ಕರಗಿ ಹೋದವು ಗಣೇಶ ಮೂರ್ತಿಗಳು!

Ganesh bellary

ಶಶಿಧರ್ ಮೇಟಿ, ಬಳ್ಳಾರಿ.
ಗಣೇಶ ಚತುರ್ಥಿ ಬಹುತೇಕರ ಭಕ್ತಿ, ಭಾವಕ್ಕೆ ಕಾರಣವಾದರೆ, ಕೆಲವೊಂದು ಕುಟುಂಬಕ್ಕೆ ವರ್ಷದ ಬದುಕನ್ನು ಕಟ್ಟಿಕೊಡುವ ಹಬ್ಬ. ಕೋಲ್ಕೊತ್ತಾ ಮೂಲದ ಕುಟುಂಬವೊಂದು ಕಳೆದ ಮಾರ್ಚ್‌ ತಿಂಗಳಲ್ಲಿ ಇಲ್ಲಿಗೆ ಬಂದು ಗಣೇಶನ ಮೂರ್ತಿ ತಯಾರಿಸುವ ಕೆಲಸದಲ್ಲಿ ನಿರತವಾಗಿದೆ. ಆದರೆ, ಈ ಕಲಾವಿದರ ನಾಲ್ಕೈದು ತಿಂಗಳ ಶ್ರಮವನ್ನು ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ನೀರು ಪಾಲು ಮಾಡಿದೆ. ಆರ್ಡರ್ ಪಡೆದು ಮಣ್ಣಿನಲ್ಲಿ ಬೃಹದಾಕಾರದಲ್ಲಿ ಸಿದ್ಧಪಡಿಸಿಟ್ಟಿದ್ದ ಸುಮಾರು 120ಕ್ಕೂ ಹೆಚ್ಚು ಮೂರ್ತಿಗಳ ಕೆಳಭಾಗ ನೀರಿನಲ್ಲಿ ಕರಗಿ ಹೋಗಿರುವುದರಿಂದ ಕಲಾವಿದರ ಕುಟುಂಬ ಕಷ್ಟಕ್ಕೆ ಸಿಲುಕಿದೆ.

10 ವರ್ಷದಿಂದ ಮಣ್ಣಿನ ಗಣೇಶ ತಯಾರಿಕೆ
ಕಳೆದ 10 ವರ್ಷಗಳಿಂದ ಸುಹಾಸ್ ಮತ್ತು ದಿವಾಸ್ ಸಹೋದರರ ಕುಟುಂಬವೂ ಗಣೇಶ ಚತುರ್ಥಿಗೆ ಗಣಿನಾಡು ಬಳ್ಳಾರಿಗೆ ಬಂದು ಹೊಸಪೇಟೆ ರಸ್ತೆಯ ರಾಮೇಶ್ವರಿ ನಗರದಲ್ಲಿ ಶೆಡ್ ಮಾಡಿಕೊಂಡು ಪಿಓಪಿ ಮತ್ತು ರಾಸಾಯನಿಕ ಬಣ್ಣಗಳ ಬಳಕೆ ಇಲ್ಲದೆ ಕೆಂಪು ಮಣ್ಣಿನಿಂದ ಗಣೇಶ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರತಿವರ್ಷವು ಹಬ್ಬದ 3-4 ತಿಂಗಳ ಮುಂಚಿತವಾಗಿಯೇ ಬಳ್ಳಾರಿಗೆ ಆಗಮಿಸಿ ಗಣೇಶ್ ಮೂರ್ತಿ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲಿ ಆರು ತಿಂಗಳಲ್ಲಿ ದುಡಿದ ಹಣವೇ ಅವರಿಗೆ ವರ್ಷದ ಜೀವನದ ಆಧಾರವಾಗಿದೆ.

ಕೆಸರಿನಲ್ಲಿ ಮುಳುಗಿರುವ ಗಣೇಶ ಮೂರ್ತಿಗಳು

ಇನ್ನೆರಡು ದಿನದಲ್ಲಿಯೇ ಮೂರ್ತಿ ಸಿದ್ಧತೆ ಅನಿವಾರ್ಯ
ಕಳೆದ 2-3 ತಿಂಗಳಿಂದ ಗಣೇಶ ಸಿದ್ಧತೆಗೆ ಆರ್ಡರ್ ಕೊಟ್ಟವರು ಕೂಡಾ ಈಗ ಮೂರ್ತಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ ಸುಹಾಸ್ ಮತ್ತು ದಿವಾಸ್ ನೇತೃತ್ವದ 10 ಜನರ ತಂಡವು ಹೇಗೋ ಉಳಿದ ಅವಧಿಯಲ್ಲಿ ಮೂರ್ತಿಗಳನ್ನು ಸಿದ್ಧಪಡಿಸಿ ನೀಡಬೇಕಾಗಿದೆ.

ತರಹೇವಾರಿ ಗಣೇಶ್ ಸಿದ್ಧತೆ
ಸುಮಾರು 120ಕ್ಕೂ ಹೆಚ್ಚು ಮಣ್ಣಿನ ಗಣೇಶ್ ಮೂರ್ತಿಗಳಿಗೆ ಆರ್ಡರ್ ಕೊಟ್ಟಿದ್ದರಿಂದ 10ಕ್ಕೂ ಹೆಚ್ಚು ಕಲಾವಿದರು ಹಗಲುರಾತ್ರಿ ಕಷ್ಟಪಟ್ಟು ಪುನೀತ್‌ ರಾಜ್‌ಕುಮಾರ್‌ ಗಣೇಶ,, ರಥದ ಮೇಲಿನ ಗಣೇಶ, ಕಾಣಿಪಾಕಂ ಗಣೇಶ, ಸಪ್ತನಾಗರ ಗಣಪ, ಆಂಜನೇಯಸ್ವಾಮಿ ರೂಪದ ಗಣಪ, ಸಪ್ತನಾಗರ ಗಣಪ, ಹತ್ತು ತಲೆ ರಾವಣಾಸುರ ಗಣಪ ಸೇರಿದಂತೆ ಸುಮಾರು ಹತ್ತಾರು ಮಾದರಿಯ ತರಹೇವಾರಿ ಗಣೇಶ ಮೂರ್ತಿಯನ್ನು ಸಿದ್ಧಪಡಿಸಿದ್ದರು.

ಸ್ಥಳೀಯ ಜನರ ಸಾಥ್
ನೀರಿನಲ್ಲಿ ಗಣೇಶ ಮೂರ್ತಿಗಳು ಕರಗಿಹೋಗುತ್ತಿವೆ ಎಂಬ ವಿಷಯ ತಿಳಿದ ತೂರ್ಪು ಗುರುರಾಜ್ ಅವರು ತಮ್ಮ 10 ಜನ ಸ್ನೇಹಿತರೊಂದಿಗೆ ತೆರಳಿ, ಶೆಡ್‌ಗೆ ನುಗ್ಗುತ್ತಿರುವ ನೀರನ್ನು ರಾತ್ರೋರಾತ್ರಿ ಜೆಸಿಬಿ ಸಹಕಾರ ದಿಂದ ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ, ಇನ್ನು ನೀರಿನಲ್ಲಿ ಕರಗಿರುವ ಮೂರ್ತಿಗೆ ಅಗತ್ಯ ಸಹಕಾರ ನೀಡಲು ಮುಂದಾಗುವ ಮೂಲಕ ಗಣೇಶ್ ಮೂರ್ತಿ ಸಿದ್ಧತೆ ಮಾಡುವ ಕಲಾವಿದರಿಗೆ ಸಾಥ್ ನೀಡುತ್ತಿದ್ದಾರೆ.

ʻʻಕಲಾವಿದರು ಕೋಲ್ಕೊತಾದಿಂದ ಗಣೇಶ ಮೂರ್ತಿ ಸಿದ್ಧಪಡಿಸಲು ಬಂದಿದ್ದಾರೆ. ಆದರೆ ರಾತ್ರೋರಾತ್ರಿ ಶೆಡ್‌ಗೆ ನೀರು ನುಗ್ಗಿದ ವಿಷಯ ತಿಳಿದು ಜೆಸಿಬಿಯಿಂದ ನೀರನ್ನು ನುಗ್ಗುವುದನ್ನು ತಪ್ಪಿಸಲಾಗಿದೆ. ಅವರಿಗೆ ಅಗತ್ಯ ಸಹಕಾರ ನೀಡುತ್ತಿದ್ದೇವೆʼʼ ಎನ್ನುತ್ತಾರೆ ಸ್ಥಳೀಯ ಮುಖಂಡರಾದ ತೂರ್ಪೂ ಗುರುರಾಜ್.

ಇದನ್ನೂ ಓದಿ| Edible Oil Rate | ಗಣೇಶ ಚತುರ್ಥಿಗೂ ಮೊದಲೇ ಅಡುಗೆ ಎಣ್ಣೆ ದರ ಇಳಿಕೆ, ತಿನಿಸು ಮಾಡಲು ಬೇಕಿಲ್ಲ ದುಡ್ಡಿನ ಎಣಿಕೆ

Exit mobile version