ಬೆಂಗಳೂರು: ನೈರುತ್ಯ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಕಾರವಾರ ಸೇರಿದಂತೆ ಕೊಡಗಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಈ ಕಾರಣದಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಇದನ್ನೂ ಓದಿ | ರಾಜ್ಯದಲ್ಲಿ ಮಳೆ ಅಬ್ಬರ: ವಿವಿಧೆಡೆ ರಸ್ತೆ, ಸೇತುವೆಗಳು ಜಲಾವೃತ
ರಾಜ್ಯದಲ್ಲಿ ಇನ್ನೆರಡು ದಿನ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿದೆ. ಇದೇ ಪರಿಸ್ಥಿತಿಯು ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಶಾಲಾ-ಕಾಲೇಜುಗಳಿಗೆ ಜುಲೈ 6ರಂದು ರಜೆಯನ್ನು ಘೋಷಿಸಲಾಗಿದೆ. ಇನ್ನು ಈ ರಜೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಅನ್ವಯಿಸುವುದಿಲ್ಲ.
ಕಾಫಿನಾಡಿನಲ್ಲಿ ನಾಲ್ಕು ದಿನ ರಜೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ನಿಲ್ಲದ ಕಾರಣ ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಲಕ್ಯಾ, ಅಂಬಳೆ ಹೋಬಳಿ ಹೊರತುಪಡಿಸಿ ಜುಲೈ 6 ರಿಂದ 9ರವರೆಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
ಉಡುಪಿ- ಕೂಡುಗು ಜಿಲ್ಲೆಯಲ್ಲೂ ಭಾರೀ ಮಳೆ
ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 6ರಂದು ಎಲ್ಲಾ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶಿಸಿದ್ದಾರೆ. ಇತ್ತ, ಕೊಡಗು ಜಿಲ್ಲೆಯಲ್ಲೂ ಒಂದು ದಿನ ರಜೆಯನ್ನು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ನೀಡಿದ್ದಾರೆ. ಹಾಗೇ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಕಾರಣದಿಂದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಬುಧವಾರವೂ ರಜೆಯನ್ನು ಮುಂದುವರಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ | ರಾಜ್ಯಾದ್ಯಂತ ಮಳೆ ಆರ್ಭಟ: ಹೈ ಅಲರ್ಟ್ ಘೋಷಣೆ, ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ