Site icon Vistara News

Rain news | ರಾಜ್ಯದಲ್ಲಿ ಮತ್ತೆ ಜೋರಾದ ಮಳೆ, ಕೋಡಿ ಬಿದ್ದ ಕೆರೆಗಳು, ಲೇಔಟ್‌ ಮುಳುಗಡೆ

rain

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಜೋರಾಗಿ ಮಳೆ ಸುರಿಯುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇನ್ನೂ 5 ದಿನ ಬಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

ಮುಂದಿನ ೫ ದಿನ ದಕ್ಷಿಣ ಒಳನಾಡಿಗೆ, ಇಂದು ಉತ್ತರ ಒಳನಾಡಿಗೆ ಹಾಗೂ ೫ನೇ ದಿನ ಕರಾವಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲ್ಬುರ್ಗಿ, ಕೊಪ್ಪಳ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆ.ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಮುಂದಿನ ೫ ದಿನ ಮಳೆ ಸಾಧ್ಯತೆಯಿದೆ.

ರಾಜಧಾನಿಯಲ್ಲಿ ಮಳೆ

ಬೆಂಗಳೂರಿನ ಶಾಂತಿನಗರ, ಮೆಜೆಸ್ಟಿಕ್, ಕೋರಮಂಗಲ, ರಾಜಾಜಿನಗರ, ಮಲ್ಲೇಶ್ವರಂ, ಸೇರಿ ನಗರದ ಹಲವೆಡೆ ಭಾರಿ ಮಳೆಯಾಗಿದ್ದು, ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರದಾಡಿದರು. ತಗ್ಗಿನಲ್ಲಿರುವ ಹಲವು ಪ್ರದೇಶಗಳು ನೀರು ತುಂಬುವ ಆತಂಕ ಎದುರಿಸಿದವು.

ಚಾಮರಾಜನಗರದಲ್ಲಿ ಬಡಾವಣೆ ಮುಳುಗಡೆ

ಚಾಮರಾಜನಗರದಲ್ಲಿ ರಾತ್ರಿ ಭಾರೀ ಮಳೆಯಾಗಿದ್ದು, ನಗರದ ಸೋಮಣ್ಣ ಲೇ ಔಟ್ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ಹೊರಬರಲು ನಿವಾಸಿಗಳು ಪರದಾಡಿದ್ದು, ಮಧ್ಯರಾತ್ರಿಯಿಂದ ನಿದ್ದೆಗೆಟ್ಟಿದ್ದಾರೆ. ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದ್ದು, ಮನೆಯೊಳಗೆ ಸಿಲುಕಿದ ಜನರನ್ನು ರಕ್ಷಿಸಲಾಗಿದೆ.

ಮಂಡ್ಯದಲ್ಲಿ ಕೋಡಿ ಬಿದ್ದ ಕೆರೆ

ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ನಾಗಮಂಗಲದ ಸೂಳೆ ಕೆರೆ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದ ಪರಿಣಾಮ ನಾಗಮಂಗಲ, ಮೈಸೂರು ರಸ್ತೆ ಜಲಾವೃತವಾಗಿದೆ. ಮೈಸೂರು ರಸ್ತೆಯ ರಾಜಕಾಲುವೆ ಉಕ್ಕಿ ಹರಿದಿದ್ದು, ನೀರಿನ ರಭಸಕ್ಕೆ ವಿದ್ಯತ್ ಕಂಬಗಳು ಮುರಿದಿವೆ. ಚಾಮರಾಜನಗರ- ಬೀದರ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಮಂಡ್ಯ ರಸ್ತೆಯ ಮುಸ್ಲಿಂ ಬ್ಲಾಕ್‌ನ ಹಲವು ಮನೆಗಳು ಜಲಾವೃತವಾಗಿವೆ. ನಾಗಮಂಗಲದ KSRTC ಬಸ್ ನಿಲ್ದಾಣ ಮಳೆ ನೀರಿನಿಂದ ಸಂಪೂರ್ಣ ಮುಳುಗಿದೆ. ನಿಲ್ದಾಣ ಮುಳುಗಡೆ ಹಿನ್ನೆಲೆಯಿಂದ ಬಸ್ಸುಗಳು ರಸ್ತೆಯಲ್ಲೆ ನಿಲ್ಲುತ್ತಿದ್ದು, ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್ ಹತ್ತಲು ಪರದಾಡಿದರು.

Exit mobile version