Site icon Vistara News

Rain News| ಭೀಕರ ಮಳೆಗೆ ಬೀಳುತ್ತಿವೆ ಮನೆಗಳು, ತತ್ತರಿಸುತ್ತಿದೆ ಬದುಕು

ಮನೆ ಕುಸಿತ

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ಜನಜಿವನ ದಿನೇದಿನೆ ದಸ್ತರವಾಗುತ್ತಿದೆ. ಈಗ ಮಳೆಯಿಂದ ನಷ್ಟದ ಪ್ರಮಾಣವು ಸಹ ಹೆಚ್ಚುತ್ತಾ ಸಾಗಿದೆ. ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗೆ ಮನೆಗಳು ಕುಸಿಯುತ್ತಿವೆ. ಜನರ ಬದುಕೂ ಸಹ ಮೂರಾಬಟ್ಟೆಯಾಗುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿ-ಮಗಳಿಬ್ಬರು ಬೆಳಗಾಗುವಷ್ಟರಲ್ಲಿ ಮೇಲೇಳಲೇ ಇಲ್ಲ. ನಿದ್ರೆಯಿಂದಲೇ ಚಿರನಿದ್ರೆಗೆ ಜಾರಿದ್ದಾರೆ. ಭೀಕರ ಮಳೆಯಿಂದ ಮನೆ ಗೋಡೆ ಸಡಿಲಗೊಂಡು ಕುಸಿದ ಪರಿಣಾಮ ಮಂಗಳವಾರ (ಜು.12) ಬೆಳಗಿನ ಜಾವ ರುಕ್ಮಿಣಿ ವಿಠ್ಠಲ್ ಮಾಚಕ (37), ಶ್ರೀದೇವಿ ವಿಠ್ಠಲ್ ಮಾಚಕ (13) ಮೃತಪಟ್ಟಿದ್ದಾರೆ. ಮಣ್ಣಿನ ಮನೆಯಾಗಿದ್ದರಿಂದ ಗೋಡೆ ತೇವಗೊಂಡಿತ್ತು ಎನ್ನಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್‌, ತಾಪಂ ಇಒ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rain News | ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ಇಂದು

ಸಾಗರ ಸಮೀಪ ಮನೆ ಕುಸಿತ ಜನ ಕಂಗಾಲು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆಚಾಪುರ ಗ್ರಾಮದ ಕೆ.ಅಬ್ದುಲ್ ಮುನಾಫ್ ಎಂಬುವವರ ಮನೆ ಗೋಡೆ ಕುಸಿದಿದ್ದು, ಚಾವಣಿಯೂ ಬಿದ್ದಿದೆ. ಇತ್ತ ತೀರ್ಥಹಳ್ಳಿಯ ಆಗುಂಬೆ ಹೋಬಳಿ ಬಿದರಗೊಡು ಗ್ರಾಮದ ಲತಾ ವಾಸುದೇವ ಎಂಬುವವರ ಮನೆ ಕುಸಿದಿದೆ. ಸಾಗರದ ಗೌತಮಪುರದ ಜನತಾ ಕಾಲೋನಿಯಲ್ಲಿನ ನಾಗಪ್ಪ ಮಂಚಾಲೆ ಎಂಬುವವರ ಮನೆಗೆ ಹಾನಿಯಾಗಿದೆ. ರಾತ್ರಿ ಮಲಗಿದ್ದಾಗ ದಿಢೀರ್‌ ಸದ್ದು ಕೇಳಿದ್ದರಿಂದ ಮಲಗಿದ್ದವರು ಎದ್ದು ಹೊರಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಇದೀಗ ಮನೆ ಕಳೆದುಕೊಂಡು ಕುಟಂಬ ಬೀದಿಗೆ ಬಂದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಕುಸಿತ ಅಧಿಕಾರಿಗಳ ಪರಿಶೀಲನೆ

ಸಾಗರದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಣನತಲೆ ಗ್ರಾಮದಲ್ಲಿ ನಜ್ಜೂರು ಲೋಕೇಶ್ ಎನ್ನುವವರ ಮನೆಯ ಗೋಡೆ ಕುಸಿದು ಚಾವಣಿಗೂ ಹಾನಿಯಾಗಿದೆ. ಮಳೆ ನೀರಿಗೆ ಮನೆಯಲ್ಲಿದ್ದ ಬಟ್ಟೆ, ಆಹಾರ ಧಾನ್ಯಗಳು ನಷ್ಟವಾಗಿವೆ. ಸದ್ಯ ಶಿವಮೊಗ್ಗದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ತೀರ್ಥಹಳ್ಳಿ ತಹಸೀಲ್ದಾರ್ ಮನೆ ಮನೆಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

ನೂರಾರು ಮನೆಗಳಿಗೆ ಹಾನಿ

ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯಾದ್ಯಂತ 317 ಮನೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ರಾಮದುರ್ಗ, ಚಿಕ್ಕೋಡಿಯಲ್ಲಿ ಅತಿಹೆಚ್ಚು ಮನೆಗಳು ಕುಸಿದಿದೆ. ಚಿಕ್ಕೋಡಿ 82, ಕಿತ್ತೂರಿನಲ್ಲಿ‌ 39, ರಾಮದುರ್ಗ 43, ಸವದತ್ತಿ 35, ಬೆಳಗಾವಿ 19 ಹಾಗೂ ಮೂಡಲಗಿ 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿಯ 16 ಮನೆಗಳಿಗೆ ಹಾನಿಯಾಗಿದೆ.

ಇತ್ತ ಧಾರವಾಡದಲ್ಲಿ ನಿರಂತರ ಮಳೆಯಿಂದಾಗಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಜುಲೈ 1 ರಿಂದ ಇಲ್ಲಿಯವರೆಗೆ 37 ಮನೆಗಳು ಕುಸಿದ್ದು, ಜೂನ್ ಒಂದರಿಂದ ಇಲ್ಲಿಯವರೆಗೆ 157 ಮನೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಎನ್‌ಡಿಆರ್‌ಎಫ್ ಅನುದಾನದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ.

ವಿಜಯಪುರದಲ್ಲೂ ತಡರಾತ್ರಿ ಮನೆ ಚಾವಣಿ ಕುಸಿದಿದೆ. ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಪರಸಪ್ಪ ಚಂದಪ್ಪ ದೊಡಮನಿ ಎಂಬುವವರಿಗೆ ಸೇರಿದ ಮನೆ ಚಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲ ಮಣ್ಣಿನಡಿ ಸಿಲುಕಿ ಹಾನಿಯಾಗಿದೆ. ಕಳೆದೊಂದು ತಿಂಗಳಿನಲ್ಲಿ ರಾಜ್ಯದ ನೂರಾರು ಮನೆಗಳು ನೆಲಕ್ಕುರುಳುತ್ತಿವೆ.

ಇದನ್ನೂ | Rain News | ಮನೆ ಗೋಡೆ ಕುಸಿತ, ನಿದ್ರಿಸುತ್ತಿದ್ದ ತಾಯಿ-ಮಗಳ ಸಾವು

Exit mobile version