ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಭಾರಿ ಮಳೆ ಅನಾಹುತ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದುಕೊಂಡಿದ್ದು, ಅಲ್ಲಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಕೆರೆ ಕಟ್ಟೆಗಳು ಒಡೆದಿದೆ. ರಸ್ತೆ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ನೀರು ತುಂಬಿವೆ. ಹೀಗಾಗಿ ಬೆಂಗಳೂರು-ಮೈಸೂರು ನಡುವೆ ಸಂಚಾರವೇ ಸ್ತಬ್ಧಗೊಂಡಿವೆ. ಇದರ ಜತೆಗೆ ರಾಜ್ಯದ ಇತರ ಭಾಗಗಳಲ್ಲೂ ದೊಡ್ಡ ಮಟ್ಟದ ಮಳೆ ಹಾನಿ ಸಂಭವಿಸಿರುವ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.
ʻʻರಾಜ್ಯದ ೧೬ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ಅವಾಂತರದ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಸ್ತೆಯಲ್ಲಿ ನೀರು ನಿಂತಿದ್ದು ತೆರವು ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರ್ಯಾಯ ಮಾರ್ಗವಾಗಿ ವಾಹನಗಳು ಹೋಗಲು ಸೂಚನೆ ನೀಡಲಾಗಿದೆʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ʻʻತುರ್ತು ಕ್ರಮವಾಗಿ ಹೆದ್ದಾರಿಯಲ್ಲಿ ನಿಂತ ನೀರನ್ನು ಕ್ಲಿಯನ್ ಮಾಡಲು ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಸೂಚನೆ ನೀಡಿದ್ದೇನೆ. ಮೈಸೂರು, ರಾಮನಗರ, ಮಂಡ್ಯ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿಯೂ ಮಳೆ ಹಾನಿಗೆ ತುರ್ತು ಪರಿಹಾರ ನೀಡುವಂತೆ ತಿಳಿಸಲಾಗಿದೆʼʼ ಎಂದು ಸಿಎಂ ಹೇಳಿದರು.
ಕೆರೆ ಕಟ್ಟೆಗಳ ಮೇಲೆ ನಿಗಾ
ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆರೆಗಳು ತುಂಬಿವೆ. ಇವುಗಳು ಒಡೆಯದಂತೆ ಸುರಕ್ಷಿತ ಕ್ರಮ ವಹಿಸಬೇಕಾಗಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದಲ್ಲಿ ಜನರನ್ನು ಕೂಡಲೇ ಸ್ಥಳಾಂತರಿಸಲು, ಕಾಳಜಿ ಕೇಂದ್ರ ತೆರೆಯಲು ಆದೇಶವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತುರ್ತು ಕೆಲಸಗಳಿಗಾಗಿ ೯೦೦ ಕೋಟಿ ನೀರು ಮೀಸಲು ಇಡಲಾಗಿದೆ.
ಮುಂದಿನ ತಿಂಗಳು ಪರಿಹಾರ
ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸಂತ್ರಸ್ತ ರೈತರಿಗೆ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಮುಂದಿನ ತಿಂಗಳು ಪರಿಹಾರ ನೀಡಲು ಎಲ್ಲ ಸಿದ್ಧತೆಗಳು ನಡೆದಿವೆʼʼ ಎಂದು ಸಿಎಂ ತಿಳಿಸಿದರು.
ಎಚ್‌ಡಿಕೆ, ಅಶ್ವತ್ಥನಾರಾಯಣ ಜತೆ ಚರ್ಚೆ
ಈ ನಡುವೆ ಬೊಮ್ಮಾಯಿ ಅವರು ರಾಮನಗರ ಮತ್ತು ಚನ್ನಪಟ್ಟಣದ ಮಳೆ ಅವಾಂತರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಜತೆ ಚರ್ಚೆ ನಡೆಸಿದರು. ರೇಸ್ ಕೋರ್ಸ್ ನಿವಾಸಕ್ಕೆ ಅಶ್ವಥ್ ನಾರಾಯಣ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದರು. ಹೆಲಿಕಾಪ್ಟರ್ ಮೂಲಕ ರಾಮನಗರಕ್ಕೆ ತೆರಳಲು ನಿರ್ಧರಿಸಿರುವ ಸಿಎಂ ಅವರು ಎಲ್ಲೆಲ್ಲ ಭೇಟಿ ನೀಡಬೇಕು ಎನ್ನುವ ಬಗಗ್ಗೆ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ| RAIN NEWS: ಬೆಂಗಳೂರು-ಮೈಸೂರು ರೋಡ್‌ಗೆ ನುಗ್ಗಿದ ನೀರು, ಸಂಚರಿಸಬೇಡಿ ಎಂದು ಮನವಿ ಮಾಡಿದ ಎಚ್‌ಡಿಕೆ