ಹುಬ್ಬಳ್ಳಿ: ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಭಾರತ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಗುರುವಾರ ಧಾರವಾಡ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿತು. ಮಳೆಯಿಂದ (Rain News) ಹಾನಿಗೀಡಾದ ಬೆಳೆಗಳು, ಮನೆ, ಶಾಲೆ, ರಸ್ತೆ, ಸೇತುವೆಗಳನ್ನು ಪರಿಶೀಲಿಸಿತು.
ಧಾರವಾಡ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ವರದಿಯನ್ನು 10 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕ್ ಕುಮಾರ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಕಿರೇಸೂರಿನಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಗೀಡಾಗಿರುವ ಹೊಲಗಳಲ್ಲಿನ ಬೆಳೆಗಳನ್ನು ವೀಕ್ಷಿಸಿದರು. ಅತಿವೃಷ್ಟಿಯಿಂದ ಧಾರವಾಡ ಜಿಲ್ಲೆಯಲ್ಲಿ ಆಗಿರುವ ಹಾನಿಯನ್ನು ಅಧ್ಯಯನ ಮಾಡಲಾಗುತ್ತಿದೆ. ಜಿಲ್ಲಾಡಳಿತವು ಕಳೆದ ಎರಡು ಮೂರು ದಿನಗಳಲ್ಲಿ ಉಂಟಾಗಿರುವ ನಷ್ಟದ ಮಾಹಿತಿಯನ್ನು ಕ್ರೋಢೀಕರಿಸಿ ಒದಗಿಸಲಿದೆ. ಎಲ್ಲ ಮಾಹಿತಿಯನ್ನು ಮೌಲ್ಯಮಾಪನ ಮಾಡಿ ಹತ್ತು ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ತಂಡವು ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಬೆಳೆ, ಮನೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತ ಹಾನಿಯ ಮಾಹಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಒದಗಿಸಲಾಗಿದೆ. ಜೂನ್ 1 ರಿಂದ ಆಗಸ್ಟ್ ಅಂತ್ಯದವರೆಗೆ ಸುಮಾರು 97 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಯಾಗಿವೆ. ಸೆಪ್ಟೆಂಬರ್ 1ರಿಂದ ಇತ್ತೀಚೆಗೆ ಸುಮಾರು 18 ರಿಂದ 20 ಸಾವಿರ ಹೆಕ್ಟೇರ್ ಬೆಳೆ ಹಾನಿ ಅಂದಾಜಿಸಲಾಗಿದೆ. ಜೂನ್‌ನಿಂದ ಈಚೆಗೆ 1172 ಮನೆಗಳು ಹಾನಿಯಾಗಿವೆ. ಕಳೆದ 2ರಿಂದ 3 ದಿನಗಳ ಅವಧಿಯಲ್ಲಿ ಸುಮಾರು 44 ಮನೆಗಳು ಹಾನಿಯಾದ ಬಗ್ಗೆ ವರದಿಯಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಮೂವರು ವ್ಯಕ್ತಿಗಳ ಜೀವ ಹಾನಿಯಾಗಿದೆ. 410 ಶಾಲೆಗಳು, 160 ಅಂಗನವಾಡಿಗಳ ಕಟ್ಟಡಗಳು ಮಳೆಗೆ ಹಾನಿಗೀಡಾಗಿವೆ. ಒಟ್ಟು ಹಾನಿಯ ಸಮೀಕ್ಷೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೇಂದ್ರ ತಂಡದ ಗಮನಕ್ಕೆ ತಂದಿದ್ದಾರೆ.
ಕೇಂದ್ರ ಅಧ್ಯಯನ ತಂಡದ ಸದಸ್ಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ನಿರಾಶ್ರಿತರಿಂದ ಮಾಹಿತಿ ಪಡೆದರು.
ಕಿರೇಸೂರು ಗ್ರಾಮದಲ್ಲಿ ಬೆಣ್ಣೆಹಳ್ಳ, ಅಗಸನ ಹಳ್ಳ ಹಾಗೂ ಯರನಾಳಹಳ್ಳದ ಪ್ರವಾಹದಿಂದ ಬಾಧಿತರಾಗಿರುವ ನಿಂಗನಗೌಡ ರಾಯನಗೌಡ್ರ, ಬನಪ್ಪಗೌಡ ರಾಯನಗೌಡ್ರ, ಚನ್ನಬಸಪ್ಪ ಹುಲಿಕಟ್ಟಿ, ಪ್ರವೀಣ ಕಮಡೊಳ್ಳಿ ಮತ್ತಿತರ ರೈತರಿಗೆ ಸೇರಿದ ಹತ್ತಿ, ಮೆಕ್ಕೆಜೋಳ, ಹೆಸರುಕಾಳು, ಉದ್ದು, ಉಳ್ಳಾಗಡ್ಡಿ ಬೆಳೆಗಳನ್ನು ವೀಕ್ಷಿಸಿದರು.
ಅಧಿಕ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಹತ್ತಿ ಬೆಳೆದರೂ ಕೂಡ ಕಾಯಿ ಕಟ್ಟುವುದಿಲ್ಲ. ಹೆಸರು, ಉದ್ದು ಮತ್ತಿತರ ಬೆಳೆಗಳು ಜಾನುವಾರುಗಳಿಗೂ ಕೂಡ ಪ್ರಯೋಜನವಿಲ್ಲದಂತಾಗಿವೆ. ಹಲವು ದಶಕಗಳ ಹಿಂದೆ ನಿಗದಿಪಡಿಸಿರುವ ಎನ್.ಡಿ.ಆರ್.ಎಫ್. ಪರಿಹಾರದ ಮೊತ್ತವನ್ನು ಪುನರ್ ಪರಿಶೀಲಿಸಬೇಕಿದೆ. ಈ ಮೂಲಕ ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಸ್ಥಳೀಯ ರೈತರು ತಂಡದ ಎದುರು ತಮ್ಮ ಅಳಲು ವ್ಯಕ್ತಪಡಿಸಿದರು.
ಕೇಂದ್ರ ಅಧ್ಯಯನ ತಂಡದ ಸದಸ್ಯರು ನವಲಗುಂದ ತಾಲೂಕಿನ ಹೆಬಸೂರಿನಲ್ಲಿ ಹಾನಿಗೀಡಾದ ಶಾಲಾ ಕಟ್ಟಡ, ಕಾಲವಾಡ ಹಾಗೂ ಯಮನೂರಿಲ್ಲಿ ಉದ್ದು ಹಾಗೂ ಹೆಸರಿನ ಬಾಧಿತ ಪ್ರದೇಶಗಳು, ಕಣ್ಣೂರಿನಲ್ಲಿ ಹಾನಿಗೊಳಗಾದ ಸೇತುವೆ, ಭೋಗಾನೂರಿನಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರ ಹಾಗೂ ಹಾನಿಗೀಡಾದ ಮನೆಗಳು, ಅಣ್ಣಿಗೇರಿ ತಾಲೂಕಿನ ಬಸಾಪೂರದಲ್ಲಿ ಹಾನಿಗೊಳಗಾದ ರಸ್ತೆಯನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಅಶೋಕ ತೇಲಿ,ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ. ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ನವಲಗುಂದ ತಹಸೀಲ್ದಾರ್ ಅನಿಲ ಬಡಿಗೇರ ಉಪಸ್ಥಿತರಿದ್ದರು.
ಇದನ್ನೂ ಓದಿ | ಅತಿವೃಷ್ಟಿಯಿಂದ ಬೆಳೆ ನಾಶ: ಸಾಲದ ಸಂಕಷ್ಟದಿಂದ ಬೇಸತ್ತು ನೇಣು ಬಿಗಿದುಕೊಂಡ ಅನ್ನದಾತ