Site icon Vistara News

Rain News | ಗಣೇಶ ವಿಸರ್ಜನೆ ಭದ್ರತೆಗೆ ಹೋದ ಇಬ್ಬರು ಪೊಲೀಸರು ನಾಪತ್ತೆ, ಕೊಚ್ಚಿ ಹೋದ್ರಾ?

koppala police missing

ಕೊಪ್ಪಳ: ಅವರು ಗಣೇಶ ಮೂರ್ತಿ ವಿಸರ್ಜನೆಯ ಭದ್ರತೆಗೆಂದು ಹೋಗಿದ್ದರು. ಹಾಗೆ ಹೋದವರು ನಾಪತ್ತೆಯಾಗಿದ್ದಾರೆ. ಹಾಗಿದ್ದರೆ ಅವರು ಎಲ್ಲಿ ಹೋದರು? ಬೇರೆಲ್ಲಾದರೂ ಹೋದರಾ? ಅಥವಾ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ್ರಾ?

ಇಂಥಹುದೊಂದು ಸಂಶಯಾಸ್ಪದ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯಲ್ಲಿ. ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದ ಬಳಿಗೆ ಹೋಗಿದ್ದವರು ಮರಳಿ ಬಂದಿಲ್ಲ.

ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹೇಶ ಹಾಗೂ ನಿಂಗಪ್ಪ ಅವರನ್ನು ಗಜೇಂದ್ರಗಡದಲ್ಲಿ ನಡೆಯುವ ಗಣೇಶ ವಿಸರ್ಜನೆಯ ಬಂದೋಬಸ್ತ್‌ಗೆ ನೇಮಕ ಮಾಡಲಾಗಿತ್ತು. ಅವರು ಬಂದೋಬಸ್ತ್‌ಗೆ ಸಂಬಂಧಿಸಿ ತೊಂಡಿಹಾಳ ಹಳ್ಳದ ಬಳಿ ಹೋಗಿದ್ದರು ಅನಿಸುತ್ತದೆ. ಅಲ್ಲಿಂದ ಮುಂದೆ ಅವರು ಎಲ್ಲಿ ಹೋಗಿದ್ದಾರೆ ಎನ್ನು ವ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.

ಅವರು ಮರಳಿ ಬಂದಿಲ್ಲ. ಪೊಲೀಸ್‌ ಠಾಣೆಗೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಸದ್ಯ ಅವರ ಮೊಬೈಲ್ ಜಿಪಿಎಸ್ ತೊಂಡಿಹಾಳ ಹಳ್ಳದಲ್ಲಿ ಲೋಕೇಷನ್ ತೋರಿಸುತ್ತಿದೆ. ಹಾಗಿದ್ದರೆ ಅವರು ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿ ಹೋದರಾ ಎನ್ನುವ ಭಯಾನಕ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಕೊಪ್ಪಳದ ಗಜೇಂದ್ರಗಡ ಸಮೀಪದ ತೊಂಡಿಹಾಳ ಹಳ್ಳದ ಬಳಿ ಜನ ಸೇರಿರುವುದು.

ಈ ವಿಷಯ ತಿಳಿಯುತ್ತಿದ್ದಂತೆಯೇ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಪೊಲೀಸರು ತೊಂಡಿಹಾಳ ಹಳ್ಳದ ಬಳಿ ಬಂದಿದ್ದಾರೆ. ಅಗ್ನಿ ಶಾಮಕ ದಳದೊಂದಿಗೆ ಕಾರ್ಯಾಚರಣೆಗೆ ಸಿದ್ಧತೆಯೂ ನಡೆದಿದೆ. ಅದೇ ವೇಳೆ ಈ ಪೊಲೀಸರು ಹಳ್ಳದಲ್ಲಿ ಬಿದ್ದಿಲ್ಲದಿರಲಿ, ಯಾವುದೇ ಅನಾಹುತಕ್ಕೆ ಒಳಗಾಗದಿರಲಿ, ಎಲ್ಲಾದರೂ ಇರಲಿ, ಬದುಕಿ ಬರಲಿ ಎಂದು ಅಲ್ಲಿರುವ ಮಂದಿ ಹಾರೈಸುತ್ತಿದ್ದಾರೆ.

ಇದನ್ನೂ ಓದಿ | Rain News | ಮನೆ ಕುಸಿದು ಯುವಕ ಸಾವು, ಅಪ್ಪ-ಅಮ್ಮನನ್ನು ಬೇರೆಡೆ ಬಿಟ್ಟು ಬಂದು ಮನೆ ಪ್ರವೇಶಿಸಿದಾಗ ನಡೆಯಿತು ದುರಂತ

Exit mobile version