ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ (Rajakaluve Encroachment) 4ನೇ ದಿನವೂ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯರ ಮಾತಿನ ಚಕಮಕಿಯೊಂದಿಗೆ ಶುರುವಾಗಿದೆ.
ಗುರುವಾರ ಮಹದೇವಪುರ, ಯಲಹಂಕದ ಸಿಂಗಾರಪುರ ಲೇಔಟ್ ಸೇರಿದಂತೆ ಯಮಲೂರಿನ ಎಪ್ಸಿಲಾನ್, ವಾಗ್ದೇವಿ ಲೇಔಟ್, ಶಾಂತಿನಿಕೇತನ್ ಲೇಔಟ್‌ನಲ್ಲಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಅಕ್ರಮವಾಗಿ ಕಟ್ಟಲಾಗಿರುವ ರಾಜಕಾಲುವೆ ತಡೆಗೋಡೆ ತೆರವು, ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋದಲ್ಲಿ ಗುರುವಾರ ಸರ್ವೇ ಕಾರ್ಯವನ್ನು ಆರಂಭಿಸಲಾಗಿದೆ.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮ ಮುಂದುವರಿದಿದೆ. ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಜಮೀನು ಮಾಲೀಕ ರಘುರಾಮ್ ರೆಡ್ಡಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾವೆಲ್ಲರೂ ಎಪ್ಸಿಲಾನ್ ವಿಲ್ಲಾಗಳಿಗೆ ಜಮೀನು ಬಿಟ್ಟು ಕೊಟ್ಟಿದ್ದೇವೆ. ಏನೇ ತಂಟೆ ತಕರಾರು ಬಂದರೂ ಅದನ್ನು ಜಮೀನು ಮಾಲೀಕರಾದ ನಾವೇ ಬಗೆಹರಿಸಿಕೊಡಬೇಕು. ಆದರೆ, ಇಲ್ಲಿ ನಿಯಾವಳಿ ಪ್ರಕಾರ ಯಾವುದೂ ಆಗುತ್ತಿಲ್ಲ. ಈಗಾಗಲೇ ಇರುವ ಕಾಲುವೆ ಜಾಗ ಬಿಟ್ಟು, ಬೇರೆ ಕಡೆ ರಾಜಕಾಲುವೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕಾಂಪೌಂಡ್ ಒಡೆಯಲು ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನಾವು ಕಾಂಪೌಂಡ್ ಒಡೆಯಲು ಬಿಡುವುದಿಲ್ಲ. ಯಾವ ಆಧಾರ ಮೇಲೆ ಸರ್ವೇ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಯಮಲೂರಿನ ಎಪ್ಸಿಲಾನ್ ಕಾರ್ಯಾಚರಣೆಗೆ ಜಮೀನು ಮಾಲೀಕ ರಘುರಾಮ್ ಅಸಮಾಧಾನ ಹೊರಹಾಕಿದರು.
ಎಫ್ಸಿಲಾನ್‌ನಲ್ಲಿ ಒಂದೇ ಒಂದಿಂಚು ಜಮೀನು ಒತ್ತುವರಿ ಮಾಡಿಲ್ಲ!
ಯಮಲೂರಿನ ಎಫ್ಸಿಲಾನ್ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹೊಸ ತಿರುವು ಸಿಕ್ಕಿದೆ. ಎಫ್ಸಿಲಾನ್‌ನವರು ಒಂದೇ ಒಂದಿಂಚು ಜಮೀನು ಒತ್ತುವರಿ ಮಾಡಿಕೊಂಡಿಲ್ಲವೆಂದು ಮಹಾದೇವಪುರ ಬಿಬಿಎಂಪಿ ಇಇ ಮಾಲತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಎಫ್ಸಿಲಾನ್‌ಗೆ ಸೇರಿದ ಜಮೀನಿಗೆ ಅಂಟಿಕೊಂಡಿರುವ ರಾಜಕಾಲುವೆಗೆ ಬಾಕ್ಸ್ ಹಾಕಲಾಗಿದೆ. ಅದನ್ನು ಮಾತ್ರ ತೆರವು ಮಾಡುತ್ತೇವೆ. ಅದರ ಹೊರತಾಗಿ ಇಲ್ಲಿ ಏನೂ ಸಮಸ್ಯೆ ಇಲ್ಲ. ಎಫ್ಸಿಲಾನ್‌ನವರು ಯಾವುದೇ ರಾಜಕಾಲುವೆ ಒತ್ತುವರಿ ಮಾಡಿಲ್ಲ. ಕಂದಾಯ ಇಲಾಖೆ ಸರ್ವೇ ಮ್ಯಾಪ್‌ನಲ್ಲಿ ಯಾವುದೇ ಒತ್ತುವರಿ ಗುರುತಾಗಿಲ್ಲ. ಹೀಗಾಗಿ ರಾಜಕಾಲುವೆಗೆ ಹಾಕಿರುವ ಬಾಕ್ಸ್ ಮಾತ್ರ ತೆರವು ಮಾಡುತ್ತೇವೆ. ವಿಲ್ಲಾಗಳು ಕಟ್ಟಿದ ಮೇಲೆ ಮೋರಿ ವಾಸನೆ ಬರುತ್ತಿರುವ ಹಿನ್ನೆಲೆ ಬಿಬಿಎಂಪಿಯೇ ಇದಕ್ಕೆ ಅನುಮತಿ ಕೊಟ್ಟಿತ್ತು. ಈ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲೂ ವಿಚಾರಣೆ ನಡೆದಿತ್ತು. ಕೋರ್ಟ್ ಕೂಡ ಪ್ರಕರಣ ಖುಲಾಸೆ ಮಾಡಿದೆ. ಹೀಗಾಗಿ ಎಫ್ಸಿಲಾನ್ ಯಾವುದೇ ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | Rajakaluve Encroachment | ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಜೆಸಿಬಿ, ಸರ್ವೇಯರ್ ಕೊರತೆ