ಬೆಂಗಳೂರು: ʻʻಈ ಜಾಗ ಶಾಸಕರದ್ದು ಅಂತ ಗೊತ್ತಿದ್ದರೂ ಡೆಮಾಲಿಷನ್ ಮಾಡ್ತೀರಾ? ನಿಮ್ಗೆ ಎಷ್ಟು ಧೈರ್ಯ” ಎಂದು ಒತ್ತುವರಿ ತೆರವು (Rajakaluve Encroachment) ಮಾಡಲು ಬಂದ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಮಹಮ್ಮದ್ ಹ್ಯಾರಿಸ್ ಅವರ ಆಪ್ತ ಸಹಾಯಕ ಅವಾಜ್ ಹಾಕಿದ್ದರು. ಬುಧವಾರ ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಆದರೆ, ತೆಗೆದಿದ್ದು ಕಾಂಪೌಂಡ್ ಮೇಲಿರುವ ಗ್ರಿಲ್‌ಗಳನ್ನು ಮಾತ್ರ!
ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ಶಾಸಕ ಹ್ಯಾರಿಸ್ ಪುತ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಅವರಿಗೆ ಸೇರಿದ ನಲಪಾಡ್ ಅಕಾಡೆಮಿಯ ಜಾಗ ಒತ್ತುವರಿಯಾಗಿತ್ತು. ಮಂಗಳವಾರ ಕಾರ್ಯಾಚರಣೆಗೆ ಬಂದಾಗ ಒಂದು ಸುತ್ತಿನ ಮಾತಿನ ಚಕಮಕಿ ಆಗಿ, ಬಳಿಕ ಒತ್ತುವರಿ ತೆರವು ಅರ್ಧಕ್ಕೆ ನಿಂತಿತ್ತು.
ಬಿಬಿಎಂಪಿ ಅಧಿಕಾರಿಗಳ ಸಹಿತ ಪೊಲೀಸರು ಸ್ಥಳದಲ್ಲಿಯೇ ನಿಂತಿದ್ದರು. ಆದರೆ, ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕರಿಂದ ಕರೆ ಬಂದಿದ್ದೆ ತಡ, ಕೇವಲ 10 ನಿಮಿಷಗಳಲ್ಲಿ ಒತ್ತುವರಿ ನಿಲ್ಲಿಸಿ ಅಧಿಕಾರಿಗಳು ಕಾಲ್ಕಿತ್ತಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಬಡ ಜನರಿಗೆ ಒಂದು ನ್ಯಾಯ, ಬಡ ಜನರಿಂದ ಆಯ್ಕೆಯಾಗಿ ಹೋಗಿರುವವರಿಗೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನೆ ಮಾಡಿದ್ದರು.
ಸುಸೂತ್ರವಾಗಿ ತೆರವು ಕಾರ್ಯಾಚರಣೆ
ಬುಧವಾರ ಯಾವುದೇ ಸಮಸ್ಯೆ ಇಲ್ಲದೆ ಸುಸೂತ್ರವಾಗಿ ತೆರವು ಕಾರ್ಯ ಆಗಿದೆ. ಕಾಂಪೌಂಡ್ ಮೇಲೆ ಹಾಕಲಾಗಿದ್ದ ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮೆಷಿನ್ ಬಳಸಿ ತೆರವುಗೊಳಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಎಇಇ ಮಾರ್ಕಂಡೇಯ ಅವರು ತೆರವು ಮಾಡುವಾಗ ಸ್ಲ್ಯಾಬ್ ಬೀಳುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ತೆರವು ಮಾಡಬೇಕಾಗಿದೆ. ಸರ್ವೇ ಪ್ರಕಾರ ರಾಜಕಾಲುವೆ ಇದೆ. ಹೀಗಾಗಿ ಯಾವುದೇ ನೋಟಿಸ್ ಕೊಡುವ ಅವಶ್ಯಕತೆ ಇಲ್ಲ. ಒತ್ತುವರಿಯಾದ ಜಾಗದಲ್ಲಿರುವ ಕಾಂಪೌಂಡ್ ಕೆಡವುದಿಲ್ಲ, ಕಾಂಪೌಂಡ್ ಕೂಡ ನಮ್ಮ ಕಸ್ಟಡಿಗೆ ಬರಲಿದೆ. ಒತ್ತುವರಿಯಾದ ಕಾಂಪೌಂಡ್ ನಮ್ಮ SWE ಡ್ರೈನೇಜ್‌ಗೆ ಉಪಯೋಗಕ್ಕೆ ಬರುತ್ತದೆ. ಇಂದು ತೆರವು ಕಾರ್ಯ ಮುಗಿಯುವ ಸಾಧ್ಯತೆ ಇದ್ದು, ಒಂದು ವೇಳೆ ಉಳಿದರೆ ಮತ್ತೆ ನಾಳೆಯೂ ತೆರವು ಮಾಡುವುದಾಗಿ ಹೇಳಿದರು.
ಕಾನೂನಾತ್ಮಕವಾಗಿ ಬಂದರೆ ಜಾಗ ಬಿಟ್ಟು ಕೊಡುತ್ತೇವೆ
ಶಾಂತಿನಿಕೇತನ ಲೇಔಟ್‌ನಲ್ಲಿರುವ ಚೈತನ್ಯ ಸ್ಕೂಲ್ ಕಾಂಪೌಂಡ್ ಅನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಗೋಡೆ ತೆರವು ಮಾಡಿದ್ದಕ್ಕೆ ಬಿಬಿಎಂಪಿ ವಿರುದ್ಧ ಜಮೀನು ಮಾಲೀಕ ತಿಲಕ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ನಮಗೆ ಮಾಹಿತಿ ನೀಡದೆ ಗೋಡೆ ಒಡೆದು ಹಾಕಿದ್ದಾರೆ. ಕೇಳಿದರೆ ರಾಜ ಕಾಲುವೆ ಇದೆ ಎಂದರು, ಆದರೆ ಇಲ್ಲಿ ಗದ್ದೆ ಭೂಮಿ ಇತ್ತು ಅಷ್ಟೇ. ಸರ್ವೆಯರ್ ನಮಗೆ ಯಾವ ಮಾಹಿತಿಯನ್ನು ನೀಡಿಲ್ಲ. 191 ಸರ್ವೆ ನಂಬರ್ ಇದು, 33 ಫೀಟ್ ರಾಜಕಾಲುವೆ ಎಂದು ಹೇಳಿದ್ದಾರೆ. ಕಾನೂನಾತ್ಮಕವಾಗಿ ಬಂದರೆ ನಾವೇ ಜಾಗ ಬಿಟ್ಟುಕೊಡುತ್ತೇವೆ. ಶಾಲೆ ಕಟ್ಟಿ 10 ವರ್ಷ ಕಳೆದಿದ್ದು, ಪಾಲಿಕೆಗೆ ತೆರಿಗೆಯನ್ನು ಕಟ್ಟುತ್ತಿದ್ದೇವೆ ಎಂದು ಮಾಲೀಕ ತಿಲಕ್ ಕುಮಾರ್ ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಾರ್ಕಿಂಗ್ ಆಗಿದ್ದರೂ ತೆರವುಗೊಳಿಸಲು ಹಿಂದೇಟು!
ಮಹಾವೀರ್ ರೀಗಲ್ ಅಪಾರ್ಟ್‌ಮೆಂಟ್ ನಿವಾಸಿಗಳು ಗೋಡೆಗೆ ಕಬ್ಬಿಣದ ರೇಕು ಅನ್ನು ನಿರ್ಮಿಸಿಕೊಂಡಿದ್ದರು. ಕಾಂಪೌಂಡ್ ವಾಲ್ ಮಾತ್ರ ತೆರವುಗೊಳಿಸಿ, ಬಳಿಕ ಕಾರ್ಯಾಚರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಮಹಾವೀರ್ ರೀಗಲ್ ಅಪಾಟ್೯ಮೆಂಟ್‌ನಲ್ಲಿ 7.5 ಮೀಟರ್ ಒತ್ತುವರಿಯಾಗಿದೆ ಎಂದು ಅಧಿಕಾರಿಗಳೇ ಸರ್ವೆ ಮಾಡಿ ಮಾರ್ಕ್ ಮಾಡಿದ್ದಾರೆ. ಆದರೆ ಬುಧವಾರ ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ಬಸವಣ್ಣನಗರ ರಸ್ತೆ ಜಲಾವೃತಗೊಂಡಿತ್ತು.
ರಾಜಕಾಲುವೆ ಮೇಲೆ ಇದ್ದ ಆಟದ ಮೈದಾನ ತೆರವು
ಬಸವಣ್ಣನಗರದ ರಾಜಕಾಲುವೆ ಮೇಲೆ ಇದ್ದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆಯ ಆಟದ ಮೈದಾನದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ | Rajakaluve Encroachment | ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಜೆಸಿಬಿ, ಸರ್ವೇಯರ್ ಕೊರತೆ