ಬೆಂಗಳೂರು: ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ (Rajakaluve Encroachment) ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದ್ದು, ತೆರವು ಜಟಾಪಟಿ ಮುಂದುವರಿದಿದೆ. ಕೊಡಿಗೆಹಳ್ಳಿಯಲ್ಲಿರುವ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸ್ (NCBS)ನಲ್ಲಿ ಹೈಡ್ರಾಮಾ ನಡೆದಿದೆ.
ಎನ್‌ಸಿಬಿಎಸ್ ಕ್ವಾರ್ಟರ್ಸ್‌ನಲ್ಲಿ ಒತ್ತುವರಿಯಾಗಿದ್ದ ಗೋಡೆಯೊಂದನ್ನು ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಬಂದಿದ್ದಾರೆ. ಎನ್‌ಸಿಬಿಎಸ್ ಗೇಟ್‌ನ ಹೊರಭಾಗದಲ್ಲಿ ಜೆಸಿಬಿ ತಂದು ನಿಲ್ಲಿಸಿಕೊಂಡಿದ್ದ ಪಾಲಿಕೆ ಅಧಿಕಾರಿಗಳನ್ನು ಒಳಬಿಡದೆ ಎನ್‌ಸಿಬಿಎಸ್ ಅಧಿಕಾರಿಗಳು ತಡೆಹಿಡಿದ ಘಟನೆಯೂ ನಡೆಯಿತು.
ಈ ವೇಳೆ ಎನ್‌ಸಿಬಿಎಸ್ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್‌ಗಳಿಗೆ ವಾರ್ನಿಂಗ್ ಕೊಟ್ಟ ಬಿಬಿಎಂಪಿ ಅಧಿಕಾರಿಗಳು, ʻʻಗೇಟ್ ಒಳಗೆ ಬಿಡ್ತೀರೊ ಅಥವಾ ಗೇಟ್ ಅನ್ನೇ ಒಡೆದು ಹಾಕಿ ಒಳಗೆ ಹೋಗೋದಾ?”ಎಂದು ಜೋರು ಧ್ವನಿಯಲ್ಲಿ ಹೆದರಿಸಿದರು. ಬಳಿಕ ಸ್ಥಳಕ್ಕೆ ಬಂದ ಎನ್‌ಸಿಬಿಎಸ್ ಅಧಿಕಾರಿಗಳು, ನಾವು ರಾಜಕಾಲುವೆ ಒತ್ತುವರಿ ಮಾಡಿಲ್ಲ. ನಮ್ಮ ಬಳಿ ಎಲ್ಲ ದಾಖಲೆಗಳೂ ಇವೆ. ನಾವು ಅದನ್ನು ಸಲ್ಲಿಸುತ್ತೇವೆ. ಇದಕ್ಕಾಗಿ ಒಂದು ದಿನ ಸಮಯಾವಕಾಶವನ್ನು ಕೊಡಿ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಜಗ್ಗದ ಬಿಬಿಎಂಪಿ ಅಧಿಕಾರಿಗಳು ಮಾರ್ಕಿಂಗ್ ಮಾಡಲಾಗಿದೆ. ಅದನ್ನು ನಾವು ತೆರವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Encroachment | ಶಾಸಕರ ಜಾಗವೆಂದು ಗೊತ್ತಿದ್ದರೂ ಡೆಮಾಲಿಷ್ ಮಾಡ್ತಿರಾ? ಎಷ್ಟು ಧೈರ್ಯ; ಹ್ಯಾರಿಸ್ ಪಿಎ ಧಮ್ಕಿ
ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಎನ್‌ಸಿಬಿಎಸ್ ಅಧಿಕಾರಿಗಳ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ಕೊನೆಗೆ ಪಟ್ಟುಬಿಡದ ಬಿಬಿಎಂಪಿಯವರು ಕಟ್ಟಡದ ಅರ್ಧ ಕಾಂಪೌಂಡ್ ಭಾಗವನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.