ವಿಜಯನಗರ: ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ (Rajasthan Murder) ರಾಜ್ಯದ ವಿವಿಧೆಡೆ ಶನಿವಾರವೂ ಪ್ರತಿಭಟನೆ ಮುಂದುವರಿದಿದ್ದು, ವಿಜಯನಗರದಲ್ಲಿ ತೀವ್ರ ಸ್ವರೂಪ ಪಡೆದಿದೆ.
ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಹೊಸಪೇಟೆಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದವು. ನಂತರ, ಪಾದಗಟ್ಟಿ ಆಂಜನೇಯ ದೇವಾಲಯದ ಬಳಿ ವೇದಿಕೆ ಸಿದ್ಧಪಡಿಸಿ ಪ್ರತಿಭಟನೆಯನ್ನು ಆರಂಭಿಸಲು ಕಾರ್ಯಕರ್ತರು ಸಜ್ಜಾಗಿದ್ದರು. ಆದರೆ ಈ ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಪ್ರತಿಭಟನಾಕಾರರ ಮೇಲೆ ಪೋಲಿಸರಿಂದ ಲಾಠಿ ಚಾರ್ಜ್ ನಡೆಸಲಾಯಿತು. ಇದರ ಪರಿಣಾಮವಾಗಿ ಈ ಸ್ಥಳದಲ್ಲಿ ಕೆಲವು ಹೊತ್ತಿನ ಮಟ್ಟಿಗೆ ವಾತಾವರಣ ಉದ್ವಿಗ್ನಗೊಂಡಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆ ಮುಖಂಡ ಗಂಗಾಧರ್ ಕುಲಕರ್ಣಿ ಸೇರಿದಂತೆ ಅನೇಕ ಪ್ರಮುಖರನ್ನು ಬಂಧಿಸಲಾಯಿತು.
ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ಅರುಣ್, ʻತಹಶೀಲ್ದಾರರಿಗೆ ಮನವಿ ಕೊಡಲು ಮಾತ್ರವೇ ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಅನುಮತಿ ನೀಡಲಾಗಿತ್ತು. ಆದರೆ, ಅವರು ವೇದಿಕೆ ಸಿದ್ಧಪಡಿಸಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು ಹಾಗೂ ವಾಹನ ಸಂಚಾರಕ್ಕೆ ಅನನುಕೂಲವಾಗುತ್ತಿತ್ತು. ಹೀಗಾಗಿ ಪ್ರತಿಭಟನೆ ತೆರವುಗೊಳಿಸಿದ್ದೇವೆ. ಕೆಲವರನ್ನು ವಶಕ್ಕೆ ಪಡೆದಿದ್ದೇವೆʼ ಎಂದು ತಿಳಿಸಿದರು.
ವ್ಯಾಪಾರಸ್ಥರು ಭಯಪಡದೆ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬಹುದು. ವ್ಯಾಪಾರಸ್ಥರಿಗೆ ಪೊಲೀಸರು ರಕ್ಷಣೆ ನೀಡಲಿದ್ದಾರೆ ಎಂದು ಹೇಳಿದ ಅರುಣ್, ಸ್ವತಃ ಅವರೇ ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ತಿಳಿಸಿದರು.
ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರ ವರ್ತನೆ ವಿರುದ್ಧ ಶ್ರೀರಾಮ ಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಹೀರೆಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿಸಲಾಯಿತು. ಹೊಸಪೇಟೆಯ ಗಾಂಧಿಚೌಕ ಬಳಿಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾರ್ಯಕರ್ತರು ಬಾಯಿಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ಆರಂಭಿಸಿದರು.
ಈ ವೇಳೆ ಪ್ರತಿಭಟನೆ ನಿಲ್ಲಿಸುವಂತೆ ಶ್ರೀಗಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸದಿದ್ದಾಗ ಶ್ರೀಗಳು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು.
ವಿವಿಧೆಡೆ ಪ್ರತಿಭಟನೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ನೂರಾರು ಕಾರ್ಯಕರ್ತರು ಈ ರ‍್ಯಾಲಿಯಲ್ಲಿ ಭಾಗಿಯಾಗಿ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿದರು. ಅಲ್ಲದೆ, ಮುಂಬರಲಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ರಕ್ಷಣೆ ಮಾಡುವಂತೆ ಮನವಿ ಮಾಡಿದರು. ಈ ಕುರಿತು ಅಥಣಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಉತ್ತರ ಕನ್ನಡ: ಉತ್ತರ ಕನ್ನಡದ ಕಾರವಾರದಲ್ಲಿಯೂ ಪ್ರತಿಭಟನೆ ನಡೆಯಿತು. ನಗರದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಮಾಯಕ ಟೇಲರ್ ಹತ್ಯೆಗೈದವರ ವಿರುದ್ದ ಕಠಿಣ ಕ್ರಮಗೊಳ್ಳುವಂತೆ ಆಗ್ರಹಿಸಿ ಕಾರವಾರ ಎಸಿ ಜಯಲಕ್ಷ್ಮಿ ರಾಯಕೋಡ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡದ ಶಿರಸಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ನಗರದ ಬಿಡ್ಕಿ ಸರ್ಕಲ್ ಬಳಿ ಹಿಂದೂ ಜಾಗರಣ ವೇದಿಕೆ ಹಾಗೂ ಸಂಘ ಪರಿವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತ ದೇವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಧಾರವಾಡ: ಧಾರವಾಡದಲ್ಲಿ ವ್ಯಾಪಾರಿಗಳು ಮೌನ ಮೆರವಣಿಗೆ ನಡೆಸಿದರು. ಕೆಸಿಸಿ ಬ್ಯಾಂಕ್ ಸರ್ಕಲ್‌ನಿಂದ ಮೆರವಣಿಗೆ ಆರಂಭಗೊಂಡು ಮಾರುಕಟ್ಟೆಯ ವಿವಿಧ ಬೀದಿಗಳಲ್ಲಿ ಸಾಗಿ ನಂತರ ವಿವೇಕಾನಂದ ವೃತ್ತದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು. ಈ ಮೆರವಣಿಗೆಯ ಮುಕ್ತಾಯದ ಬಳಿಕ ವ್ಯಾಪಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ: ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಟೇಲರ್ ಸಂಘದ ನೇತೃತ್ವದಲ್ಲಿ ಟೈಲರ್‌ಗಳು ಪ್ರತಿಭಟನೆ ನಡೆಸಿದರು. ಟೇಲರ್‌ಗಳಿಗೆ ಭದ್ರತೆ ಒದಗಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟಿಸಿದರು. ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಟೇಲರ್‌ಗಳಿಗಾಗಿ ಕ್ಷೇಮಾಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹಿಸಿದರು.
ಬಳ್ಳಾರಿ: ದೇಶ ಭಕ್ತಿ ನಾಗರಿಕ ವೇದಿಕೆಯಿಂದ ಜುಲೈ 4ರ ಸೋಮವಾರ ಬಳ್ಳಾರಿ ಬಂದ್‌ಗೆ ಕರೆ ನೀಡಲಾಗಿದೆ. ಇದು ಒತ್ತಾಯ ಪೂರ್ವಕವಾಗಿ ಮಾಡುವ ಬಂದ್ ಅಲ್ಲ. ಸ್ವಯಂ ಪ್ರೇರಿತವಾಗಿರುತ್ತದೆ ಎಂದು ದೇಶ ಭಕ್ತಿ ನಾಗರಿಕ ವೇದಿಕೆಯ ಕಾರ್ಯಕರ್ತರು ತಿಳಿಸಿದರು. ವ್ಯಾಪಾರ, ಸಿನಿಮಾ ಪ್ರದರ್ಶನ, ಆಟೋ, ಬಸ್, ಲಾರಿ ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟು ನಿಲ್ಲಿಸಿ ಬಂದ್ ಬೆಂಬಲಿಸುವಂತೆ ವೇದಿಕೆ ಮನವಿ ಮಾಡಿದೆ.
ಇದನ್ನೂ ಓದಿ: Rajasthan murder | ರಾಜ್ಯದೆಲ್ಲೆಡೆ ʼಕತ್ತು ಸೀಳಬೇಡಿʼ ಅಭಿಯಾನ