ಬೆಂಗಳೂರು: ದೇಶದ ನೂರಾ ಮೂವತ್ತು ಕೋಟಿ ಜನರ ಭವಿಷ್ಯವನ್ನು ನಿರ್ಧರಿಸುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗಿಂತಲೂ, ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಕಪೇಂದ್ರ ರೆಡ್ಡಿ 230 ಪಟ್ಟು ಶ್ರೀಮಂತ. ಹೌದು. ಜೂನ್ 10ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆ ಸ್ಪರ್ಧೆಯಲ್ಲಿರುವ ಇಬ್ಬರ ನಡುವಿನ ಆರ್ಥಿಕ ವ್ಯತ್ಯಾಸ ಇದು. ಇವಿಷ್ಟೆ ಅಲ್ಲ, ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಆರು ಅಭ್ಯರ್ಥಿಗಳ ಆಸ್ತಿ ವಿಚಾರವೇ ವಿಶೇಷವಾಗಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಒಟ್ಟು ನಾಲ್ಕು ಸ್ಥಾನಕ್ಕೆ ಚುನಾವಣೆ ಜೂನ್ 10ರಂದು ನಡೆಯಲಿದೆ. ಈ ನಾಲ್ಕು ಸ್ಥಾನಗಳ ಅವಧಿ ಜೂನ್ 30ಕ್ಕೆ ಮುಕ್ತಾಯವಾಗಲಿವೆ. ರಾಜ್ಯಸಭೆಯು ನಿರಂತರ ಚಾಲನೆಯಲ್ಲಿರುವ ಸದನವಾಗಿದ್ದು, ಅವಧಿ ಮುಕ್ತಾಯಕ್ಕೂ ಮುನ್ನವೇ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದೀಗ ಸದಸ್ಯರಾಗಿರುವ ಕಾಂಗ್ರೆಸ್‌ನ ಜೈರಾಮ್ ರಮೇಶ್, ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರಿಗೆ ಅವೆರಡೂ ಪಕ್ಷಗಳು ಮತ್ತೆ ಅವಕಾಶ ಕಲ್ಪಿಸಿವೆ. ಇನ್ನು, ಕೆ.ಸಿ. ರಾಮಮೂರ್ತಿ ಹಾಗೂ 2021ರ ಸೆಪ್ಟೆಂಬರ್ 13ರಂದು ನಿಧನರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಬಿಜೆಪಿಯಿಂದ ನವರಸನಾಯಕ ಜಗ್ಗೇಶ್ ಆಯ್ಕೆಯಾಗುವುದು ಖಚಿತವಾಗಿದೆ. ಉಳಿದ ಒಂದು ಸ್ಥಾನಕ್ಕೆ ಅಂದರೆ ನಾಲ್ಕನೇ ರಾಜ್ಯಸಭೆ ಸ್ಥಾನಕ್ಕೆ ಮೂವರು ಪೈಪೋಟಿಯಲ್ಲಿದ್ದಾರೆ.
ಇದನ್ನೂ ಓದಿ | ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್
ಮೇ 24ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮೇ 31ರ ಮಂಗಳವಾರ ಅಂತಿಮ ದಿನವಾಗಿತ್ತು. ಆದರೆ ಅಂತಿಮ ದಿನಕ್ಕೆ ಒಂದು ದಿನ ಇರುವಂತೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಹಾಗೂ ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಒಳಜಗಳದ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ. ಉಳಿದಂತೆ ಬಿಜೆಪಿಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ಸಿಂಗ್ ಸಿರೋಯಾ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚುನಾವಣಾ ನಾಮಪತ್ರ ಸಲ್ಲಿಸುವಾಗ ಎಲ್ಲ ಅಭ್ಯರ್ಥಿಗಳೂ ಸೂಚಿತ ನಮೂನೆಯಲ್ಲಿ ಆಸ್ತಿ, ವಿದ್ಯಾರ್ಹತೆ, ಉದ್ಯೋಗದ ಮಾಹಿತಿ ನೀಡಬೇಕು. ಅದರಂತೆ ಅನೇಕ ಆಸಕ್ತಿಕರ ವಿಚಾರಗಳು ಚುನಾವಣಾ ಅಫಿಡವಿಟ್‌ನಲ್ಲಿ ಕಂಡುಬಂದಿವೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅತ್ಯಂತ ಶ್ರೀಮಂತ. ಪತ್ನಿ ಆಸ್ತಿಯನ್ನು ಹೊರತುಪಡಿಸಿ ಕುಪೇಂದ್ರ ರೆಡ್ಡಿ ಒಟ್ಟು ಆಸ್ತಿ ಮೌಲ್ಯ ₹575.89 ಕೋಟಿ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಮೌಲ್ಯ ₹2.50 ಕೋಟಿ. ಅಂದರೆ ನಿರ್ಮಲಾ ಸೀತಾರಾಮನ್ ಅವರಿಗಿಂತ ಕುಪೇಂದ್ರ ರೆಡ್ಡಿ ಬರೊಬ್ಬರಿ 230 ಪಟ್ಟು ಶ್ರೀಮಂತ.
ಇನ್ನಷ್ಟು ಸ್ವಾರಸ್ಯಕರ ಅಂಶಗಳು
ಕಾಂಗ್ರೆಸ್ ಅಭ್ಯರ್ಥಿ ಹಾಗೂ ದಶಕಗಳಿಂದಲೂ ರಾಜಕಾರಣದಲ್ಲಿರುವ ಜೈರಾಮ್ ರಮೇಶ್ ತಮ್ಮ ಉದ್ಯೋಗವನ್ನು ಆರ್ಥಿಕ ತಜ್ಞ ಎಂದು ಹೇಳಿಕೊಂಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಪತಿ ಪರಕಾಲ ಪ್ರಭಾಕರ್ ಅವರ ಆಸ್ತಿ, ಆದಾಯ, ಸಾಲ ಸೇರಿ ಯಾವುದೇ ಮಾಹಿತಿ ಇಲ್ಲವಂತೆ. ಇನ್ನು, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪತ್ನಿ ಆರ್. ಪುಷ್ಪವತಿ 230 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಜಮೀನ್ದಾರ್ತಿ (LandLady). ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ ಓದಿರುವುದು ಕೇವಲ ಹೈಸ್ಕೂಲ್, ಅದೂ ರಾಜಸ್ಥಾನದ ಉದಯಪುರದಲ್ಲಿ.
ರಾಜ್ಯಸಭೆ ಚುನಾವಣೆಗೆ ಜೂನ್ 1ರಂದು ಅರ್ಜಿಗಳನ್ನು ಚುನಾವಣಾಧಿಕಾರಿ ಪರಿಶೀಲನೆ ನಡೆಸಲಿದ್ದಾರೆ. ನಾಮಪತ್ರವನ್ನು ಹಿಂಪಡೆಯಲು ಜೂನ್ 3 ಅಂತಿಮ ದಿನವಾಗಿರುತ್ತದೆ. ಇದೀಗ ನಾಲ್ಕನೇ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳಿರುವುದರಿಂದ ಜೂನ್ 10ಕ್ಕೆ ಚುನಾವಣೆ ನಡೆಯುವುದು ಬಹುತೇಖ ಖಚಿತ. ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರೆ ಮಾತ್ರವೇ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗುತ್ತದೆ. ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಸಂಜೆ 5ಗಂಟೆ ನಂತರ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಗಲಿದೆ.
ಅಭ್ಯರ್ಥಿ | ವಾರ್ಷಿಕ ಆದಾಯ (₹) | ಸ್ಥಿರಾಸ್ತಿ (₹) | ಚರಾಸ್ತಿ(₹) | ಒಟ್ಟು ಆಸ್ತಿ(₹) | ಸಾಲ(₹) |
ಜೈರಾಮ್ ರಮೇಶ್ | 24.73 ಲಕ್ಷ | 2.84 ಕೋಟಿ | 1.72 ಕೋಟಿ | 4.56 ಕೋಟಿ | 35.47 ಕೋಟಿ |
ನಿರ್ಮಲಾ ಸೀತಾರಾಮನ್ | 8.08 ಲಕ್ಷ | 1.87 ಕೋಟಿ | 63.39 ಲಕ್ಷ | 2.50 ಕೋಟಿ | 30.44 ಲಕ್ಷ |
ಜಗ್ಗೇಶ್ | 45.18 ಲಕ್ಷ | 13.25 ಕೋಟಿ | 4.39 ಕೋಟಿ | 17.64 ಕೋಟಿ | 2.91 ಕೋಟಿ |
ಕುಪೇಂದ್ರ ರೆಡ್ಡಿ | 86.79 ಕೋಟಿ | 222.47 ಕೋಟಿ | 353.42 ಕೋಟಿ | 575.89 ಕೋಟಿ | 67.29 ಕೋಟಿ |
ಮನ್ಸೂರ್ ಖಾನ್ | 2.01 ಕೋಟಿ | 39.94 ಕೋಟಿ | 8.39 ಕೋಟಿ | 48.33 ಕೋಟಿ | 1.92ಕೋಟಿ |
ಲೆಹರ್‌ಸಿಂಗ್ ಸಿರೋಯಾ | 2.11 ಕೋಟಿ | 29.40 ಕೋಟಿ | 16.15 ಕೋಟಿ | 45.55 ಕೋಟಿ | 40.50 ಲಕ್ಷ |
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕೆ: JDS ಮೈತ್ರಿಗೆ ಸಿದ್ದು ಗುದ್ದು