ಶಶಿಧರ್ ಮೇಟಿ, ಬಳ್ಳಾರಿ
ಇಲ್ಲೊಬ್ಬ ಭಾರತೀಯ ಸೈನಿಕರ ಸಹೋದರಿ ಇದ್ದಾಳೆ. ಗಡಿಯಲ್ಲಿ ದೇಶ ಕಾಯುವ ನೂರಾರು ಯೋಧರಿಗೆ ರಕ್ಷಾ ಬಂಧನ (Raksha Bandhan) ಹಿನ್ನೆಲೆಯಲ್ಲಿ ಪ್ರತಿ ವರ್ಷ ರಾಖಿ ಕಳಿಸಿ, ಸಹೋದರತೆ ಮೆರೆದಿದ್ದಾಳೆ. ಅಲ್ಲಿನ ಯೋಧರು ಕೂಡ ಪ್ರತಿ ಭಾನುವಾರ ತಮ್ಮ ಸಹೋದರಿಯೊಂದಿಗೆ ಮಾತನಾಡಿ ಸಂತಸಪಡುತ್ತಾರೆ. ಪರಸ್ಪರ ಮುಖ ಪರಿಚಯವಿಲ್ಲದ ಸಹೋದರತೆ, ಭಾತೃತ್ವ ಅಂದರೆ ಇದೇ ಅಲ್ಲವೇ?
ಬಳ್ಳಾರಿಯ ಬಸವೇಶ್ವರ ನಗರ ನಿವಾಸಿ ವಿದ್ಯಾಶ್ರೀ ಬಿ. ಅವರು ಕಳೆದ ಎರಡು ವರ್ಷದಿಂದ ಪ್ರತಿವರ್ಷ 900 ಯೋಧರಿಗೆ ರಕ್ಷ ಬಂಧನ ಹಿನ್ನೆಲೆಯಲ್ಲಿ ರಾಖಿ ಕಳಿಸುತ್ತಿದ್ದಾರೆ. ಈ ವರ್ಷವು ವಾಘಾ ಗಡಿಯಲ್ಲಿರುವ 300 ಯೋಧರಿಗೆ, ಅಸ್ಸಾಂನಲ್ಲಿರುವ 300 ಯೋಧರಿಗೆ, ಹರಿಯಾಣದ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ನಲ್ಲಿರುವ 300 ಯೋಧರಿಗೆ ಮಂಗಳವಾರ ರಾಖಿಯನ್ನು ಕಳಿಸಿದ್ದಾರೆ.
ಕರುನಾಡಿನ ಯೋಧರಿಗೆ ರಾಖಿ
ಬೆಂಗಳೂರಿನ ನಿವೃತ್ತ ಯೋಧ ಜಯರಾಂ ಎನ್ನುವವರು ‘ಯೋಧ ನಮನ’ ಸಂಸ್ಥೆಯನ್ನು ಹುಟ್ಟು ಹಾಕಿಕೊಂಡು ಯೋಧರ ಕ್ಷೇಮೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ವಿದ್ಯಾಶ್ರೀ ರಾಖಿಯನ್ನು ಕಳಿಸಿದ್ದಾರೆ. ವಾಘಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದವರಾದ ಮಾಯಸಂದ್ರ ಶಿವಣ್ಣ ಅವರಿಗೆ, ಅಸ್ಸಾಂನಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಚಿತ್ರದುರ್ಗದ ರವಿ ಅವರಿಗೆ ಮತ್ತು ಹರಿಯಾಣ ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಚಿಕ್ಕಬಳ್ಳಾಪುರದ ವೆಂಕಟೇಶ ಅವರ ಮೂಲಕ ಅಲ್ಲಿನ ಯೋಧರಿಗೆ ರಾಖಿ ಕಳಿಸಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ
ರಾಖಿ ಕಟ್ಟಿಸಿಕೊಳ್ಳುವ ಫೋಟೋ ಕಳಿಸುತ್ತಾರೆ
ವಿದ್ಯಾಶ್ರೀ ಕಳಿಸಿರುವ ರಾಖಿಯನ್ನು ಕರ್ನಾಟಕದ ಯೋಧರು ತಮ್ಮಲ್ಲಿರುವ ಯೋಧರಿಗೆ ಕೊಟ್ಟು, ಸಹೋದರಿಯನ್ನು ನೆನಪಿಸಿಕೊಂಡು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತಾರೆ. ತಮ್ಮ ಸಹೋದರಿ ವಿದ್ಯಾಶ್ರೀ ಅವರಿಗೆ ರಾಖಿ ಕಟ್ಟುವ ಫೋಟೋ ಕಳಿಸಿಕೊಟ್ಟು ದೇಶದ ಗಡಿಯಲ್ಲಿದ್ದು ಸಹೋದರತೆಯ ಪ್ರತೀಕವಾದ ರಕ್ಷಾ ಬಂಧನ ಆಚರಿಸಿಕೊಳ್ಳುತ್ತಿದ್ದಾರೆ.
ಸಂತಸ ಹಂಚಿಕೊಳ್ಳುವ ಯೋಧರು
ರಾಖಿ ಪಡೆದ ಯೋಧರು ಕೂಡ ಭಾನುವಾರ ಸೇರಿದಂತೆ ತಮ್ಮ ಬಿಡುವಿನ ಸಮಯದಲ್ಲಿ ಸಹೋದರಿ ವಿದ್ಯಾಶ್ರೀ ಅವರೊಂದಿಗೆ ಮಾತನಾಡಿ ಸಂತಸ ಹಂಚಿಕೊಳ್ಳುವ ಇವರು ಸಹೋದರತೆಯ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಯೋಧರು ಸುರಕ್ಷಿತರಾಗಿರಬೇಕು- ವಿದ್ಯಾಶ್ರೀ
ತಮ್ಮ ಕುಟುಂಬದವರನ್ನೆಲ್ಲ ಬಿಟ್ಟು ದೇಶದ ಗಡಿಯಲ್ಲಿ ನಮ್ಮ ರಕ್ಷಣೆಗೆ ಪ್ರಾಣದ ಅಂಗು ತೊರೆದು ಕೆಲಸ ಮಾಡುವ ಯೋಧರಿಗೆ ಹಬ್ಬ ಹರಿದಿನಗಳೇ ಇಲ್ಲ. ರಕ್ಷಾ ಬಂಧನದ ಸಂದರ್ಭದಲ್ಲಿ ನಮ್ಮ ಯೋಧರನ್ನು ನೆನೆಯುವ ಕೆಲಸ ಆಗಬೇಕೆಂದು 900 ಯೋಧರಿಗೆ ರಾಖಿಯನ್ನು ಪ್ರತಿ ವರ್ಷ ಕಳಿಸುತ್ತೇನೆ. ಸುಮಾರು 200 ಯೋಧ ಸಹೋದರರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ನಮ್ಮನ್ನು ಸುರಕ್ಷಿತವಾಗಿಡುವ ಅವರೆಲ್ಲರೂ ಸುರಕ್ಷಿತವಾಗಿರಬೇಕು ಎಂದು ವಿದ್ಯಾಶ್ರೀ ಬಿ. ಹೇಳಿದ್ದಾರೆ.
ಇದನ್ನೂ ಓದಿ | NH-63 | 6 ವರ್ಷ ಕಳೆದರೂ ಮುಗಿಯದ ಬಳ್ಳಾರಿ-ಹೊಸಪೇಟೆ ಹೆದ್ದಾರಿ ಕಾಮಗಾರಿ!