Site icon Vistara News

ರೋಡ್‌ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ

Rama Krishna mutt Swamijis gifted narendra Modi During Roadshow in bengaluru

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದು, ಲಕ್ಷಾಂತರ ಜನ ರಸ್ತೆ ಬದಿ ಕಾದು, ಮೋದಿ ಅವರನ್ನು ಕಣ್ತುಂಬಿಕೊಂಡು, ಅವರಿಗೆ ಪುಷ್ಪವೃಷ್ಟಿ ಮೂಲಕ ಅಭಿಮಾನ ಮೆರೆದಿದ್ದಾರೆ. ಜನ ಸಂಚಾರಕ್ಕೆ ತೊಂದರೆಯಾದರೂ ಬೆಂಬಲ ಮಾತ್ರ ಹೆಚ್ಚಿನ ಪ್ರಮಾಣದಲ್ಲಿಯೇ ಇತ್ತು. ಹಾಗೆಯೇ, ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಮೋದಿ ಅವರು ರೋಡ್‌ ಶೋ ಕೈಗೊಳ್ಳುವಾಗಲೇ, ಪುಸ್ತಕ, ಶಾಲು ಉಡುಗೊರೆ ನೀಡಿದ್ದು, ಮೋದಿ ಅವರು ಭಕ್ತಿಯಿಂದ ಸ್ವೀಕರಿಸಿದ್ದಾರೆ.

ರಾಮಕೃಷ್ಣ ಆಶ್ರಮದ ಮೂಲಕ ಮೋದಿ ಅವರು ರೋಡ್‌ ಶೋ ನಡೆಸುವ ವೇಳೆ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ರಸ್ತೆ ಬದಿ ನಿಂತು ಮೋದಿ ಅವರಿಗೆ ಆಶೀರ್ವದಿಸಿದರು. ಹಾಗೆಯೇ, ಪುಸ್ತಕ, ಶಾಲು ಸೇರಿ ಹಲವು ಉಡುಗೊರೆ ನೀಡಲು ಮುಂದಾದರು. ಇದನ್ನು ಕಂಡ ಮೋದಿ ಅವರು, ಉಡುಗೊರೆ ಪಡೆಯುವಂತೆ ಎಸ್‌ಪಿಜಿ ಸಿಬ್ಬಂದಿಗೆ ಸೂಚಿಸಿದರು. ಇದಾದ ಬಳಿಕ ಮೋದಿ ಅವರು ಉಡುಗೊರೆಯನ್ನು ಭಕ್ತಿಯಿಂದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

“ನರೇಂದ್ರ ಮೋದಿ ಅವರು ವಿಶ್ವನಾಯಕ ಅಲ್ಲದೆ, ದೇಶದ ಪ್ರಧಾನಿ ಕೂಡ ಆಗಿದ್ದಾರೆ. ಅವರಿಗೂ ರಾಮಕೃಷ್ಣ ಮಠಕ್ಕೂ ಅನನ್ಯ ಸಂಬಂಧವಿದೆ. ಅಂತಹ ಮಹನ್ ವ್ಯಕ್ತಿ ನಮ್ಮ ಮಠದ ಮುಂದೆ ಹಾದುಹೋಗುವಾಗ ಅವರಿಗೆ ಶುಭ ಹಾರೈಕೆ ಮಾಡುವುದು ನಮ್ಮ ಧರ್ಮ. ವಿವೇಕಾನಂದ ಮಠದ ಪುಸ್ತಕ, ಹೂಗುಚ್ಛ ಮತ್ತು ಹಾರವನ್ನು ಪ್ರಸಾದ ರೀತಿಯಲ್ಲಿ ಕಳುಹಿಸಿ ಕೊಟ್ಟಿದ್ದೇವೆ” ಎಂದು ರಾಮಕೃಷ್ಣ ಮಠದ ಸ್ವಾಮಿ ಮುಕ್ತಿಧಾನಂದಜೀ ಮಹಾರಾಜ ಹೇಳಿದರು.

ರೋಡ್‌ ಶೋ ಮಧ್ಯೆಯೇ ಮಂತ್ರಾಲಯ ಶ್ರೀಗಳ ಆಶೀರ್ವಾದ ಪಡೆದ ಮೋದಿ

ಬೆಂಗಳೂರಿನಲ್ಲಿ ಮೋದಿ ಅವರು ರೋಡ್‌ ಶೋ ಕೈಗೊಳ್ಳುವ ಮಧ್ಯೆಯೇ ಮಂತ್ರಾಲಯದ ಡಾ.ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದರು. ಬೆಂಗಳೂರಿನ ಜಯನಗರದಲ್ಲಿರುವ ಆರನೇ ಬ್ಲಾಕ್‌ ಬಳಿಯಲ್ಲಿರುವ ರಾಯರ ಮಠದ ಎದುರು ರೋಡ್‌ ಶೋ ಸಾಗುವಾಗ ಮೋದಿ ಅವರು ಮಠದ ಎದುರು ಕೈ ಮುಗಿದರು. ಇದೇ ವೇಳೆ ಮಂತ್ರಾಲಯ ಶ್ರೀಗಳು ಮೋದಿ ಅವರಿಗೆ ಆಶೀರ್ವಾದ ಮಾಡಿದರು.

ಇದನ್ನೂ ಓದಿ: Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ

ಮೋದಿ ರೋಡ್‌ ಶೋ ಹಿನ್ನೆಲೆಯಲ್ಲಿ ಮಠದ ಎದುರು ನಿಂತಿದ್ದ ಶ್ರೀಗಳು, ಮೋದಿ ಅವರು ಕೈ ಮುಗಿಯುತ್ತಲೇ ಅವರಿಗೆ ಆಶೀರ್ವಾದ ಮಾಡಿದರು. ಮೋದಿ ರೋಡ್‌ ಶೋ ಉದ್ದಕ್ಕೂ ಜನ ಅವರ ಮೇಲೆ ಹೂಮಳೆ ಸುರಿಸಿದರು.

Exit mobile version