ಬೆಂಗಳೂರು: ರಾಮನಗರದ ರಾಮದೇವರ ಬೆಟ್ಟದಲ್ಲಿರುವ ರಾಮನ ದೇವಸ್ಥಾನವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದ್ದು, ಮಂಗಳವಾರ ಆ ಸಂಬಂಧದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ವಿಕಾಸಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು.
ಬಳಿಕ ಈ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, “ರಾಮದೇವರ ಬೆಟ್ಟದಲ್ಲಿ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಇಲ್ಲಿರುವ ರಣಹದ್ದುಗಳ ಆವಾಸ ಸ್ಥಾನಕ್ಕೂ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಮುಜರಾಯಿ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕಳಿಸಿ ಕೊಡಲಾಗುವುದು. ಈ ವಿಚಾರದಲ್ಲಿ ಯಾವುದೇ ಕಾನೂನಿನ ತೊಡಕು ಎದುರಾಗದಂತೆ ಮುಂದಿನ ಹೆಜ್ಜೆ ಇಡಲಾಗುವುದು” ಎಂದರು.
19 ಎಕರೆ ವಿಸ್ತೀರ್ಣ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಬೆಳೆಸಬೇಕೆಂಬುದು ಸ್ಥಳೀಯರ ಬಹುಕಾಲದ ಆಸೆಯಾಗಿದೆ. ಇದಕ್ಕೆ 100-120 ಕೋಟಿ ರೂ. ಖರ್ಚಾಗಬಹುದು. ಮುಜರಾಯಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಅನುಮತಿಯನ್ನು ಪಡೆದುಕೊಂಡು, ಶಿಲಾನ್ಯಾಸ ಮಾಡಲಾಗುವುದು. ಆದರೆ ಇದಕ್ಕೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.
ರಾಮ ಮಂದಿರ ಯೋಜನೆಗೂ ಚುನಾವಣೆಗೂ ಸಂಬಂಧವಿಲ್ಲ. ದೇವರ ಕೆಲಸ ಮಾಡುವುದಕ್ಕೆ ಇದೆಲ್ಲ ಬೇಕಿಲ್ಲ. ಇದೇನಿದ್ದರೂ ಶ್ರೀರಾಮ ದೇವರ ಕೆಲಸವಷ್ಟೆ. ಆರಂಭಿಕವಾಗಿ ಯೋಜನಾ ವರದಿ ಸಿದ್ಧಪಡಿಸಲು 40 ಲಕ್ಷ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ.
ಈ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ವರ್ಷದ ಬಜೆಟ್ಟಿನಲ್ಲೂ ಪ್ರಕಟಿಸಿದ್ದಾರೆ. ಇದರಂತೆ ಯೋಜನೆ ಜಾರಿಗೆ ಬರಲಿದೆ. ಎರಡು ತಿಂಗಳ ಹಿಂದೆ ರಾಮನಗರದ ಸ್ಥಳೀಯ ಭಕ್ತಾದಿಗಳ ಜತೆ ಅಯೋಧ್ಯೆಗೆ ಭೇಟಿ ನೀಡಲಾಗಿತ್ತು. ಅಲ್ಲಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೂ ಈ ವಿಚಾರವನ್ನು ಚರ್ಚಿಸಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: CN Ashwathnarayan: ರಾಮನಗರ ಬಿಜೆಪಿಯಲ್ಲಿ ಭಿನ್ನಮತ; ಅಶ್ವತ್ಥನಾರಾಯಣ ವಿರುದ್ಧ ಕಾರ್ಯಕರ್ತರ ಆಕ್ರೋಶ