Site icon Vistara News

ನಕಲಿ ಸಿಮ್‌ ಬಾಕ್ಸ್‌ ಬಳಸಿ ಪಾಕಿಸ್ತಾನಕ್ಕೆ ಮಾಹಿತಿ: ಜಂಟಿ ಆಯುಕ್ತ ರಮಣ್‌ ಗುಪ್ತಾ ಹೇಳಿದ್ದೇನು?

ಬೆಂಗಳೂರು: ಪಾಕಿಸ್ತಾನಿ ಇಂಟೆಲಿಜನ್ಸ್‌ ಇಂದ ಸದ್ಯ ಮಾಮೂಲಿ ಕರೆ ಬಂದಿದ್ದು, ಈ ಬಗ್ಗೆ ಸೇನೆಗೆ ಮಹಿತಿ ಲಭ್ಯವಾಗಿದೆ ಎಂದು ಸಿಮ್‌ ಬಾಕ್ಸ್‌ ಮೂಲಕ ಪಾಕಿಸ್ತಾನದಿಂದ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದ ಪ್ರಕರಣದ ಕುರಿತು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ್‌ ಗುಪ್ತಾ ಹೇಳಿದ್ದಾರೆ.

ಬೆಂಗಳೂರಿನ ಗುಪ್ತ ಸ್ಥಳವೊಂದರಲ್ಲಿ ದುಷ್ಕರ್ಮಿಗಳು ಸಿಮ್‌ ಬಾಕ್ಸ್‌ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದರು. ಈ ಜಾಗದ ಮೇಲೆ ಪೊಲೀಸರು ದಾಳಿ ನಡೆಸಿ ಸಿಮ್‌ ಬಾಕ್ಸ್‌ ವಶಕ್ಕೆ ಪಡೆದಾಗ ಪಾಕಿಸ್ತಾನ ಇಂಟೆಲಿಜೆನ್ಸ್‌ನಿಂದ ಕರೆ ಬಂದಿರುವುದೂ ಪತ್ತೆಯಾಗಿತ್ತು. ಭಾರತ ಸೇನೆಯ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುವ ಪ್ರಯತ್ನ ನಡೆದಿರುವುದೂ ಕಂಡುಬಂದಿದೆ. ಇದರ ಹಿಂದೆ ಉಗ್ರರ ಕೈವಾಡ ಇರಬಹುದೇ ಎಂಬ ಶಂಕೆ ಮೂಡಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಮ್‌ ಬಾಕ್ಸ್‌ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ, ಆರೋಪಿ ಸೆರೆ

ಈ ಕುರಿತು ಮಾತನಾಡಿದ ರಮಣ್‌ ಗುಪ್ತಾ, ʼಸಿಮ್‌ ಬಾಕ್ಸ್‌ ಮೂಲಕ ಕರೆ ಬದಲಾವಣೆ ನಡೆಸಿದರೆ ಅದರಲ್ಲಿ ಎರಡು ರೀತಿಯ ಅಪರಾಧಗಳು ದಾಖಲಾಗುತ್ತವೆ. ಈ ರೀತಿಯ ಸಿಮ್‌ ಬಾಕ್ಸ್‌ ಬಳಸಿ ಕರೆಗಳನ್ನು ಬದಲಾಯಿಸುವುದು ಅಪಾಯಕಾರಿ. ಮಧ್ಯ-ಪೂರ್ವ ದೇಶಗಳಿಂದ ಭಾರತಕ್ಕೆ ಕರೆ ಮಾಡಲು ನಿಮಿಷಕ್ಕೆ ₹7-8 ಹಣ ಪಾವತಿಸಬೇಕು. ಈ ಸಿಮ್‌ ಬಾಕ್ಸ್‌ ಮೂಲಕ ಕರೆ ಮಾಡಿದರೆ ನಿಮಿಷಕ್ಕೆ ಕೇವಲ ₹1 ಮಾತ್ರ ಖರ್ಚಾಗುತ್ತದೆ. ನಕಲಿ ಸಿಮ್‌ ಬಾಕ್ಸ್‌ ಮೂಲಕ ಆರೋಪಿಗಳು ಅಕ್ರಮವಾಗಿ ಹೆಚ್ಚಿನ ಹಣಗಳಿಸುತ್ತಾರೆ. ಇದು ಮೊದಲನೆ ಅಪರಾಧ.

ಇನ್ನೊಂದು ಅಪರಾಧವೆಂದರೆ ಉಗ್ರ ಚಟುವಟಿಕೆಗಳ ಶಂಕೆ. ಯಾವುದೇ ಉಗ್ರ ಸಂಘಟನೆ ಕರೆ ಮಾಡಿದರೂ ಅದು ಸ್ಥಳೀಯ ಕರೆಯಾಗಿ ಬದಲಾಯಿಸಲಾಗುತ್ತದೆ. ಇದರಿಂದ ಪಾಕಿಸ್ತಾನದ ಕರೆ ಬಂದರೂ ಗೊತ್ತಾಗುವುದಿಲ್ಲ. ಆ ಕರೆಯನ್ನು ಪತ್ತೆಹಚ್ಚಲೂ ಸಾಧ್ಯವಾಗುವುದಿಲ್ಲ. ಈ ರೀತಿ ಕರೆ ಬದಲಾವಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರಮಣ್‌ ಗುಪ್ತಾ ಹೇಳಿದರು. ಈತನಿಗೆ ಸಿಮ್ ಕಾರ್ಡ್ ಯಾರು ನೀಡಿದ್ದು? ಈತನ ಉದ್ದೇಶವೇನು? ಎಂಬುದು ಸದ್ಯದಲ್ಲೇ ಪತ್ತೆಹಚ್ಚಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ನಕಲಿ ಸಿಮ್‌ ಬಳಸಿ ಬೆದರಿಕೆ, ಹನಿಟ್ರ್ಯಾಪ್‌ ಮಾಡುತ್ತಿದ್ದವರು ಪೊಲೀಸ್‌ ಬಲೆಗೆ

Exit mobile version