ಚಾಮರಾಜನಗರ: ಮೂರು ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಿಂದ ನಾಪತ್ತೆಯಾಗಿರುವ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಅವರ ಬಾವ, ಮೆಗಾಸಿಟಿ ಯೋಜನೆಯ ನಿರ್ದೇಶಕ ಮಹಾದೇವಯ್ಯ (62) (Mahadevaiah Missing) ಅವರಿಗೆ ಸಂಬಂಧಿಸಿ ಹಲವು ಅನುಮಾನಾಸ್ಪದ ಸುದ್ದಿಗಳು ಹರಿದಾಡುತ್ತಿವೆ. ಅವರ ಕಾರು ಚಾಮರಾಜನಗರ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು (Blood stains in Car) ಕಾಣಿಸಿಕೊಂಡಿವೆ. ಹೀಗಾಗಿ ಯಾರೋ ದುಷ್ಕರ್ಮಿಗಳು ಮಹಾದೇವಯ್ಯ ಅವರನ್ನು ಅಪಹರಿಸಿ, ಕೊಲೆ ಮಾಡಿರಬಹುದೇ ಎಂಬ ಗಂಭೀರ ಸಂಶಯ ಕೇಳಿಬಂದಿದೆ.
ನಾಪತ್ತೆಯಾಗುವ ದಿನ ತೋಟದ ಮನೆಯಲ್ಲಿ ಒಂಟಿಯಾಗಿದ್ದ ಅವರು ಕಾರು ಸಹಿತ ಕಣ್ಮರೆಯಾಗಿದ್ದರು. ಮಧ್ಯಾಹ್ನದ ಹೊತ್ತಿಗೆ ಅವರ ನಾಪತ್ತೆ ದೂರು ದಾಖಲಾಗುತ್ತಿದ್ದಂತೆಯೇ ಅವರ ಮೊಬೈಲ್‌ನ ಟವರ್ ಲೊಕೇಶನ್ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ಬಳಿ ಪತ್ತೆಯಾಗಿತ್ತು. ಇತ್ತ ಮನೆಯಲ್ಲಿ ಕಪಾಟುಗಳನ್ನು ಬಲವಂತವಾಗಿ ತೆರೆದಿದ್ದು ಕಂಡುಬಂದಿತ್ತು. ಬೆಡ್ ರೂಂನಲ್ಲಿ ಬಟ್ಟೆಗಳನ್ನು ಚೆಲ್ಲಾಡಲಾಗಿತ್ತು. ಯಾರೋ ಬಂದು ಮಹದೇವಯ್ಯ ಅವರಿಗೆ ಹಲ್ಲೆ ಮಾಡಿ ಅಪಹರಿಸಿದ್ದಾರೆ, ಜತೆಗೆ ಮನೆಯಲ್ಲಿ ಯಾವುದೋ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಸಂಶಯ ಅಂದು ಮೂಡಿತ್ತು.
ಸ್ವಿಚ್ ಆಫ್ ಆದ ಮೊಬೈಲ್, ತನಿಖೆಗೆ ನಾಲ್ಕು ವಿಶೇಷ ತಂಡ
ಸಿ.ಪಿ. ಯೋಗೇಶ್ವರ್ ಅವರ ಬಾವನ ನಾಪತ್ತೆ ಪ್ರಕರಣವನ್ನು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರು ಗಂಭೀರವಾಗಿ ತೆಗೆದುಕೊಂಡು ತನಿಖೆಗಾಗಿ ನಾಲ್ಕು ವಿಶೇಷ ತಂಡವನ್ನು ರಚಿಸಿದ್ದರು. ಮಹದೇವಯ್ಯ ಪುತ್ರ ಪ್ರಶಾಂತ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಅವರ ಮೊಬೈಲ್ ಲೊಕೇಶನ್ ಸಿಕ್ಕರೆ ಪತ್ತೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಪ್ರಯತ್ನ ನಡೆಸಲಾಗಿತ್ತು. ಮೊಬೈಲ್ ಗೆ ನಿರಂತರ ಕರೆ ಮಾಡಿದಾಗ ಒಮ್ಮೆ ಯಾರೋ ಒಬ್ಬರು ಸ್ವೀಕರಿಸಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ತೋಟದ ಮನೆಯ ಸಿಸಿ ಟಿವಿ ಕೆಟ್ಟಿದ್ದರಿಂದ ಯಾರು ಬಂದರು, ಯಾರು ಅಪಹರಿಸಿದರು ಎನ್ನುವ ಮಾಹಿತಿಗಳು ಲಭ್ಯವಾಗಿಲ್ಲ. ಅಕ್ಕಪಕ್ಕದ ಮನೆಗಳ ಸಿಸಿ ಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಲಾಗಿದ್ದರೂ ಹೆಚ್ಚಿನ ಕ್ಲೂಗಳು ಸಿಕ್ಕಿಲ್ಲ.
ಚಾಮರಾಜನಗರದಲ್ಲಿ ಕಾರು ಪತ್ತೆ
ಈ ನಡುವೆ, ಮಹದೇವಯ್ಯ ಅವರು ಬಳಸುತ್ತಿದ್ದ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದೆ. ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಕಾರು ನಿಂತಿರುವುದನ್ನು ನೈಟ್ ಬೀಟ್ ಪೊಲೀಸರು ಗುರುತಿಸಿದ್ದಾರೆ.
ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು
ಈ ನಡುವೆ, ರಾಮಾಪುರದಲ್ಲಿ ಪತ್ತೆಯಾದ ಕಾರನ್ನು ಪರಿಶೀಲಿಸಿದಾಗ ಅದರ ಡಿಕ್ಕಿಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಈ ಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಂತಿತ್ತು. ಕಾರು ಡಿಕ್ಕಿ ಓಪನ್ ಮಾಡಿದಾಗ ರಕ್ತದ ಕಲೆಗಳು ಪತ್ತೆ ಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಮುತ್ತ ಸಿಸಿ ಟಿವಿ ಪರಿಶೀಲನೆ ನಡೆಸಿರುವ ಪೊಲೀಸರು ಈ ಕಾರನ್ನು ಯಾರು, ಯಾವಾಗ ಇಟ್ಟು ಹೋದರು, ಆಗಿನ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ಪರಿಶೀಲನೆ ನಡೆಸುವ ಯತ್ನ ಮಾಡಿದ್ದಾರೆ. ಭಾನುವಾರ ರಾತ್ರಿಯೇ ಕಾರು ಇರುವ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ, ಫಿಂಗರ್ ಫ್ರಿಂಟ್ ತಂಡ, ಶ್ವಾನ ತಂಡ ಭೇಟಿ ನೀಡಿದೆ.
ಕಾರಿನಲ್ಲಿರುವ ರಕ್ತದ ಕಲೆಗಳಿಂದಾಗಿ ಹಲವು ಅನುಮಾನಗಳು ಮೂಡಿವೆ. ಮಹದೇವಯ್ಯ ಕೊಲೆಯಾಗಿರೋ ಶಂಕೆಯೂ ವ್ಯಕ್ತವಾಗುತ್ತಿದೆ. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Channapatna News: ಸಿಪಿವೈ ಬಾವ ಮಹದೇವಯ್ಯ ಪತ್ತೆಗೆ 4 ವಿಶೇಷ ತಂಡ ರಚನೆ
ಸ್ಥಳಕ್ಕೆ ಆಗಮಿಸಿದ ಸಿ.ಪಿ. ಯೋಗೇಶ್ವರ್
ಈ ನಡುವೆ, ಕಾರು ಇರುವ ಸ್ಥಳಕ್ಕೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭೇಟಿ ನೀಡಿದ್ದಾರೆ. ಕಾರು ಪರಿಶೀಲನೆ ನಡೆಸಿದ ಅವರು ರಾಮಾಪುರ, ಚನ್ನಪಟ್ಟಣ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಾವ ಮಹದೇವಯ್ಯ ಅವರನ್ನ ಅದಷ್ಟು ಬೇಗ ಪತ್ತೆ ಹಚ್ಚುವಂತೆ ಪೊಲೀಸರಿಗೆ ತಾಕೀತು ಮಾಡಿದ ಸಿ.ಪಿ. ಯೋಗೇಶ್ವರ್ ಆರೋಪಿಗಳನ್ನ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.