Site icon Vistara News

CP Yogeshwar : ಸಂಕ್ರಾಂತಿ ವೇಳೆಗೆ ಕಾಂಗ್ರೆಸ್‌ ಸರ್ಕಾರ ಪತನ; ಸಿ.ಪಿ. ಯೋಗೇಶ್ವರ್‌ ಬಾಂಬ್

CP Yogeshwar Congress government Collapse

ರಾಮನಗರ: ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ (Sun Changes direction) ರೀತಿ, ರಾಜಕೀಯ ಪಥ ಬದಲಾವಣೆ (Political direction) ಆಗಲಿದೆ. ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ (Congress Government) ಇರೋದು ಡೌಟ್!: ಹೀಗೊಂದು ಬಾಂಬ್‌ ಸಿಡಿಸಿದ್ದಾರೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar).

ʻʻಪ್ರಸಕ್ತ ರಾಜಕೀಯ ಬೆಳವಣಿಗೆಗೆ ಕಾಂಗ್ರೆಸ್ ನಾಯಕರ ನಡೆಯೇ ಕಾರಣ. 2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆ ಇದೆ. ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರು ವಿಮುಖವಾಗಿ ಯೋಚನೆ ಮಾಡ್ತಿದ್ದಾರೆ. ಕೆಲವು ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆʼʼ ಎಂದು ಯೋಗೇಶ್ವರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರು ನಿರುದ್ಯೋಗಿಗಳಾಗಿದ್ದಾರೆ

ʻʻಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದಾರೆ‌. ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಹಾಗಾಗಿ ಅನುದಾನ ಕೊಡಲ್ಲ ಅಂತ ಹೇಳಿದ್ದಾರೆ‌. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ‌. ಅವರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಇದರ ಪರಿಣಾಮವನ್ನು ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡ್ತೀರಾʼʼ ಎಂದು ಯೋಗೇಶ್ವರ್‌ ಚನ್ನಪಟ್ಟಣದಲ್ಲಿ ಹೇಳಿದರು.

ʻʻನಾವು ಯಾವುದೇ ರೀತಿಯ ಆಪರೇಷನ್ ಮಾಡ್ತಿಲ್ಲ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ. ಡಿ.ಕೆ. ಶಿವಕುಮಾರ್‌ ರೀತಿ ಆಪರೇಷನ್ ಹಸ್ತದ ಕೆಲಸವನ್ನೂ ನಾವು ಮಾಡಲ್ಲ. ಸದ್ಯ ನನಗಿರುವ ಮಾಹಿತಿ ಪ್ರಕಾರ ಹೇಳಿದ್ದೇನೆ.. ಖಾಸಗಿಯಾಗಿ ಸಿಕ್ಕಾಗ ಕೆಲವರು ನೋವನ್ನ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರೆʼʼ ಎಂದು ಸಿ.ಪಿ. ಯೋಗೇಶ್ವರ್‌ ಹೇಳಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಅನಿವಾರ್ಯ ಎಂದ ಯೋಗೇಶ್ವರ್‌

ʻʻಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಎದುರಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಅನಿವಾರ್ಯʼʼ ಎಂದು ಸಿ.ಪಿ, ಯೋಗೇಶ್ವರ್‌ ಪ್ರತಿಪಾದಿಸಿದರು.

ʻʻರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಮನಕಾರಿ ಆಡಳಿತ ಮಾಡುತ್ತಿದೆ. ಡಿಕೆ ಶಿವಕುಮಾರ್‌ ಅವರು ಆಪರೇಷನ್ ಹಸ್ತ ಅಂತ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಅವರನ್ನು ಎದುರಿಸಲು ಹೊಂದಾಣಿಕೆ ಆಗಿದೆ. ಇದರಿಂದ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಕ್ಕೂ ಅನುಕೂಲ ಆಗಲಿದೆʼʼ ಎಂದು ಹೇಳಿದರು.

ʻʻಮೈತ್ರಿ ಬಗ್ಗೆ ನಿನ್ನೆ ಜೆಡಿಎಸ್ ಸರ್ವಾನುಮತದ ಒಪ್ಪಿಗೆ ಪಡೆದಿದೆ. ಮುಂದಿನ ವಾರ ಚನ್ನಪಟ್ಟಣ ಬಿಜೆಪಿ ಸ್ಥಳೀಯ ನಾಯಕರ ಸಭೆ ನಡೆಸುತ್ತೇವೆ. ಮೈತ್ರಿ ಬಗ್ಗೆ ಭೂತ್ ಮಟ್ಟದ ನಾಯಕರು, ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇವೆ. ಬಳಿಕ ಜೆಡಿಎಸ್ ನಾಯಕರ ಜೊತೆ ಮತ್ತೊಂದು ಸಭೆ ಮಾಡುತ್ತೇವೆʼʼ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಹೇಳಿದರು.

ಇದನ್ನೂ ಓದಿ: DK Shivakumar : ಪೂಜನೀಯ ದೇವೇಗೌಡರೇ ನಿಮ್ಮ ಮಗನ್‌ ಕಥೆ ಏನು? ; ಮಿಸ್ಟರ್‌ ಡಿಕೆ‌ ಶಿವಕುಮಾರ್ ಹೇಳಿಕೆಗೆ ಕೌಂಟರ್!

ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು

ʻʻಬೆಂಗಳೂರು ಗ್ರಾಮಾಂತರ ವಿಚಾರದಲ್ಲಿ ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶ ಸಿಕ್ಕಿದರೆ ಒಂದು ವೇಳೆ ನನ್ನನ್ನು ಚುನಾವಣೆಗೆ ನಿಲ್ಲಲು ಸೂಚಿಸಿದರೆ ನಾನು ಸ್ಪರ್ಧೆ ಮಾಡುತ್ತೇನೆ. ಒಂದುವೇಳೆ ಜೆಡಿಎಸ್ ಗೆ ಅವಕಾಶ ನೀಡಿದರೆ ಅವರಿಗೆ ಸಪೋರ್ಟ್ ಮಾಡುತ್ತೇನೆ. ಮುಂದಿನ ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆʼʼ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ನನಗೆ ಗೊತ್ತಿಲ್ಲ, ಯೋಗೇಶ್ವರ್‌ಗೆ ಗೊತ್ತಿರಬೇಕು ಎಂದ ಅಶ್ವತ್ಥ್‌ ನಾರಾಯಣ್‌

ʻʻಸಂಕ್ರಾಂತಿ ಬಳಿಕ ಸರ್ಕಾರ ಬೀಳಲಿದೆʼʼ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ʻʻಇದರ ಬಗ್ಗೆ ಯೋಗೇಶ್ವರ್ ಅವರಿಗೆ ಗೊತ್ತಿರಬೇಕು. ನನಗೆ ಸಂಪೂರ್ಣ ಮಾಹಿತಿ ಇಲ್ಲ. ಬರುವ ಲೋಕಸಭಾ ಚುನಾವಣೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆʼʼ ಎಂದು ಹೇಳಿದರು.

Exit mobile version