Site icon Vistara News

Family Dispute : ಹೆಂಡತಿ ದೂರವಾದ ಬೇಸರ; ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ

Suicide attempt

ರಾಮನಗರ: ಕೌಟುಂಬಿಕ ಕಲಹ (Family dispute) ಮತ್ತು ಹೆಂಡತಿ ದೂರವಾದ ಬೇಸರದಲ್ಲಿ ನೊಂದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ಜಾಮೂನಿನಲ್ಲಿ ವಿಷ ಬೆರೆಸಿ (Father gives posion to children) ನೀಡಿದ್ದಲ್ಲದೆ, ತಾನೂ ವಿಷ ಕುಡಿದು ಆತ್ಮಹತ್ಯೆಗೆ (Attempt to suicide) ಯತ್ನಿಸಿದ್ದಾನೆ.

ರಾಮನಗರ ತಾಲೂಕಿನ (Ramanagara news) ಕ್ಯಾಸಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕುಮಾರ್‌ (35) ಎಂಬವರು ತಮ್ಮ ಮಕ್ಕಳಾದ ವಂದನಾ (3) ಮತ್ತು ತನುಶ್ರೀ (4)ಗೆ ವಿಷ ನೀಡಿ ತಾನೂ ತಿಂದು ಸಾಯಲು ಯತ್ನಿಸಿದ್ದಾರೆ. ಕುಮಾರ್‌ ಮತ್ತು ಮಕ್ಕಳು ಅಸ್ವಸ್ಥರಾಗಿರುವುದನ್ನು ಗಮನಿಸಿದ ಅವರ ಸಹೋದರ ಮೂವರನ್ನೂ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಮೂವರ ಸ್ಥಿತಿಯೂ ಗಂಭೀರವಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಡತಿ ದೂರವಾದ ನೋವಿನಿಂದ ಈ ಕೃತ್ಯ

ಕ್ಯಾಸಾಪುರದ ಬೋರಲಿಂಗಯ್ಯ ಎಂಬವರ ಪುತ್ರನಾಗಿರುವ ಕುಮಾರ ಕೆ.ಜಿ ಅವರಿಗೆ 6 ವರ್ಷದ ಹಿಂದೆ ಚನ್ನಪಟ್ಟಣ ತಾಲ್ಲುಕಿನ ಚಕ್ಕಲೂರು ದೊಡ್ಡಿ ಗ್ರಾಮದ ವಾಸಿ ರಾಜು ಅವರ ಮಗಳಾದ ನಂದಿನಿ ಅವರೊಂದಿಗೆ ಮದುವೆ ನಡೆದಿತ್ತು. ಅವರಿಬ್ಬರ ಸಂಬಂಧದಲ್ಲಿ ನಾಲ್ಕು ವರ್ಷದ ತನುಶ್ರೀ ಮತ್ತು ಎರಡುವರೆ ವರ್ಷದ ವಂದನಾ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಈ ಸಂಸಾರದಲ್ಲಿ ಆರೇಳು ತಿಂಗಳ ಹಿಂದೆ ಕಲಹ ಉಂಟಾಗಿ ಕುಮಾರ ಅವರ  ಹೆಂಡತಿ ನಂದಿನಿ ಅವರು ಜಗಳ ಮಾಡಿಕೊಂಡು ಅವರ ತವರು ಮನೆಗೆ ಹೋಗಿದ್ದರು. ಅದಾದ ಬಳಿಕ ಮನೆಗೆ ಬಂದಿಲ್ಲ. ಮಕ್ಕಳನ್ನು ಕೂಡಾ ಗಂಡನ ಬಳಿಯೇ ಬಿಟ್ಟು ಹೋಗಿದ್ದರು.

ಕುಮಾರ ಅವರು ಕಳೆದ ಆರೇಳು ತಿಂಗಳಿನಿಂದ ಮಕ್ಕಳನ್ನು ತಾವೇ ನೋಡಿಕೊಳ್ಳುತ್ತಿದ್ದರು. ಹೆಂಡತಿಯನ್ನು ಮನವೊಲಿಸಿ ಕರೆ ತರುವ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದರು. ಈ ವಿಚಾರದಲ್ಲಿ ಮನಸ್ಸು ನೋಯಿಸಿಕೊಂಡಿದ್ದ ಅವರು ಇದೇ ಕೊರಗಿನಲ್ಲಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಮಕ್ಕಳನ್ನು ಸಾಯಿಸಿ ತಾನೂ ಸಾಯಲು ನಿರ್ಧರಿಸಿದ ಅವರು ಮಕ್ಕಳಿಗೆ ಪ್ರಿಯವಾದ ಜಾಮೂನು ತಂದಿದ್ದರು. ಆದರೆ, ಅದಕ್ಕೆ ಬೆಳೆಗೆ ಹೊಡೆಯುವ ಯಾವುದೋ ವಿಷವನ್ನು ಬೆರೆಸಿ ಮಕ್ಕಳಿಗೆ ನೀಡಿದ್ದರು. ಬಳಿಕ ತಾನೂ ವಿಷ ಕುಡಿದಿದ್ದರು.

ಸ್ವಲ್ಪ ಹೊತ್ತಿನಲ್ಲಿ ಮೂರೂ ಮಂದಿ ವಾಂತಿ ಮಾಡಿಕೊಳ್ಳುತ್ತಿರುವುದು, ಅಸ್ವಸ್ಥರಾಗಿರುವುದರನ್ನು ಗಮನಿಸಿದ ಪಕ್ಕದ ಮನೆಯವರು ವಿಚಾರಿಸಿದಾಗ ತಾನು ಮಕ್ಕಳಿಗೆ ವಿಷ ನೀಡಿ ತಾನೂ ವಿಷ ಸೇವಿಸಿದ್ದಾಗಿ ತಿಳಿಸಿದ್ದರು. ಪಕ್ಕದ ಮನೆಯವರು ಕೂಡಲೇ ಕುಮಾರ ಅವರ ಸಹೋದರನಿಗೆ ವಿಷಯ ತಿಳಿಸಿದ್ದರು. ಸಹೋದರ ಅವರು ಕೂಡಲೇ ಧಾವಿಸಿ ಮೂವರನ್ನೂ ಮೊದಲು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರ್ ಆರ್ ನಗರ ಹತ್ತಿರ ಬಳಿ ಇರುವ ಎಟ್ರಿಯಮ್ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲಿಸಿದ್ದಾರೆ. ಈಗ ಚಿಕಿತ್ಸೆ ಮುಂದುವರೆಯುತ್ತಿದೆ.

ಈಗ ಮೂವರಿಗೂ ಚಿಕಿತ್ಸೆ ನಡೆಯುತ್ತಿದ್ದು, ಅವರಿನ್ನೂ ಅಪಾಯದಿಂದ ಹೊರಬಂದಿಲ್ಲ ಎಂದು ತಿಳಿದುಬಂದಿದೆ.

Exit mobile version