ರಾಮನಗರ: ಗಣೇಶ ಚತುರ್ಥಿ ಹಬ್ಬವು (Ganesha Chaturthi 2023) ಸೋಮವಾರದಿಂದ ಪ್ರಾರಂಭವಾಗಿದೆ. ದೇಶಾದ್ಯಂತ ವಿಘ್ನ ನಿವಾರಕನ ಪೂಜೆ ನಡೆಯುತ್ತಿದೆ. ಸಂಭ್ರಮದಿಂದ ಆಚರಣೆ ನಡೆಯುತ್ತಿದೆ. ಈ ಮಧ್ಯೆ ಗಣೇಶನ ಮೂರ್ತಿಗಳನ್ನು (Ganesha idol) ಮನೆಗೆ ತಂದು ಪ್ರತಿಷ್ಠಾಪಿಸಿ, ಪೂಜೆ ಮಾಡಿ ವಿಸರ್ಜನೆ ಮಾಡುವ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದೆ. ಆದರೆ,ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (Plaster of Paris – ಪಿಒಪಿ) ಗಣೇಶನ ಮೂರ್ತಿಯ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ (Supreme Court) ಆದೇಶ ಹೊರಡಿಸಿದ್ದರೂ ಕೆಲವು ಕಡೆ ಇನ್ನೂ ಕದ್ದು ಮುಚ್ಚಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ರಾಮನಗರ ತಾಲೂಕಿನಲ್ಲಿ ಸದ್ದಿಲ್ಲದೆ ತಯಾರಾಗುತ್ತಿದ್ದ ಪಿಒಪಿ ಗಣೇಶ ಮೂರ್ತಿ (POP Ganesha Murthy( ಉತ್ಪಾದನಾ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಸುಮಾರು 70ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.
ರಾಮನಗರ ತಾಲೂಕಿನ ಧಾರಾಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪಿಒಪಿ ಗಣೇಶ ಮೂರ್ತಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರ ಎಸಿ ವಿನಯ್ ಬಿ.ಕೆ. ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: Weather Report : ಬೆಂಗಳೂರಿನಲ್ಲಿಂದು ಭಾರಿ ಮಳೆ; ಕರಾವಳಿಯಲ್ಲೂ ಜೋರು
ಈ ವೇಳೆ ಸುಮಾರು 70ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳು ತಯಾರಾಗಿರುವುದು ಕಂಡು ಬಂದಿದೆ. ಆ ಎಲ್ಲವನ್ನೂ ಜಪ್ತಿ ಮಾಡಲಾಗಿದೆ. ಮಾಲಿನ್ಯ ಮಂಡಳಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆಂಧ್ರ, ಕೇರಳಕ್ಕೆ ರವಾನೆ ಮಾಡಲು ಸಿದ್ಧತೆ
ನವೀನ್ ಎಂಬಾತನ ಮಾಲೀಕತ್ವದಲ್ಲಿ ಈ ಪಿಒಪಿ ಗಣೇಶ ಮೂರ್ತಿಗಳು ತಯಾರಾಗಿದ್ದವು. ಕೇರಳ, ಆಂಧ್ರ ಪ್ರದೇಶ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಇದನ್ನು ರವಾನೆ ಮಾಡಲು ಸಿದ್ಧತೆಗಳು ನಡೆದಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Karnataka Politics : ಕೆ.ಎನ್. ರಾಜಣ್ಣರ ಮೂವರು ಡಿಸಿಎಂ ಹೇಳಿಕೆಗೆ ಸಿಎಂ ಉತ್ತರಿಸಲಿ: ಡಿ.ಕೆ. ಶಿವಕುಮಾರ್
ಈ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೆ, ಯಾರೂ ಸಹ ಪಿಒಪಿ ಗಣೇಶ ಮೂರ್ತಿಯನ್ನು ಉತ್ಪಾದನೆ ಮಾಡುವುದಾಗಲೀ, ಮಾರಾಟವನ್ನು ಮಾಡುವುದಾಗಲಿ ಮಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.