Site icon Vistara News

ರಾಮನಗರದಿಂದ ಕಣಕ್ಕಿಳಿಯಲಿದ್ದಾರೆ ನಿಖಿಲ್‌ ಕುಮಾರಸ್ವಾಮಿ: ಹಾಗಾದರೆ ಎಚ್‌ಡಿಕೆ ಸ್ಪರ್ಧೆ ಎಲ್ಲಿಂದ?

HD Kumaraswamy hints about nikhil kumaraswamy contesting from ramanagara

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾದಂತೆಯೇ ಪಂಚರತ್ನ ಯಾತ್ರೆ ಮೂಲಕ ಸಂಚರಿಸುತ್ತಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಹತ್ವದ ಸುಳಿವೊಂದನ್ನು ನೀಡಿದ್ದು, ಪುತ್ರ ನಿಖಿಲ್‌ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ.

ಜೆಡಿಎಸ್‌ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಆಯೋಜಿಸಿದ್ದ ಪಕ್ಷದ ಶಾಸಕರು ಹಾಗೂ ಮುಂದಿನ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಶುಕ್ರವಾರ ತೊಂಭತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮಳೆ ಬಿಡುವಿನ ಬಳಿಕ ಮತ್ತೆ ಪಂಚರತ್ನ ಕಾರ್ಯಕ್ರಮ ಆರಂಭ ಆಗುತ್ತಿದೆ. ಚುನಾವಣೆ ಎದುರಿಸುವ ಬಗ್ಗೆ, ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ, ಪಂಚರತ್ನ ಜನರಿಗೆ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಸಂಭವನೀಯ ಪಟ್ಟಿ ಯಲ್ಲಿ ಇರುವ ಅಭ್ಯರ್ಥಿಗಳ ಪಟ್ಟಿಯೇ ಅಂತಿಮವಲ್ಲ ಎಂದ ಕುಮಾರಸ್ವಾಮಿ, ಕೆಲಸ ಮಾಡದಿದ್ದರೆ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದೇವೆ ಎಂದರು. ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಮ್ಮ ರಥಯಾತ್ರೆ ಆರಂಭ ಆದ ನಂತರ ಎರಡೂ ಪಕ್ಷಗಳಲ್ಲಿ ಗಲಿಬಿಲಿ ಆರಂಭ ಆಗಿದೆ. ಅವರಿಗೆ ನಡುಕ ಶುರುವಾಗಿದೆ. ನಾವು ಜನರಿಗೆ ಹತ್ತಿರ ಆಗಿದ್ದೇವೆ.

ಕಾಂಗ್ರೆಸ್‌ ಕೇವಲ ಅರವತ್ತರಿಂದ ಎಪ್ಪತ್ತು, ಬಿಜೆಪಿ ಐವತ್ತು ಸ್ಥಾನಗಳಲ್ಲಿ ಅಷ್ಟೇ ಶಕ್ತವಾಗಿವೆ. ನಾವು ರಣರಂಗದಲ್ಲಿ ಆಗಲೇ ಶಸ್ತ್ರಾಬ್ಯಾಸ ಆರಂಭಿಸಿದ್ದೇವೆ. ಇವರಿಬ್ಬರೂ ಇನ್ನೂ ಅಭ್ಯಾಸ ಆರಂಭಿಸಿಲ್ಲ. ನಮಗೆ ಯಾರೂ ಶಾಕ್ ಕೊಡಲು ಸಾಧ್ಯ ಇಲ್ಲ ಎಂದರು.

ಶುಕ್ರವಾರ ಬಿಡುಗಡೆಯಾಗುವ ಪಟ್ಟಿಯಲ್ಲಿ ನಿಖಿಲ್‌ ಕುಮಾರಸ್ವಾಮಿ ಹೆಸರೂ ಇರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನಿಮಗೇನು ಅಷ್ಟು ಆಸಕ್ತಿ? ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ನನಗೆ ನಿಖಿಲ್‌ನ ಹೇಗಪ್ಪ ದಡ ಸೇರಿಸುವುದು ಎಂಬ ಚಿಂತೆ ಇಲ್ಲ.

ನನಗೆ ಇರೋದು ನಾಡಿನ ಜನರ ಚಿಂತೆ. ನಿಖಿಲ್‌ಗೆ ಯಾರ‍್ಯಾರು ನಾಯಕರಿದ್ದಾರೋ ಅವರನ್ನು ದಡ ಸೇರಿಸುವುದು ನನಗೆ ಮುಖ್ಯ. ನಿಖಿಲ್ ಭವಿಷ್ಯವನ್ನು, ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರು ತಿರ್ಮಾನ ಮಾಡುತ್ತಾರೆ ಎಂದರು.

ಕುಮಾರಸ್ವಾಮಿಯವರೇ ಆನೇಕ ಬಾರಿ ಹೇಳಿರುವಂತೆ ತಮಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ರಾಮನಗರ ಕ್ಷೇತ್ರ. ಹಾಗಾಗಿ ರಾಮನಗರದಿಂದಲೇ ಪುತ್ರನನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ನಂತರದಲ್ಲಿ ರಾಮನಗರವನ್ನು ಬಿಟ್ಟು ಚನ್ನಪಟ್ಟಣವನ್ನೇ ಉಳಿಸಿಕೊಂಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜಯಗಳಿಸಿದ್ದರು. ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪ್ರಬಲ ಅಭ್ಯರ್ಥಿಯಾಗಿದ್ದು, ಅಲ್ಲಿ ಈ ಹಿಂದೆ ಒಮ್ಮೆ ಅನಿತಾ ಕುಮಾರಸ್ವಾಮಿ ಸೋಲುಂಡಿದ್ದರು.

ಚನ್ನಪಟ್ಟಣದಲ್ಲಿ ಸ್ವತಃ ಕುಮಾರಸ್ವಾಮಿ ಹೊರತುಪಡಿಸಿ ಬೇರೆಯವರು ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದು ಎಂಬ ಕಾರಣಕ್ಕೆ ರಾಮನಗರವನ್ನೇ ಬಿಟ್ಟುಕೊಡಲು ಮುಂದಾಗಿದ್ದಾರೆ. ಕುಮಾರಸ್ವಾಮಿಯವರು 2023ರ ಚುನಾವಣೆಗೆ ಚನ್ನಪಟ್ಟಣದಿಂದ ಮಾತ್ರ ಸ್ಪರ್ಧೆ ಮಾಡುತ್ತಾರೆಯೇ ಎಂಬ ಚರ್ಚೆ ನಡೆಯುತ್ತಿದೆ. ಶುಕ್ರವಾರ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಆ ಪಟ್ಟಿಯಲ್ಲಿ ರಾಮನಗರವೂ ಇರುತ್ತದೆಯೇ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ | Bharat Rashtra Samithi | ತೆಲಂಗಾಣದಲ್ಲಿ ಟಿಆರ್‌ಎಸ್‌ ಈಗ ಬಿಆರ್‌ಎಸ್‌, ಸಿಎಂ ಕೆಸಿಆರ್‌ಗೆ ಶುಭ ಕೋರಿದ ಕುಮಾರಸ್ವಾಮಿ

Exit mobile version