Site icon Vistara News

‌IAS Officer : ಐಎಎಸ್‌ ಅಧಿಕಾರಿಯ ದೌಲತ್ತು! ಜನಸ್ಪಂದನದಲ್ಲಿ ಮೊಬೈಲ್‌ ಆಟ; ಕೇಳೋರಿಲ್ಲ ಜನರ ಸಂಕಟ

Ramanagara IAS officer

ರಾಮನಗರ: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಜನರು ಸಂಕಷ್ಟದಲ್ಲಿದ್ದಾರೆ. 236 ತಾಲೂಕುಗಳಲ್ಲಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನು ರಾಜ್ಯ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಜನಸ್ಪಂದನ ಸಭೆಯಲ್ಲಿ (Janaspandana meeting) ಐಎಎಸ್‌ ಅಧಿಕಾರಿಯೊಬ್ಬರು (‌IAS Officer) ವೇದಿಕೆಯಲ್ಲಿ ಮೊಬೈಲ್‌ ಗೇಮ್‌ (Mobile Game) ಆಡುತ್ತಾ ಕುಳಿತು ದೌಲತ್ತು ಮೆರೆದಿದ್ದಾರೆ. ರಾಮನಗರ ಜಿಪಂ ಸಿಇಒ (Ramanagara ZP CEO) ಅವರ ಈ ಕ್ರಮ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಮುಳುಗುವುದು ಎಷ್ಟು ಸರಿ? ಅಧಿಕಾರಿಗಳು ಇರುವುದು ಜನ ಸೇವೆ ಮಾಡಲೋ? ಅಥವಾ ಉಡಾಫೆಯಿಂದ ನಡೆದುಕೊಳ್ಳಲೋ ಎಂಬ ಪ್ರಶ್ನೆಯನ್ನು ಇದೀಗ ಜನರು ಮಾಡುತ್ತಿದ್ದಾರೆ. ಇನ್ನು ಆ ಅಧಿಕಾರಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ನೀತಿ ರೂಪಿಸಬೇಕು ಎಂದು ಬಿಜೆಪಿ ಸೇರಿದಂತೆ ರಾಜಕೀಯ ನಾಯಕರು ಆಗ್ರಹಿಸಿದ್ದಾರೆ.

ರಾಮನಗರ ತಾಲೂಕಿನ ಮಾಗಡಿಯಲ್ಲಿ ಶುಕ್ರವಾರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (Ramalinga reddy) ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಎಎಸ್‌ಪಿ ಟಿ.ವಿ.ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಐಎಎಸ್‌ ಅಧಿಕಾರಿ, ಸಿಇಒ ದಿಗ್ವಿಜಯ್‌ ಬೋಡ್ಕೆ (Digvijay Bodke) ಅವರು ಕಾಲು ಮೇಲೆ ಕಾಲು ಹಾಕಿಕೊಂಡು ತಮ್ಮ ಮೊಬೈಲ್‌ನಲ್ಲಿ ಕ್ಯಾಂಡಿ ಕ್ರಶ್‌ ಆಟವಾಡುತ್ತಾ ಕುಳಿತಿದ್ದರು. ಇದು ವಿಸ್ತಾರ ನ್ಯೂಸ್‌ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದೆ. ಐಎಎಸ್‌ ಅಧಿಕಾರಿಯ ಈ ನಡೆಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ಓದಿ: Tiger Nail : ಜನರ ದಾರಿ ತಪ್ಪಿಸಲು ಹುಲಿ ಉಗುರಿನ ನಾಟಕ; ಬೋಗಸ್‌ ಭಾಗ್ಯ ಮರೆಮಾಚಲು ಪ್ಲ್ಯಾನ್‌ ಎಂದ ಸಿ.ಟಿ. ರವಿ

ಜನಸ್ಪಂದನ ಸಭೆಯಲ್ಲಿ ಸಿಇಒ ದೌಲತ್ತು

ಜನಸ್ಪಂದನಾ ಸಭೆಯಲ್ಲಿ ಸಿಇಒ ಆದವರು ಈ ರೀತಿಯ ದೌಲತ್ತು ಮಾಡಬಾರದಿತ್ತು ಎಂದು ಜನಸಾಮಾನ್ಯರು ಸಾಕಷ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇವರು ಟೈಂ ಪಾಸ್‌ ಅಧಿಕಾರಿ ಎಂದು ದೂರಿದ್ದಾರೆ. ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಕಡೆ ಸಚಿವರಿಂದ ಗಂಭೀರ ಸಭೆ ನಡೆಯುತ್ತಿದ್ದರೆ, ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತವಾಗಿ ಸ್ಪಂದಿಸಬೇಕಿದ್ದ ಅಧಿಕಾರಿಯೊಬ್ಬರು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಆಟ!

ಸಚಿವ ರಾಮಲಿಂಗಾ ರೆಡ್ಡಿ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾ ಕುಳಿತಿದ್ದರೂ ಐಎಎಸ್‌ ಅಧಿಕಾರಿ, ಸಿಇಒ ದಿಗ್ವಿಜಯ್‌ ಬೋಡ್ಕೆ ಕಾಲು ಮೇಲೆ ಕಾಲು ಹಾಕಿಕೊಂಡು ಅತ್ತ ಗಮನವನ್ನೇ ಕೊಡದೆ ಆಟ ಆಡುತ್ತಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಜನರೇ ಬನ್ನಿ, ನಿಮ್ಮ ಕಷ್ಟಗಳನ್ನು ನಾವು ಪರಿಹರಿಸುತ್ತೇವೆ ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಾಗುತ್ತಿರುವುದು ಏನು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅಧಿಕಾರಿಗಳ ವರ್ತನೆ ಬಗ್ಗೆ ನೀತಿ – ನಿರೂಪಣೆ ಜಾರಿಯಾಗಲಿ

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್‌ ಸದಸ್ಯ ಚಲವಾದಿ ನಾರಾಯಣ ಸ್ವಾಮಿ, ಅಧಿಕಾರಿಗಳಿಗೆ ಶ್ರದ್ಧೆಯೇ ಇಲ್ಲ. ಈ ಸರ್ಕಾರದಲ್ಲಿ ಪ್ರತಿಯೊಬ್ಬರೂ ವರ್ಗಾವಣೆ ದಂಧೆಯಲ್ಲಿದ್ದಾರೆ. ಹಣ ಕೊಟ್ಟು ಬಂದ ಅಧಿಕಾರಿಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ತಪ್ಪಿತಸ್ಥ ಐಎಎಸ್‌ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಅಧಿಕಾರಿಗಳು ತಮ್ಮ ಕಚೇರಿ ಅವಧಿಯಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗದೇ, ಜನರ ಪರವಾಗಿ ಕಾರ್ಯನಿರ್ವಹಣೆ ಮಾಡುವಂತೆ ಸಮರ್ಪಕ ನೀತಿ – ನಿರೂಪಣೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಇಂತಹ ತಪ್ಪಿತಸ್ಥ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಡಬೇಕು. ಇವರ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇದೆ. ಆ ಮಟ್ಟಕ್ಕೆ ಹೋಗಲಾಗದಿದ್ದರೂ ಮುಂದೆ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಮಂತ್ರಿಗಳ ಮುಂದೆ ಹೀಗೆ ಬೇಜವಾಬ್ದಾರಿತನ ತೋರಿದವರು ಸಾಮಾನ್ಯ ಜನರ ಮೇಲೆ ಹೇಗೆ ವರ್ತನೆ ಮಾಡಬಹುದು ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ ಎಂದು ಚಲವಾದಿ ನಾರಾಯಣ ಸ್ವಾಮಿ ಹೇಳಿದರು.

ಐಎಎಸ್‌ ಅಧಿಕಾರಿಯ ದೌಲತ್ತಿನ ವಿಡಿಯೊ ಇಲ್ಲಿದೆ

ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು: ಆರ್‌. ಅಶೋಕ್

ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಆರ್.‌ ಅಶೋಕ್‌, ಸರ್ಕಾರ ಹೇಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ. ಸಿಎಂ ಸಿದ್ದರಾಮಯ್ಯ ಕಾಣೆಯಾಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತ್ರವೇ ಕಾಣುತ್ತಿದ್ದಾರೆ. ಸರ್ಕಾರದಿಂದ ವಸೂಲಿ ದಂಧೆಗಳು ನಡೆಯುತ್ತಿವೆ. ಇಂತಹ ವರ್ತನೆ ಕಂಡಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವೇ ಸಿಎಂಗೆ ಕರೆ ಮಾಡಿ ವರದಿ ನೀಡಿ ವರ್ಗಾವಣೆಗೆ ಕ್ರಮ ವಹಿಸಬೇಕು. ಸರ್ಕಾರ ಇಷ್ಟು ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಕ್ಕೆ ಅಧಿಕಾರಿಗಳು ಹೀಗೆ ಮಾಡುತ್ತಿದ್ದಾರೆ. ಮಂತ್ರಿ ಬಿಗಿ ಇದ್ದಿದ್ದರೆ ಅವರು ಭಯ ಬೀಳುತ್ತಿದ್ದರು. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂದೆ ಯಾರೂ ಈ ರೀತಿ ಮಾಡಲು ಮುಂದಾಗಬಾರದು ಎಂಬ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. ಸರ್ಕಾರ ಈಗ ದಂಧೆಯಲ್ಲಿ ತೊಡಗಿಕೊಂಡಿದೆ. ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: CM Siddaramaiah : ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಅಭಿಯಾನ; ಕೇಂದ್ರ‌ – ಮೋದಿ ವಿರುದ್ಧ ಸಿಎಂ ವಾರ್!

ಜನಸಾಮಾನ್ಯರ ಆಗ್ರಹ ಏನು?

ಐಎಎಸ್‌ ಅಧಿಕಾರಿಗಳು ಯಾವುದೇ ಸರ್ಕಾರಿ ಅಧಿಕಾರಿಗಳು ಯಾರಿಗೆ ಉತ್ತರ ಕೊಡಬೇಕು? ಎಂಬುದು ಮೊದಲು ನಿರ್ಧಾರ ಆಗಬೇಕು. ಶಿಸ್ತಿನ ಪರಿದಿಯೊಳಗೆ ಕೆಲಸ ಮಾಡುವಂತೆ ಮಾಡಬೇಕು. ಅಲ್ಲದೆ, ಕಾರ್ಪೋರೇಟ್‌ ಸೇರಿದಂತೆ ಖಾಸಗಿ ಕಂಪನಿಯಲ್ಲಿ ಪ್ರತಿಯೊಂದು ಕೆಲಸಕ್ಕೆ ಹೇಗೆ ಉತ್ತರದಾಯಿತ್ವ ಎಂಬುದು ಇರುತ್ತದೆಯೋ? ಹಾಗೇ ಇಲ್ಲಿಯೂ ಸಹ ಅಧಿಕಾರಿಗಳಿಗೆ ಪ್ರತಿ ದಿನದ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಒಂದು ವರದಿಯನ್ನು ನೀಡುವ ವ್ಯವಸ್ಥೆ ಇರಬೇಕು. ಹೀಗಾದಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂಬ ಅಭಿಪ್ರಾಯವನ್ನು ವಿಸ್ತಾರ ನ್ಯೂಸ್‌ಗೆ ಕರೆ ಮಾಡಿದ ಜನಸಾಮಾನ್ಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version