Site icon Vistara News

Kanakapura Row : ಒಡೆದು ಚೂರು ಮಾಡಲು ರಾಮನಗರವೇನು ಕಲ್ಲು ಬಂಡೆಯೇ?; ಎಚ್ಡಿಕೆ ಆಕ್ರೋಶ

HD Kumaraswamy DK Shivakumar Kanakapura row

ಬೆಂಗಳೂರು: ಕನಕಪುರ ಬೆಂಗಳೂರಿಗೇ ಸೇರಿದ್ದು (Kanakapura Row) ಎಂದು ವಾದಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಇದನ್ನು ವಿರೋಧಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಕಾಮನ್‌ಸೆನ್ಸ್‌ ಇಲ್ಲ ಎಂದಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು, ಅವರಿಗೆ ಇರುವ ಅತಿಬುದ್ಧಿವಂತಿಕೆ ನನಗೆ ಬೇಕಾಗಿಲ್ಲ ಎಂದಿದ್ದಾರೆ. ಜತೆಗೆ ಡಿ.ಕೆ. ಶಿವಕುಮಾರ್‌ ಅವರು ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಬಿಡುವುದಿಲ್ಲ (You cant devide Ramanagara) ಎಂದಿದ್ದಾರೆ.

ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಒಡೆದು ಚೂರು ಮಾಡಲು ರಾಮ ನಗರ ಕಲ್ಲು ಬಂಡೆಯಲ್ಲ

ಡಿಸಿಎಂ ಹೇಳಿಕೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಇದನ್ನು ಡಿ.ಕೆ.ಶಿವಕುಮಾರ್‌ ಅರಿತುಕೊಳ್ಳಬೇಕು. ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ, ಜೋಕೆ. ಒಡೆದು ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಎಂದು ಕಿಡಿಕಾರಿದ್ದಾರೆ.

ಬಡವರ ಹೊಟ್ಟೆ ಮೇಲೆ ಹೊಡೆಯುವ ಬುದ್ಧಿವಂತಿಕೆ ನನಗಿಲ್ಲ!

ಈ‌ ದೇಶಕ್ಕೆ ವಿದ್ಯಾವಂತರು ಅಲ್ಲದಿದ್ದರೂ, ಬುದ್ಧಿವಂತರು ಅಲ್ಲದಿದ್ದರೂ ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರನ್ನು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು” ಎಂದು ದರ್ಪದ ಮಾತು ಹೇಳಿದ್ದಾರೆ ಡಿಸಿಎಂ. ವಿದ್ಯೆ, ಬುದ್ಧಿ ಇಲ್ಲದಿದ್ದರೆ ಪ್ರಜ್ಞಾವಂತರು ಹೇಗಾದಾರು? ಎನ್ನುವ ಸಾಮಾನ್ಯ ಜ್ಞಾನ ಅವರಿಗಿಲ್ಲ. ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಜನಜನಿತ! ಎಂದಿದ್ದಾರೆ ಎಚ್.ಡಿ ಕುಮಾರಸ್ವಾಮಿ.

ಬಡವರ ಹೊಟ್ಟೆ ಮೇಲೆ ಹೊಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಡಿ.ಕೆ.ಶಿ ತಲೆಯಲ್ಲಿ ಏನಿರುತ್ತೆ, ಲೂಟಿ ಮಾಡೋದು ಬಿಟ್ಟು!

“ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ” ಎನ್ನುತ್ತಾರೆ ಡಿಸಿಎಂ. ಇಷ್ಟಕ್ಕೂ ಅವರ ತಲೆಯಲ್ಲಿ ಏನಿದೆ? ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ? ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದೇ? ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ.. ಎಲ್ಲವೂ ನಿಗೂಢ! ಎಂದು ಡಿಕೆಶಿಗೆ ಟಾಂಗ್‌ ಕೊಟ್ಟಿದ್ದಾರೆ ಕುಮಾರಸ್ವಾಮಿ.

ಇರುವ ಸಂಪತ್ತು ಸಾಲದೇ? ಇನ್ನೆಷ್ಟು ಕೂಡಿ ಹಾಕಬೇಕು?

ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ಕೊಪ್ಪಳ, ಗದಗ ಸೇರಿ ಅನೇಕ ಹೊಸ ಜಿಲ್ಲೆಗಳು ರಚನೆ ಆಗಿವೆ. ಅವೆಲ್ಲವನ್ನೂ ಸುಖಾಸುಮ್ಮನೆ ಮಾಡಲಾಯಿತೆ? ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಅಲ್ಲಿ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಯ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ? ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ? ಇನ್ನೆಷ್ಟನ್ನು ಕೂಡಿ ಹಾಕಬೇಕು? ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.

1983ಕ್ಕೆ ಮೊದಲು ಸ್ಥಿತಿ ಹೇಗಿತ್ತು? ಅದನ್ನು ಬದಲಿಸಿದ್ದು ಯಾರು ಗೊತ್ತಾ?

ಕನಕಪುರದ ಅಭಿವೃದ್ಧಿ ಈಗ ನೆನಪಾಗಿದೆಯಾ? 1983ಕ್ಕೆ ಮೊದಲು ಇದೇ ಕನಕಪುರ, ಸಾತನೂರು ಹೇಗಿದ್ದವು? ರಾಮಕೃಷ್ಣ ಹೆಗಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಂದ ದೇವೇಗೌಡರಿಗೆ ಅಲ್ಲಿನ ಸ್ಥಿತಿ ಕಂಡು ಕಣ್ಣೀರು ಬಂತು. ಒಂದು ವಿದ್ಯುತ್‌ ಸಂಪರ್ಕ ಇರಲಿಲ್ಲ, ರಸ್ತೆ-ಚರಂಡಿ ಇರಲಿಲ್ಲ. ಕುಡಿಯಲು ನೀರು ಇರಲಿಲ್ಲ. ಆ ಪರಿಸ್ಥಿತಿಯನ್ನು ದೇವೇಗೌಡರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅಂದು ಲೋಕೋಪಯೋಗಿ, ಬೃಹತ್‌ ನೀರಾವರಿ ಮಂತ್ರಿಗಳಾಗಿದ್ದ ಅವರು ಕನಕಪುರ, ರಾಮನಗರಕ್ಕೆ ಕಾಯಕಲ್ಪ ನೀಡಿದರು, ಆ ದುಸ್ಥಿತಿಯನ್ನು ಬದಲಿಸಿದರು. ಅವರ ಕೆಲಸವನ್ನೇ ನಾನೂ ಮುಂದುವರಿಸಿದೆ. ನೀವೇನು ಮಾಡಿದ್ದೀರಿ ಡಿ.ಕೆ.ಶಿವಕುಮಾರ್‌ ರವರೇ..? ಬಡವರ ಜಮೀನಿಗೆ ಬೇಲಿ ಹಾಕಿದ್ದು, ಅಡ್ಡ ಬಂದವರ ಜೀವ ತೆಗೆದದ್ದು, ಕಲ್ಲುಬಂಡೆಗಳನ್ನು ಲೂಟಿ ಮಾಡಿದ್ದು, ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ? ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ? ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: Kanakapura Row : ನಾನು ಬೆಂಗಳೂರಿಗ, ಏನೀಗ?; ಕನಕಪುರ ಸೇರ್ಪಡೆ ಹೇಳಿಕೆ ಸಮರ್ಥಿಸಿದ ಡಿಕೆಶಿ

ರಿಯಲ್‌ ಎಸ್ಟೇಟ್‌ ಪಾಪಕುಂಡ ಮಾಡಿದ ನಿಮಗೆ ಶ್ರೀಗಳ ಹೆಸರು ಹೇಳುವ ನೈತಿಕತೆ ಇಲ್ಲ

ನಾಡಪ್ರಭು ಕೆಂಪೇಗೌಡರು, ಕೆಂಗಲ್‌ ಹನುಮಂತಯ್ಯನವರು, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ರಾಮನಗರದವರು ಎಂದು ನಿಮಗೆ ಈಗ ಜ್ಞಾನೋದಯ ಆಗಿದೆ. ಇಂಥ ಮಹಾಪುರುಷರು ಜನ್ಮತಳೆದ, ಅವರು ನಡೆದಾಡಿದ ನೆಲವನ್ನು ʼರಿಯಲ್‌ ಎಸ್ಟೇಟ್‌ ಪಾಪಕುಂಡʼವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್?‌ ಈ ಪುಣ್ಯಪರುಷರ ಹೆಸರು ಹೇಳುವ ನೈತಿಕತೆ ನಿಮಗೆ ಇದೆಯಾ? ರಾಮದೇವೇರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚಬಹುದೇ? ಎಂದು ಅವರು ತಿರುಗೇಟು ನೀಡಿದ್ದಾರೆ.

Exit mobile version