Site icon Vistara News

Karnataka Election 2023 : ಪ್ರಚಾರಕ್ಕೆ ಬಂದ ನಿಖಿಲ್‌ಗೆ ಮಹಿಳೆಯರ ತರಾಟೆ; ವಿಡಿಯೋ ವೈರಲ್‌

woman voters Outrage on Nikhil Kumaraswamy at Ramanagara

#image_title

ರಾಮನಗರ‌ : ತಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿಲ್ಲವೆಂದು ಗ್ರಾಮದ ಮಹಿಳೆಯರು ಚುನಾವಣಾ (Karnataka Election 2023) ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ, ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಹಾರೋಹಳ್ಳಿಯ ದೊಡ್ಡಬಾದಿಗೆರೆ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್‌ ಆಗಿದ್ದು, ಗ್ರಾಮಸ್ಥರು ಗ್ರಾಮದಲ್ಲಿನ ಸೌಕರ್ಯಗಳ ಕುರಿತು ಮಾತನಾಡಿದ ಮಹಿಳೆಯರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಡೆದಿದ್ದಾದರೂ ಏನು?

ಜೆಡಿಎಸ್‌ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ಪ್ರಚಾರಕ್ಕಾಗಿ ಕ್ಷೇತ್ರದ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಇತ್ತೀಚೆಗೆ ಹಾರೋಹಳ್ಳಿಯ ದೊಡ್ಡಬಾದಿಗೆರೆ ಗ್ರಾಮಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಅವರನ್ನು ಸ್ವಾಗತಿಸಿದ್ದು, ಊರಿಗೆ ಕರೆದುಕೊಂಡು ಬಂದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಕೆಲ ಮಹಿಳೆಯರು, ಗ್ರಾಮದಲ್ಲಿ ಕುಡಿಯುವ ನೀರಿ ಸರಿಯಾಗಿ ಸರಬರಾಜಾಗುತ್ತಿಲ್ಲ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ನಾವು ಮತ ನೀಡುವುದಿಲ್ಲ, ನೀವು ಮತ ಕೇಳಲು ಬರಲೇ ಬೇಡಿ ಎಂದು ನೇರವಾಗಿ ನಿಖಿಲ್‌ ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ.

ಹಾಲಿ ಶಾಸಕಿ, ನಿಖಿಲ್‌ ಕುಮಾರಸ್ವಾಮಿಯವರ ತಾಯಿ ಅನಿತಾ ಕುಮಾರಸ್ವಾಮಿ ಗ್ರಾಮದ ಅಭಿವೃದ್ಧಿ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದ್ದರೂ ಯೋಜನೆ ಜಾರಿಯಾಗದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಬರುತ್ತೀರಿ, ನಮ್ಮ ಕಷ್ಟ ಕೇಳುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಏನೆಂದು ಉತ್ತರಿಸಲು ಗೊತ್ತಾಗದೆ, ಸುಮ್ಮನೆ ಆ ಮಹಿಳೆಯರ ಮಾತು ಕೇಳುತ್ತಾ ನಿಂತಿದ್ದರು.

ನಂತರ ಈ ಮಹಿಳೆಯರನ್ನು ಪಕ್ಷದ ಕಾರ್ಯಕರ್ತರು ಮತ್ತು ನಿಖಿಲ್‌ ಕುಮಾರಸ್ವಾಮಿ ಸಮಾಧಾನಪಡಿಸಿದ್ದಾರೆ. ಈ ವಿಡಿಯೋವನ್ನು ಗ್ರಾಮದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದು, ಇದು ವೈರಲ್‌ ಆಗಿದೆ.

ಇದನ್ನೂ ಓದಿ : Karnataka Election 2023: ಮತದಾರರಿಗೆ ಸೀರೆ ಹಂಚಿದ ಮುನಿರತ್ನ ಬೆಂಬಲಿಗರು; ಸಚಿವರ ವಿರುದ್ಧ 3ನೇ ಎಫ್‌ಐಆರ್ ದಾಖಲು

Exit mobile version