Site icon Vistara News

ರೈತರ ಕೆಲಸಕ್ಕೆ ಆದ್ಯತೆ ಕೊಡಿ; ದಿಶಾ ಸಭೆಯಲ್ಲಿ ನಾಲ್ವರು ತಹಸೀಲ್ದಾರ್‌ಗೆ ಸಂಸದ ಡಿ.ಕೆ.ಸುರೇಶ್‌ ತರಾಟೆ

ಡಿ ಕೆ ಸುರೇಶ್‌

ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯತ್‌ನಲ್ಲಿ 2022-23ನೇ ಸಾಲಿನ ದಿಶಾ ಸಭೆ ನಡೆಸಲಾಯಿತು. ಈ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ಡಿ.ಕೆ.ಸುರೇಶ್‌ ಜಿಲ್ಲೆಯ ನಾಲ್ವರು ತಹಸೀಲ್ದಾರ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಹೆಚ್ಚು ಜನ ರೇಷ್ಮೆ ಬೆಳೆದು ಬದುಕುತ್ತಿದ್ದು, ಅಂಥವರಿಗೆ ಮೊದಲ ಪ್ರಾಮುಖ್ಯತೆ ನೀಡಬೇಕು. ರೇಷ್ಮೆ ಮನೆ ಕಟ್ಟಲು ಲೋನ್ ಕೊಡಬೇಕಾದರೆ ಖಾತೆ, ಸ್ಥಳದ ಸಮಸ್ಯೆಗಳಿವೆ. ಖಾತೆಗಳ ಅರ್ಜಿ ಸ್ವೀಕಾರದಲ್ಲಿ ವಿಳಂಬ ಮಾಡುತ್ತಿರುವ ಏಕೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲವೆಂದ ತಹಸೀಲ್ದಾರ್‌ಗೆ ತರಾಟೆ ತೆಗೆದುಕೊಂಡ ಸಂಸದ ಸುರೇಶ್‌, ನೀವೊಬ್ಬ ತಹಸೀಲ್ದಾರ್‌ ಆಗಿದ್ದು, ಎಷ್ಟು ಜನ ಅರ್ಜಿ ಕೊಟ್ಟಿದ್ದಾರೆಂಬ ಮಾಹಿತಿ ಇರಬೇಕು ಅಲ್ವಾ? ಸಭೆಯಲ್ಲಿ ಏನೋ ಸುಳ್ಳು ಹೇಳಬೇಕು, ತಪ್ಪಿಸಿಕೊಂಡರೆ ಮತ್ತೆ ಮೂರು ತಿಂಗಳ ನಂತರ ಸಭೆ ಕರೆದಾಗ ನೋಡೋಣ ಎನ್ನುವ ಮನಸ್ಥಿತಿಯಲ್ಲಿ ಇದ್ದೀರಾ? ರೆವಿನ್ಯೂ ಇಲಾಖೆಯಲ್ಲಿ ಪ್ರತಿ ವರ್ಷ ಇಂತಿಷ್ಟು ಖಾತೆಗಳು ಆಗಲೇಬೇಕು ಎಂಬ ಕಾಯ್ದೆ ಇದೆ. ಬೇರೆ ಕೆಲಸಗಳಿಗಿಂತ ರೈತನ ಸ್ವಂತ ಕೆಲಸಗಳು ಬೇಗ ಆಗಬೇಕೆಂದು ಸೂಚಿಸಿದರು.

ಇದನ್ನೂ ಓದಿ | ಕಾಂಗ್ರೆಸ್‌ನಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಸಂಸದ ಡಿ.ಕೆ.ಸುರೇಶ್

ದಿಶಾ ಸಭೆಯಲ್ಲಿ ಪಿಎಸ್ಐ ಹಗರಣದ ಬಗ್ಗೆ ವ್ಯಂಗ್ಯ

ಕೃಷಿ ಇಲಾಖೆಯ ವಿವಿಧ ಯೋಜನೆಗೆ ಆನ್‌ಲೈನ್ ಮೂಲಕ ಮಾಹಿತಿ ತುಂಬುವ ವಿಚಾರ ಪ್ರಸ್ತಾಪದ ವೇಳೆ ಸಂಸದ ಡಿ.ಕೆ. ಸುರೇಶ್‌ ಪಿಎಸ್‌ಐ ಹಗರಣದ ಬಗ್ಗೆ ವ್ಯಂಗ್ಯ ಮಾಡಿದ ಘಟನೆಯು ನಡೆಯಿತು. ಪೊಲೀಸ್‌ ಡಿಪಾರ್ಟ್‌ಮೆಂಟ್‌ ಒಎಂಆರ್ ಶೀಟ್ ಅನ್ನೇ ಬದಲಾವಣೆ ಮಾಡಿರುವಾಗ ಇನ್ನು ಇದು ಯಾವ ಲೆಕ್ಕ ಬಿಡಯ್ಯ ಎಂದಾಗ ಈ ವೇಳೆ ಪಕ್ಕದಲ್ಲೇ ಇದ್ದ ರಾಮನಗರ ಎಸ್ಪಿ ಸಂತೋಷ್ ಬಾಬು ಮುಗುಳ್ನಗೆ ಬೀರಿದರು. ಕಂಪ್ಯೂಟರ್ ಎಲ್ಲ ಮ್ಯಾನ್‌ಮೇಡ್, ನಿನ್ನ ಬುದ್ಧಿಗಿಂತ ಕಂಪ್ಯೂಟರ್‌ನಿಂದ ಏನು ಕೆಲಸ ಆಗಲ್ಲ. ನೀವು ಏನೆಲ್ಲ ಕೆಲಸ ಮಾಡುತ್ತಿರಿ ಅದೆಲ್ಲ ಬೇಡ. ಸಮರ್ಪಕ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.

ಪೂರೈಕೆ ಆಗದ ಬಿತ್ತನೆ ಬೀಜ, ರಸಗೊಬ್ಬರ

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಿಯಾಗಿ ಪೂರೈಕೆ ಆಗುತ್ತಿಲ್ಲವೆಂದು ಅಸಮಧಾನ ಹೊರ ಹಾಕಿದ ಸಂಸದ ಡಿ.ಕೆ ಸುರೇಶ್‌ ಇದು ರೈತರು ಬಿತ್ತನೆ ಮಾಡುವ ಸಮಯವಿದು, ಯಾವುದೇ ಪ್ಯೂಚರ್ ಆ್ಯಕ್ಷನ್‌ ಪ್ಲ್ಯಾನ್‌ ಇಲ್ಲ. ಸವಿಸ್ತಾರವಾದ ವರದಿಯೇ ಇಲ್ಲಅಂಕಿಅಂಶಗಳ ವರದಿ ಕೊಟ್ಟರೆ ಅದನ್ನ ನೋಡಿಕೊಂಡು ಹೋಗಲು ಬಂದಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು.

ರಾಹುಲ್‌ ಗಾಂಧಿ ಆಗಮನದ ಮಾಹಿತಿ ಇಲ್ಲ

ವಿಪಕ್ಷ ನಾಯಕ ಸಿದ್ದರಾಮಯ್ಯರ ಸಿದ್ದರಾಮೋತ್ಸವ ವಿಚಾರವಾಗಿ ಮಾತನಾಡಿದ ಅವರು, 75 ವರ್ಷ ತುಂಬುತ್ತಿರುವ ಹಿನ್ನೆಲೆ ಅಭಿಮಾನಿಗಳು ಸೇರಿದಂತೆ ಕೆಪಿಸಿಸಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ. ಇದಕ್ಕೆ ಕೇಂದ್ರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ  ಸಿದ್ದರಾಮಯ್ಯ ಹಾಗೂ ಅಧ್ಯಕ್ಷರನ್ನೆ ಕೇಳಬೇಕು ಎಂದರು.

ಬಿಜೆಪಿಯಲ್ಲಿ ಸಿಎಂ ಗಿರಿಗಾಗಿ ಕಿತ್ತಾಟ

ಸಿದ್ದರಾಮೋತ್ಸವದ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಉತ್ತರಿಸಿದ ಸುರೇಶ್‌, ಬಿಜೆಪಿ ಹೇಳಿದ್ದನ್ನು ನಾವು ಮಾತನಾಡಲು ಸಾಧ್ಯವೇ? ಬಿಜೆಪಿಯಲ್ಲಿಯೇ ಕಿತ್ತಾಡುವವರ ಸಂಖ್ಯೆ ಹೆಚ್ಚಿಲ್ಲವೇ? ಬಿಜೆಪಿಯಲ್ಲಿ ಮುರಗೇಶ್ ನಿರಾಣಿ‌ ಕಿತ್ತಾಡಿಕೊಂಡು ಸೂಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಇತ್ತ ಸಿಎಂ ಸರದಿಯಲ್ಲಿ ವಿಜಯೇಂದ್ರ ನಾನು ಎಂದರೆ, ಅತ್ತ ಅರವಿಂದ್‌ ಬೆಲ್ಲದ್ ನನಗೆ ಎಂದು ಕೇಳುತ್ತಿದ್ದಾರೆ. ಈ ಮಧ್ಯೆ ಅಶ್ವತ್ಥ್ ನಾರಾಯಣ್ ಸಿಎಂ ಆಗಬೇಕೆಂದು ತುದಿಗಾಲಲ್ಲಿ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಾಗೇ ಆರ್‌.ಅಶೋಕ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರೂ ಇದ್ದಾರೆ. ನಾವು ಚುನಾವಣೆವರೆಗೂ ಕಾಯುತ್ತೇವೆ. ಆಮೇಲೆ ಸಿಎಂ ಯಾರು ಎಂದು ತೀರ್ಮಾನ ಮಾಡುವುದು. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರಿಗೂ ಆಮಂತ್ರಣ ಕೊಡುತ್ತೇವೆ. ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಪಕ್ಷದ ನಾಯಕರಲ್ಲ, ರಾಜ್ಯದ ಸಿಎಂ ಆಗಿ ಸಾಕಷ್ಟು ಸೇವೆ ಮಾಡಿದ್ದಾರೆ. ಯಾರು ಬೇಕಾದರೂ ಕಾರ್ಯಕ್ರಮಕ್ಕೆ ಬರಬಹುದು ಎಂದರು.

ಮಳೆ ಅವಾಂತರ

ಕಳೆದ ಎರಡು ವರ್ಷದಲ್ಲಿ ಆದ ಪ್ರವಾಹದ ಪರಿಹಾರ ಸರಿಯಾಗಿ ಆಗಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ, ಕೇಂದ್ರವು ರಾಜ್ಯದ ಮೇಲೆ ಹೇಳುತ್ತದೆ. ಪ್ರವಾಹ ಪೀಡಿತರಿಗೆ ಇದುವರೆಗೂ ನಷ್ಟ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ರೈತರಿಗೂ ಕೂಡ ಬೆಳೆನಷ್ಟ ಪರಿಹಾರ ತಾರತಮ್ಯವಾಗಿದೆ. 40% ಕಮಿಷನ್‌ನಲ್ಲಿ ಬ್ಯುಸಿಯಾಗಿ ಇರುವವರೆಗೆ ಯಾವುದು ಕೂಡ ಕಣ್ಣಿಗೆ ಕಾಣುವುದಿಲ್ಲ. ಯಾವ ರೀತಿ ಹಣ ಲೂಟಿ ಮಾಡಬಹುದು ಎಂದು ಚಿಂತನೆ ಮಾಡುತ್ತಿದ್ದಾರೆ. ರಾಜ್ಯದ ಜನರ, ರೈತರ ಬಗ್ಗೆ ಕಾಳಜಿ‌ ಇಲ್ಲದ ನಿಷ್ಕ್ರಿಯ ಸರ್ಕಾರ ಇದಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ಬಿಜೆಪಿ ಸರ್ಕಾರದ ಮೇಲೆ ಗರಂ ಆದ ಸಂಸದ ಡಿ.ಕೆ. ಸುರೇಶ್

Exit mobile version