ರಾಮನಗರ: ಗಲಾಟೆ ವಿಚಾರ ದೂರು ನೀಡಲು ಹೋದಾಗ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಅವಮಾನಿಸಿ ಕಳುಹಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ವರ್ತನೆ ಬಗ್ಗೆ ವಿಡಿಯೊ ಮಾಡಿರುವ ಮಹಿಳೆ, ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.
ಚನ್ನಪಟ್ಟಣದ ಕೋಟೆ ನಿವಾಸಿ ಮಾಧುರಿ (31) ಮೃತ ಮಹಿಳೆ. ಕಳೆದ ಗುರುವಾರ ರೈಲ್ವೆ ನಿಲ್ದಾಣ ಬಳಿ ಮೃತ ಮಹಿಳೆ ಹಾಗೂ ಜ್ಯೋತಿ ಎಂಬಾಕೆ ನಡುವೆ ದುಡ್ಡಿನ ವಿಚಾರಕ್ಕೆ ಗಲಾಟೆ ನಡೆದಿದೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಲು ಮಾಧುರಿ ಹೋಗಿದ್ದಳು. ಆದರೆ, ಈ ಹಿಂದೆ ಆಕೆ ಮೇಲೆ ಹಲವು ವಂಚನೆ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.
ಇದನ್ನೂ ಓದಿ | Fraud Case : ಚೀಟಿ ಕಟ್ಟಿಸಿಕೊಂಡು ಕೋಟಿಗಟ್ಟಲೆ ಚೀಟಿಂಗ್ ಮಾಡಿದ ಖತರ್ನಾಕ್ ಫ್ಯಾಮಿಲಿ
ನ್ಯಾಯ ಕೇಳಲು ಹೋದರೆ ಪೊಲೀಸರು ಅವಮಾನ ಮಾಡಿ ಕಳುಹಿಸಿದ್ದಾರೆ ಎಂದು ವಿಡಿಯೊದಲ್ಲಿ ಹೇಳಿರುವ ಮಹಿಳೆ, ನಂತರ ನಿದ್ದೆ ಮಾತ್ರೆ ಸೇವಿಸಿದ್ದಾಳೆ. ನಂತರ ಆಕೆಯನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ಗಲಾಟೆ ವೇಳೆ ಜ್ಯೋತಿ ಎಂಬಾಕೆ ಫೋನ್ ಕಸಿದುಕೊಂಡು ಹೋಗಿದ್ದಳು. ಆ ಬಗ್ಗೆ ಪೊಲೀಸರಿಗೆ ಹೇಳಲು ಹೋಗಿದ್ದರೆ ಪೊಲೀಸರು ನನ್ನ ಮೇಲೆ 10 ಕೇಸ್ ಇವೆ ದೌರ್ಜನ್ಯ ಮಾಡಿದ್ದಾರೆ. ಫೋನ್ ಕೊಡಲು ನಿರಾಕರಿಸಿದ ಪೊಲೀಸರು ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎಂದು ಮೃತ ಮಹಿಳೆ ಆರೋಪಿಸಿದ್ದಾರೆ.
ಚನ್ನಪಟ್ಟಣ ಟೌನ್ ಇನ್ಸ್‌ಪೆಕ್ಟರ್ ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಮಹಿಳೆ ಕಿರುಕುಳ ಆರೋಪ ಮಾಡಿದ್ದು, ತನಗೆ ರಾಮನಗರ ಎಸ್‌ಪಿ ಅವರು ನ್ಯಾಯ ಕೊಡಿಸಬೇಕು ಎಂದು ಸಾವಿಗೆ ಮುನ್ನ ಕೇಳಿಕೊಂಡಿದ್ದಾಳೆ.
ಗ್ಯಾಸ್ ಲಾರಿ-ಓಮ್ನಿ ನಡುವೆ ಅಪಘಾತ; ಸ್ಥಳದಲ್ಲೇ ಚಾಲಕ ಸಾವು
ಚಿತ್ರದುರ್ಗ: ಗ್ಯಾಸ್ ಲಾರಿ ಮತ್ತು ಓಮ್ನಿ ನಡುವೆ ಅಪಘಾತವಾಗಿ ಸ್ಥಳದಲ್ಲೇ ಓಮ್ನಿ ಕಾರು ಚಾಲಕ ಮೃತಪಟ್ಟಿರುವ ಘಟನೆ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಓಮ್ನಿ ಕಾರು ಚಾಲಕ ರಾಮಗಿರಿ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಲಾರಿ ಡಿಕ್ಕಿಯಾಗಿದ್ದರಿಂದ ಅಪಘಾತ ನಡೆದಿದೆ. ಮೃತ ವ್ಯಕ್ತಿ ಚಿತ್ರದುರ್ಗದ ತಮಟುಕಲ್ಲಿನ ನಿವಾಸಿ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.