ರಾಮನಗರ: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ (Channapatna News) ಸಾತನೂರು ಸರ್ಕಲ್ ಬಳಿ ನಡೆದಿದೆ. ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಊಟದ ನಂತರ ಐಸ್ ಕ್ರೀಂ ತಿಂದಿದ್ದ 50ಕ್ಕೂ ಹೆಚ್ಚು ಜನರ ಆರೋಗ್ಯ ವ್ಯತ್ಯಾಸವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಅಸ್ವಸ್ಥರಾಗಿದ್ದು, ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ವಾಂತಿ, ಭೇದಿ ಶುರುವಾಗಿದೆ. ಹೀಗಾಗಿ ಅವರಲ್ಲಿ 40 ಜನರನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ | Fire Accident: ಬೆಂಗಳೂರಿನ ಎಂ.ಜಿ. ರಸ್ತೆಯ ಆಪ್ಟಿಕಲ್ಸ್ ಮಳಿಗೆಯಲ್ಲಿ ಬೆಂಕಿ ಅವಘಡ
ಅವಧಿ ಮುಗಿದಿದ್ದ ಐಸ್ ಕ್ರೀಂ ತಿಂದಿದ್ದೇ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಸ್ವಸ್ಥರ ಕುಟುಂಬಸ್ಥರು ಜಮಾಯಿಸಿದ್ದಾರೆ. ಅಸ್ವಸ್ಥರಿಗೆ ಡ್ರಿಪ್ಸ್ ಹಾಕಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ
ಯಾದಗಿರಿ: ಅಕ್ರಮವಾಗಿ ಗೋಮಾಂಸ ಸಾಗಾಟ (Beef Smuggling) ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ವಾಹನವನ್ನು ತಡೆದು ಹಿಂದುಪರ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಳಿ ಘಟನೆ ನಡೆದಿದೆ.
ಮಾಂಸ ಸಾಗಾಣಿಕೆ ಮಾಡುವ ವಾಹನ ಮಹಾರಾಷ್ಟ್ರ ಮೂಲದ್ದು ಎನ್ನಲಾಗಿದೆ. ಮಹಾರಾಷ್ಟ್ರದಿಂದ ತಾಳಿಕೋಟಿ ಮಾರ್ಗವಾಗಿ ಹೈದ್ರಾಬಾದ್‌ಗೆ ಹೋಗುತ್ತಿದ್ದಾಗ, ಹುಣಸಗಿ ಬಳಿ ನಿಲ್ಲಿಸಲಾಗಿತ್ತು. ಈ ವೇಳೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನ ಬಂದಿತ್ತು. ಕೂಡಲೇ ಸ್ಥಳೀ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಾಂಸ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿ ಇರುವುದು ಯಾವ ಪ್ರಾಣಿಯ ಮಾಂಸ ಎಂಬುದು ಪರಿಶೀಲನೆಗಾಗಿ ಪಶು ಇಲಾಖೆ ವೈದ್ಯರು ಕಲಬುರಗಿಗೆ ಕಳುಹಿಸಿದ್ದಾರೆ.
ಶಿವಾನಂದ ದೊಂಡಿರಾಮ, ಅಕ್ಷಯ್ ಜಾವೀರ್, ಲಖನ್ ಎಂಬುವವರ ಮೇಲೆ ಕೇಸ್ ದಾಖಲಾಗಿದ್ದು, ವಾಹನದ ಚಾಲಕ ಶಿವಾನಂದ ದೊಂಡಿರಾಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಖನ್ ಜಾವೀರ್, ಅಕ್ಷಯ್ ಜಾವೀರ್ ಇಬ್ಬರು ಪರಾರಿಯಾಗಿದ್ದಾರೆ. ರಾಮಸೇನಾ ಜಿಲ್ಲಾಧ್ಯಕ್ಷ ಶರಣಕುಮಾರ ನಾಯಕ ಅವರಿಂದ ದೂರಿನ ಮೇರೆಗೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.