ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು (Ram Mandir) ಬಿಜೆಪಿ ಹೇಳಿದಂತೆ ನಿರ್ಮಾಣ ಮಾಡುತ್ತಿದೆ. ಈಗ ದಕ್ಷಿಣ ಭಾರತದಲ್ಲಿ ಅಯೋಧ್ಯೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ರಾಜ್ಯ ಚುನಾವಣೆ (Karnataka Election 2023) ಮೇಲೆ ಕಣ್ಣಿಟ್ಟಿದೆ. ಇದರ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.೧೭ರಂದು ಮಂಡಿಸಿದ ಬಜೆಟ್‌ನಲ್ಲಿಯೂ ರಾಮನಗರದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗುವ ಮೊದಲು ಅಂದರೆ ಮಾರ್ಚ್ನಲ್ಲಿಯೇ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಭೂಮಿ ಪೂಜೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಬರುವುದು ಸಹ ಬಹುತೇಕ ಅಂತಿಮಗೊಂಡಿದೆ ಎಂದೇ ಹೇಳಲಾಗುತ್ತಿದೆ.
ಈ ಮೂಲಕ ನೀತಿ ಸಂಹಿತೆ ಜಾರಿ ಮೊದಲೇ ರಾಮಾಸ್ತ್ರವನ್ನು ಪ್ರಯೋಗ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಮೊದಲಿನಿಂದಲೂ ಹಿಂದುತ್ವದ ಅಡಿಯಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಬಿಜೆಪಿಯು ಈಗ ರಾಮ ಮಂದಿರವನ್ನು ನಿರ್ಮಾಣ ಮಾಡುವ ಮೂಲಕ ಮತ್ತಷ್ಟು ಹಿಂದುಗಳ ಮತ ಕ್ರೋಢೀಕರಣಕ್ಕೆ ಮುಂದಾಗುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Ram Mandir: ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿಲ್ಲ; ಇದು ಚುನಾವಣಾ ಗಿಮಿಕ್ ಅಷ್ಟೇ: ಎಚ್.ಡಿ. ಕುಮಾರಸ್ವಾಮಿ
ಹಳೇ ಮೈಸೂರು ಭಾಗದಲ್ಲಿ ಗೆಲ್ಲಲು ಅಯೋಧ್ಯೆಯ ಅಸ್ತ್ರವನ್ನು ಉಪಯೋಗಿಸಲಾಗುತ್ತಿದೆ. ಮಾರ್ಚ್‌ನಲ್ಲೇ ಶಂಕುಸ್ಥಾಪನೆ ನೆರವೇರಿಸಲು ಮೆಗಾ ಪ್ಲ್ಯಾನ್ ಮಾಡಿಕೊಂಡಿದ್ದು, ಇದಕ್ಕೆ ಉತ್ತರ ಪ್ರದೇಶ ಯೋಗಿ ಆದಿತ್ಯ ನಾಥ್ ಅವರನ್ನು ಕರೆಸಲೂ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬರುವ ಕೆಲವೇ ದಿನಗಳಲ್ಲಿ ಮಂದಿರ ನಿರ್ಮಾಣಕ್ಕಾಗಿ ಅನುದಾನವನ್ನೂ ಬಿಡುಗಡೆ ಮಾಡುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ರಾಮಮಂದಿರ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ. ಡಿಪಿಎಆರ್‌ನಿಂದ ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಸರ್ವೆ ಕಾರ್ಯವೂ ನಡೆಯುತ್ತಿದೆ. ಶಂಕುಸ್ಥಾಪನೆಗೆ ಬೇಕಾದ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಹಿಂದುತ್ವದ ಮೂಲಕ ಕಾಂಗ್ರೆಸ್-ಜೆಡಿಎಸ್‌ಗೆ ಠಕ್ಕರ್
ಹಳೇ ಮೈಸೂರು ಭಾಗ ಇಲ್ಲಿಯವರೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಭದ್ರಕೋಟೆ ಆಗಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಬಿಜೆಪಿ ತನ್ನ ಖಾತೆಯನ್ನು ತೆರೆದುಕೊಳ್ಳುತ್ತಿದೆ. ಆದರೆ, ಈಗ ಶತಾಯಗತಾಯ ಅಧಿಕಾರವನ್ನು ಹಿಡಿಯಲೇಬೇಕೆಂಬ ನಿಟ್ಟಿನಲ್ಲಿ ತಂತ್ರಗಾರಿಕೆ ಹೂಡಿರುವ ಬಿಜೆಪಿಯು ಈ ಭಾಗವನ್ನು ಟಾರ್ಗೆಟ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಹಿಂದುತ್ವದ ಅಜೆಂಡಾವನ್ನು ಜನರ ಮುಂದಿಡಲು ಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ. ಈ ಮೂಲಕ ಕಾಂಗ್ರೆಸ್‌ಗೂ ಇಲ್ಲಿಂದಲೇ ತಿರುಗೇಟು ಕೊಡಲು ತಯಾರಿ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: PM Modi: ಮೋದಿ ಜತೆಯೇ ಕೆಲಸ ಮಾಡುವೆ; ನಾನು ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಪ್ರಲ್ಹಾದ್ ಜೋಶಿ
ಅಯೋಧ್ಯೆಯಿಂದ ಮೃತ್ತಿಕೆ ತರಲು ಪ್ಲ್ಯಾನ್
ಉತ್ತರ ಪ್ರದೇಶದ ಅಯೋಧ್ಯೆಯಿಂದ ಮೃತ್ತಿಕೆ ತಂದು, ರಾಮದೇವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಿದ್ಧತೆ ಮಾಡಿಕೊಳ್ಳು ತಯಾರಿಯಲ್ಲಿರುವ ಬಿಜೆಪಿಯು ಇದಕ್ಕಾಗಿಯೇ ಹಿಂದುತ್ವದ ಫೈರ್‌ಬ್ಯ್ರಾಂಡ್ ಖ್ಯಾತಿಯ ಯೋಗಿ ಆದಿತ್ಯ ನಾಥ್ ಅವರನ್ನೇ ಕರೆಸಲು ತೀರ್ಮಾನಿಸಿದೆ. ಆದರೆ, ಹಳೆ ಮೈಸೂರು ಭಾಗದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣದ ಬಿಜೆಪಿ ಅಸ್ತ್ರ ಯಶಸ್ವಿ ಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ, ಇದು ಒಂದು ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಕಂಗೆಡಿಸಿದೆ ಎಂದೂ ಹೇಳಲಾಗುತ್ತಿದೆ.